ವೈರಲ್ ಆಯ್ತು ಕಚೇರಿ ಸಭೆಗಳ ಬಗ್ಗೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮಹಿಳೆಯ ಮಾತು
ಸಾಮಾನ್ಯವಾಗಿ ವಿದೇಶದಲ್ಲಿ ವೃತ್ತಿಜೀವನವನ್ನು ಆರಂಭಿಸುವ ಪ್ರತಿಯೊಬ್ಬ ಭಾರತೀಯನಿಗೂ ತನ್ನದೇ ಆದ ಸವಾಲುಗಳಿರುತ್ತವೆ. ಹಾಗೆಯೇ ಅಮೆರಿಕದ ಕಾರ್ಪೊರೇಟ್ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿರುವ ಹರಿಣಿ ಎಂಬ ಭಾರತೀಯ ಯುವತಿ ತಮ್ಮ ಸಹೋದ್ಯೋಗಿಗಳಿಂದ ಕಲಿತ ಕೆಲಸದ ಪಾಠವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಅಮೆರಿಕದಲ್ಲಿನ ತಮ್ಮ ಇಡೀ ಕಚೇರಿಯಲ್ಲಿ ತಾನೊಬ್ಬಳೇ ಭಾರತೀಯಳಾಗಿರುವುದಾಗಿ ತಿಳಿಸಿರುವ ಅರಿಣಿ, ವೃತ್ತಿಜೀವನದಲ್ಲಿ ಬೆಳೆಯಲು ಆತ್ಮವಿಶ್ವಾಸ ಮತ್ತು ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಎಷ್ಟು ಮುಖ್ಯ ಎಂಬುದನ್ನು ವಿವರಿಸಿದ್ದಾರೆ. ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಅಮೆರಿಕದಲ್ಲಿರುವ ಭಾರತೀಯ ಮಹಿಳೆ ಮಹತ್ವದ ಮಾಹಿತಿ
ಹರಿಣಿ ತಿಳಿಸುವಂತೆ ಆರಂಭದ ದಿನಗಳಲ್ಲಿ ತಮ್ಮ ಅಮೆರಿಕನ್ ಸಹದ್ಯೋಗಿಗಳಿಗೆ ತಮಗಿಂತ ಹೆಚ್ಚಿನ ವಿಷಯಗಳು ತಿಳಿದಿವೆ ಎಂದು ಅವರು ಭಾವಿಸಿದ್ದರು. ಆದರೆ ದಿನ ಕಳೆದಂತೆ ಅವರಿಗೆ ತಿಳಿದ ವಿಷಯ ಏನೆಂದರೆ, ಇದು ಕೇವಲ ಜ್ಞಾನದ ವ್ಯತ್ಯಾಸವಾಗಿರಲಿಲ್ಲ. ಬದಲಿಗೆ ಎಲ್ಲ ಪ್ರಶ್ನೆಗಳಿಗೂ ಉತ್ತರ ತಿಳಿದಿಲ್ಲದಿದ್ದರೂ ಸಹ ಮುಕ್ತವಾಗಿ ಮಾತನಾಡುವ ಮತ್ತು ತಮ್ಮ ವಿಚಾರಗಳನ್ನು ಹಂಚಿಕೊಳ್ಳುವ ಧೈರ್ಯ ಹಾಗೂ ಹಿಂಜರಿಕೆಯಿಲ್ಲದ ಸ್ವಭಾವವೇ ಆಗಿತ್ತು.
'ಭಾರತದಲ್ಲಿ ಬೆಳೆಯುವಾಗ ಯಾವುದೇ ವಿಷಯದ ಬಗ್ಗೆ 100% ಖಾತ್ರಿ ಇರದೆ ಅಥವಾ ಸರಿಯಾಗಿ ಯೋಚಿಸದೆ ಮಾತನಾಡಬಾರದು ಎಂಬ ಮನಸ್ಥಿತಿಯನ್ನು ಕಲಿಸಲಾಗುತ್ತದೆ,' ಎಂದು ಹೇಳಿದ್ದಾರೆ. ಈ ರೀತಿಯ ಆಲೋಚನೆ ಶಾಲಾ-ಕಾಲೇಜುಗಳಲ್ಲಿ ಅಥವಾ ಶಿಕ್ಷಣ ಪಡೆಯುವಾಗ ಸಹಾಯ ಮಾಡಿರಬಹುದು. ಆದರೆ ಕಾರ್ಪೊರೇಟ್ ವೃತ್ತಿಪರ ಜಗತ್ತಿನಲ್ಲಿ ಈ ಹಿಂಜರಿಕೆ ವ್ಯಕ್ತಿಯನ್ನು ಹಿನ್ನಡೆಗೆ ತಳ್ಳುತ್ತದೆ.
