8ನೇ ತರಗತಿಯಲ್ಲಿ ಕಾಪಿ ಹೊಡೆದು ಸಿಕ್ಕಿಬಿದ್ದಿದ್ದ ಸೆಕ್ಯೂರಿಟಿ ಗಾರ್ಡ್ ಮಗ, ಇಂದು CA ಪರೀಕ್ಷೆಯಲ್ಲಿ AIR 25ನೇ ರ್‍ಯಾಂಕ್
ಜೀವನದಲ್ಲಿ ಎಷ್ಟೇ ಬಡತನ, ಅಥವಾ ಎಂತಹದ್ದೇ ಕಠಿಣ ಪರಿಸ್ಥಿತಿಯಿದ್ದರೂ ಸಾಧಿಸಿಬೇಕು ಎನ್ನುವ ದೃಢಮನಸ್ಸಿದ್ದರೆ ಸಾಕು ಎನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಅಮಾನ್ ಕಾರ್ನ್ ಎನ್ನುವ ಹುಡುಗನೇ ಒಂದು ಒಳ್ಳೆಯ ಉದಾಹರಣೆ. ಒಂದು ಚಿಕ್ಕ ಅದರಲ್ಲೂ ಕೇವಲ ಒಂದು ಕೊಠಡಿ ಇರುವ ಬಾಡಿಗೆ ಮನೆಯಲ್ಲಿ ಈ ಹುಡುಗ ತನ್ನ ಬಾಲ್ಯವನ್ನಾ ಕಳೆದಿರುತ್ತಾನೆ. ದಿನನಿತ್ಯದ ಖರ್ಚುಗಳನ್ನಾ ಸೇರಿದಂತೆ, ಪ್ರತಿಯೊಂದು ರೂಪಾಯಿಗೂ ಲೆಕ್ಕಾಚಾರ ಹಾಕಬೇಕಾದ ಪರಿಸ್ಥಿತಿ. ಇವರ ಕುಟುಂಬ ಅಷ್ಟು ಕಡು ಬಡವರಾಗಿದ್ದರು.
ಅಮಾನ್ ಅವರ ತಂದೆ ವೃತ್ತಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ತಮ್ಮ ಮಗನ ಶಾಲೆಯ ಶುಲ್ಕವನ್ನ ಕಟ್ಟಲು ಅವರು ತಿಂಗಳುಗಟ್ಟಲೆ ಪರದಾಡುತ್ತಿದ್ದರು. ಆದರೆ, ಎಷ್ಟೇ ಕಷ್ಟ ಬಂದರೂ ಮಗನ ಶಿಕ್ಷಣದ ವಿಚಾರದಲ್ಲಿ ಅವರು ಎಂದಿಗೂ ಹಿಂದೆ ಸರಿಯಲಿಲ್ಲ. ತಮ್ಮ ಮಗ ಚೆನ್ನಾಗಿ ಓದಿ ಸಮಾಜದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂಬುದು ಆ ತಂದೆಯ ಒಂದು ದೊಡ್ಡ ಕನಸಾಗಿತ್ತು.

8ನೇ ತರಗತಿಯ ಆ ಒಂದು ಘಟನೆ
ನಾವು ಕೆಲವೊಮ್ಮೆ ಜೀವನದಲ್ಲಿ ಮಾಡುವ ಒಂದು ಸಣ್ಣ ಪುಟ್ಟ ತಪ್ಪು ನಮ್ಮ ಇಡೀ ಭವಿಷ್ಯವನ್ನೇ ಬದಲಾಯಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅಮಾನ್ ಕರ್ನ್ ಅವರ ಬದುಕಿನಲ್ಲೂ ಅಂಥದ್ದೇ ಒಂದು ಘಟನೆ ನಡೆದಿತ್ತು. ಅಮಾನ್ 8ನೇ ತರಗತಿಯಲ್ಲಿದ್ದಾಗ, ಶಾಲೆಯ ಪರೀಕ್ಷೆಯೊಂದರಲ್ಲಿ ಕಾಪಿ ಹೊಡೆಯುತ್ತಿರುವಾಗ ಶಿಕ್ಷಕರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಆಗ ಶಿಕ್ಷಕರು ಅಮಾನ್ ಅವರ ತಂದೆಯನ್ನು ಶಾಲೆಗೆ ಕರೆಸಿ, ಅವರ ಮುಂದೆಯೇ ಕಾಪಿ ಮಾಡಿದ ಆ ಉತ್ತರ ಪತ್ರಿಕೆಯನ್ನು ಇಟ್ಟಿದ್ದರು. ತಮ್ಮ ಮಗನ ಈ ಕೆಲಸ ನೋಡಿ ನಿಜಕ್ಕೂ ಆ ತಂದೆಗೆ ಬೇಸರವಾಗಿತ್ತು. ದುಃಖ ತಡೆಯಲಾಗದೆ ಶಿಕ್ಷಕರ ಮುಂದೆಯೇ ಬಿಕ್ಕಿ ಬಿಕ್ಕಿ ಅತ್ತಿದ್ದರು. ಅಂದು ತಂದೆಯ ಕಣ್ಣಿನಿಂದ ಸುರಿದ ಆ ಕಣ್ಣೀರು ಅಮಾನ್ ಅವರ ಎದೆಗೆ ನಾಟಿತ್ತು. ಆ ಕ್ಷಣವೇ ಅಮಾನ್ ತಾವು ಬದಲಾಗಬೇಕು ಎನ್ನುವ ಮಹತ್ವದ ನಿರ್ಧಾರವನ್ನ ತೆಗೆದುಕೊಂಡರು.