ಕಚೇರಿಯ ಸಭೆಗಳಲ್ಲಿ ಶೇಕಡ 90ರಷ್ಟು ಜ್ಞಾನವಿದ್ದು, ಪರಿಪೂರ್ಣತೆಗೆ ಕಾಯುತ್ತಾ ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಗಿಂತ, ಶೇಕಡ 60% ಜ್ಞಾನವಿದ್ದರೂ ಧೈರ್ಯವಾಗಿ ವಿಚಾರಗಳನ್ನು ವ್ಯಕ್ತಪಡಿಸುವ ವ್ಯಕ್ತಿಯ ಮಾತಿಗೆ ಹೆಚ್ಚಿನ ಆದ್ಯತೆ ಸಿಗುತ್ತದೆ. ನೀವು ಮನಸ್ಸಿನಲ್ಲೇ ಉಳಿಸಿಕೊಂಡ ಆಲೋಚನೆಗಳಿಗೆ ಕಚೇರಿಯಲ್ಲಿ ಎಂದಿಗೂ ಬೆಲೆ ಇರುವುದಿಲ್ಲ.
'ಆತ್ಮವಿಶ್ವಾಸ ಹುಟ್ಟಿನಿಂದ ಬರುವುದಲ್ಲ'
ಹರಿಣಿ ಅವರ ಪ್ರಕಾರ, ಆತ್ಮವಿಶ್ವಾಸ ಎಂಬುದು ಹುಟ್ಟಿನಿಂದಲೇ ಬರುವ ಗುಣವಲ್ಲ. ಅದು ಅಭ್ಯಾಸದ ಮೂಲಕ ಕಲಿಯಬಹುದಾದ ಒಂದು ಪ್ರಮುಖ ಕೌಶಲ ಆಗಿದೆ. ನಾವು ಎಲ್ಲವನ್ನೂ ಪರಿಪೂರ್ಣವಾಗಿ ಕಲಿಯಲು ಕಾಯುತ್ತಿರುವಾಗ, ಮತ್ತೊಬ್ಬರು ಚರ್ಚೆಯನ್ನು ಮುನ್ನಡೆಸಿಕೊಂಡು ಹೋಗಿರುತ್ತಾರೆ. ಆದ್ದರಿಂದ ಎಲ್ಲವೂ ತಿಳಿಯುವವರೆಗೂ ಕಾಯದೆ ಸಭೆಗಳಲ್ಲಿ ನಮ್ಮ ಧ್ವನಿಯನ್ನು ಎತ್ತುವುದು ಮುಖ್ಯ ಎಂದು ಅವರು ಸಲಹೆ ನೀಡಿದ್ದಾರೆ.
ನೆಟ್ಟಿಗರು ಹೇಳೋದೇನು?
ಹರಿಣಿ ಹಂಚಿಕೊಂಡ ಈ ವಿಡಿಯೋಗೆ ನೆಟ್ಟಿಗರಿಂದ ಅಪಾರ ಬೆಂಬಲ ವ್ಯಕ್ತವಾಗಿದೆ. ಹಲವರು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಾ, 'ಭಾರತದಲ್ಲಿ ಬೆಳೆದ ನಮಗೆ ಚಿಕ್ಕಂದಿನಿಂದಲೇ ಮುಕ್ತವಾಗಿ ಮಾತನಾಡಲು ಹೆಚ್ಚು ಪ್ರೋತ್ಸಾಹ ಸಿಗುವುದಿಲ್ಲ. ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ವೃತ್ತಿಜೀವನದಲ್ಲಿ ಮುನ್ನಡೆಯಲು ಮುಕ್ತವಾಗಿ ಮಾತನಾಡುವುದು ಅತ್ಯಗತ್ಯ,' ಎಂದು ಹೇಳಿದ್ದಾರೆ. ಇನ್ನೂ ಕೆಲವರು 'ಆತ್ಮವಿಶ್ವಾಸ ಎಂಬುದು ಕಲಿಯಬಹುದಾದ ಕೌಶಲ ಎಂಬ ಮಾತು ಸಂಪೂರ್ಣವಾಗಿ ಸತ್ಯ,' ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಭಾರತೀಯ ಮಹಿಳೆಯ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.


Click it and Unblock the Notifications