ಆ ಘಟನೆಯ ನಂತರ ಅಮಾನ್ ತಮ್ಮ ಸಂಪೂರ್ಣ ಗಮನವನ್ನ ಕೇವಲ ಓದಿನ ಕಡೆಗೆ ಹರಿಸಿದರು. ಶಾಲೆಯಲ್ಲಿ ನಡೆದ ಆ ಅವಮಾನ ಮತ್ತು ತಂದೆಯ ಕಣ್ಣೀರೇ ಅವರಿಗೆ ಅತಿದೊಡ್ಡ ಪ್ರೇರಣೆಯಾಯಿತು. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಅಮಾನ್, ಹಗಲಿರುಳು ಕಷ್ಟಪಟ್ಟು ಓದಿ ಶಾಲೆಯಲ್ಲೇ ಅತಿ ಹೆಚ್ಚು ಅಂಕ ಪಡೆದು ಟಾಪರ್ ಆಗಿ ಹೊರಹೊಮ್ಮಿದರು. ಅವರ ಈ ಅದ್ಭುತ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಅವರಿಗೆ ಉನ್ನತ ವ್ಯಾಸಂಗಕ್ಕಾಗಿ ಶಿಕ್ಷಣದ ಪ್ರಾಯೋಜಕತ್ವ ಕೂಡ ಸಿಕ್ಕಿತು.
ತಮ್ಮ ನಿರಂತರ ಪರಿಶ್ರಮದ ಫಲವಾಗಿ, ದೇಶದ ಅತ್ಯಂತ ಪ್ರತಿಷ್ಠಿತ ಕಾಮರ್ಸ್ ಕಾಲೇಜುಗಳಲ್ಲಿ ಒಂದಾದ ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ನಲ್ಲಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದರು. ಕೇವಲ ಓದು ಮಾತ್ರವಲ್ಲದೆ, ತಮ್ಮ ಪದವಿಯ ಮೂರನೇ ವರ್ಷದಲ್ಲಿರುವಾಗಲೇ ದೇಶದ ಪ್ರಮುಖ ಕಂಪನಿಯೊಂದರಲ್ಲಿ ಉತ್ತಮ ಉದ್ಯೋಗವನ್ನು ಸಹ ಪಡೆದುಕೊಂಡರು.
ಸಿಎ ಫೈನಲ್ ಪರೀಕ್ಷೆಯಲ್ಲಿ ಆಲ್ ಇಂಡಿಯಾ 25ನೇ ರ್‍ಯಾಂಕ್
ಅಮಾನ್ ಕರ್ನ್ ಅವರು ಕೇವಲ ಒಂದು ಉದ್ಯೋಗಕ್ಕೆ ಸೀಮಿತವಾಗಲಿಲ್ಲ. ಅವರು ಕಾಮರ್ಸ್ ಕ್ಷೇತ್ರದ ಅತ್ಯಂತ ಕಠಿಣವಾದ ಚಾರ್ಟರ್ಡ್ ಅಕೌಂಟೆನ್ಸಿ ಪರೀಕ್ಷೆಯನ್ನು ಎದುರಿಸಲು ಸಿದ್ಧರಾದರು. ಕಠಿಣ ಅಭ್ಯಾಸದ ನಂತರ ಸಿಎ ಫೈನಲ್ ಪರೀಕ್ಷೆಯನ್ನು ಬರೆದ ಅಮಾನ್, ಆಲ್ ಇಂಡಿಯಾ ಮಟ್ಟದಲ್ಲಿ 25ನೇ ರ್‍ಯಾಂಕ್ ಪಡೆಯುವ ಮೂಲಕ ಇಡೀ ದೇಶವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದರು. ಒಂದು ಕಾಲದಲ್ಲಿ ಸಣ್ಣ ಬಾಡಿಗೆ ಮನೆಯಲ್ಲಿ ಕಷ್ಟಪಟ್ಟು ಓದುತ್ತಿದ್ದ ಇದೇ ಹುಡುಗ, ಇಂದು ತನ್ನ ಸ್ವಂತ ದುಡಿಮೆಯಿಂದ ತನ್ನ ಹೆತ್ತವರಿಗಾಗಿ ಒಂದು ಸುಂದರವಾದ ಸ್ವಂತ ಮನೆಯನ್ನು ಖರೀದಿಸಿದ್ದಾನೆ. ತಂದೆಯ ಕಣ್ಣೀರನ್ನು ಒರೆಸಿ, ಅವರ ಮುಖದಲ್ಲಿ ಹೆಮ್ಮೆಯ ನಗು ಮೂಡುವಂತೆ ಮಾಡಿದ್ದಾನೆ.
ಒಂದು ತಪ್ಪು ಭವಿಷ್ಯವನ್ನು ನಿರ್ಧರಿಸುವುದಿಲ್ಲ
ಅಮಾನ್ ಕರ್ನ್ ಅವರ ಈ ಯಶಸ್ಸು ಇಂದಿನ ಯುವಜನತೆಗೆ ಒಂದು ಪಾಠ. "ನಮ್ಮ ಜೀವನದಲ್ಲಿ ನಾವು ಮಾಡುವ ಒಂದು ತಪ್ಪು ಅಥವಾ ನಮ್ಮ ಬಡತನ ಎಂದಿಗೂ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಬದಲಾಗಿ, ಆ ತಪ್ಪಿನಿಂದ ಪಾಠ ಕಲಿತು ಮೇಲೆದ್ದು ಬರುವ ನಮ್ಮ ನಿರ್ಧಾರವು ನಮ್ಮ ಭವಿಷ್ಯವನ್ನು ಬರೆಯುತ್ತದೆ" ಎಂಬುದನ್ನು ಅಮಾನ್ ಸಾಬೀತುಪಡಿಸಿದ್ದಾರೆ.


Click it and Unblock the Notifications
