Train Toilet: ರೈಲಿನಲ್ಲಿ ಶೌಚಾಲಯದ ದುರ್ವಾಸನೆ ತಪ್ಪಿಸಲು ತಂತ್ರಜ್ಞಾನ ಮೊರೆ ಹೋದ ರೈಲ್ವೆ: ಏನಿದು? ತಿಳಿಯಿರಿ
ಬೆಂಗಳೂರು, ಏಪ್ರಿಲ್ 16: ದೇಶದ ಜನರಿಗೆ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸಾರಿಗೆ ಸೇವೆ ನೀಡುತ್ತಿರುವ ಭಾರತೀಯ ರೈಲ್ವೆ ಇಲಾಖೆಯು ಅಗತ್ಯ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿದೆ. ಪ್ರಯಾಣಿಕರಿಗೆ ಉಂಟಾಗುವ ತೊಂದರೆ, ಕಿರಿ ಕಿರಿ ತಪ್ಪಿಸಲು ತಂತ್ರಜ್ಞಾನದ ಮೊರೆ ಹೋಗಲು ನಿರ್ಧರಿಸಿದೆ.
ಇತ್ತೀಚಿನ ಕೆಲ ವರ್ಷಗಳಿಂದ, ದೇಶದ ರೈಲುಗಳು, ರೈಲ್ವೆ ನಿಲ್ದಾಣಗಳು ಅಧುನಿಕರಣಗೊಳ್ಳುತ್ತಿವೆ. ಸುಧಾರಿತ ವ್ಯವಸ್ಥೆ, ಮೂಲಸೌಕರ್ಯ ಅಭಿವೃದ್ಧಿ ಹೊಂದುತ್ತಿವೆ. ಈ ನಿಟ್ಟಿನಲ್ಲಿ ಭಾರತೀಯ ರೈಲ್ವೇ ಹಲವು ಮಹತ್ವದ ಕ್ರಮಗಳನ್ನು ವಹಿಸಿದೆ.

ಹೀಗಿದ್ದರೂ ಸಹ ರೈಲಿನಲ್ಲಿ ನಿತ್ಯ ಪ್ರಯಾಣಿಸುವ ಸಾರ್ವಜನಿಕರಿಗೆ ಕೆಲವು ಕಿರಿ ಕಿರಿ ಉಂಟಾಗುತ್ತಿದೆ. ಕೊಳಕು ಶೌಚಾಲಯಗಳು, ಗಬ್ಬು ವಾಸನೆ ಪ್ರಯಾಣಿಕರನ್ನು ಹೈರಾಣಿಸುತ್ತಿದೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತೀಯ ರೈಲ್ವೇ ತಂತ್ರಜ್ಞಾನದತತ ಮುಖ ಮಾಡಿದೆ. ಈ ಕೊಳಕು ಶೌಚಾಲಯ ಇನ್ನಿತರ ಕಾರಣಗಳಿಂದ ಪ್ರಯಾಣಿಕರಿಂದ ವಾಡಿಕೆಯಂತೆ ಅನೇಕ ದೂರುಗಳು ಸಲ್ಲಿಕೆ ಆಗಿವೆ.
ದುರ್ವಾಸನೆ ತಪ್ಪಿಸಲಿದೆ ತಂತ್ರಜ್ಞಾನ
ಡಿಟೆಕ್ಟರ್‌ಗಳ ಮೂಲಕ ದುರ್ವಾಸನೆ ಬರಿಸಲು ತಂತ್ರಜ್ಞಾನ ಬಳಸಲು ರೈಲ್ವೆ ನಿರ್ಧರಿಸಿದೆ. ಇದು ಐಒಟಿ ಆಧಾರಿತ ತಂತ್ರಜ್ಞಾನದ ಅಳವಡಿಕೆ ಚಿಂತನೆ ನಡೆಸಿದ್ದಾಗೆ ರೈಲ್ವೆ ಮಂಡಳಿ ತಿಳಿಸಿದೆ. ಮುಂಬೈ ಮೂಲದ ಸ್ಟಾರ್ಟಪ್ ವಿಲಿಸೊ ಟೆಕ್ನಾಲಜೀಸ್ ಈ ಯೋಜನೆಗಾಗಿ ರೈಲ್ವೆ ಇಲಾಖೆ ಜತೆ ಕೈ ಜೋಡಿಸಲಿದೆ. ಸದ್ಯ ಇದೆಲ್ಲವು ಇನ್ನೂ ಪರೀಕ್ಷಾ ಹಂತದಲ್ಲಿವೆ. ಬಳಿಕ ಬೋಗಿವರೆಗೂ ಈ ತಂತ್ರಜ್ಞಾನ ಬರಲಿದೆ.

ಏನಿದು ತಂತ್ರಜ್ಞಾನ? ಇದರ ಕಾರ್ಯವೇನು?
ರೈಲಿನ ಶೌಚಾಲಯಗಳಿಂದ ದುರ್ವಾಸಣೆ ಬೀರುತ್ತಿರುತ್ತದೆ. ಈ ದುರ್ವಾಸನೆಗಳನ್ನು ಗುರುತಿಸಲು ಸಂವೇದಕಗಳನ್ನು ಬಳಸುವ ಸ್ಮಾರ್ಟ್ ವ್ಯವಸ್ಥೆಯ ತಂತ್ರಜ್ಞಾನ ಇದಾಗಿದೆ. ಈ ಸಂವೇದಕಗಳು ಗಾಳಿಯಲ್ಲಿರುವ ಬಾಷ್ಪಶೀಲ ಸಂಯುಕ್ತಗಳು ಮತ್ತು ಅಣುಗಳನ್ನು ಎತ್ತಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.
ಈ ಟಾಯ್ಲೆಟ್ ಸ್ಥಿತಿಗತಿಯನ್ನು ಹಬ್‌ಗೆ (ಕೇಂದ್ರ) ರವಾನಿಸಲಾಗುತ್ತದೆ. ಹಬ್ ಈ ಮಾಹಿತಿಯನ್ನು ವಿಶ್ಲೇಷಿಸುತ್ತದೆ. ಅಲ್ಲಿಂದಲೇ ಸ್ವಯಂ ಪ್ರೇರಿತವಾಗಿ ಪ್ರತಿಕ್ರಿಯೆ ನೀಡುತ್ತದೆ. ಇದರಿಂದ ಸ್ವಯಂಚಾಲಿತವಾಗಿ ದುರ್ವಾಸನೆ ತಡೆಯಲು ಬಹುದು. ಇಲ್ಲವೇ ದುರ್ವಾಸನೆಯ ಬಗ್ಗೆ ನೈರ್ಮಲ್ಯ ಕಾಪಾಡುವಂತೆ ರೈಲ್ವೆ ಸಿಬ್ಬಂದಿಗೆ ಎಚ್ಚರಿಕೆ ನೀಡಬಹುದಾದ ತಂತ್ರಜ್ಞಾನ ಇದಾಗಿದೆ.
ಈ ತಂತ್ರಜ್ಞಾನವನ್ನು ಆ ಕಂಪನಿ ಮತ್ತು ರೈಲ್ವೆ ಸಿಬ್ಬಂದಿ ಮೇಲ್ವಿಚಾರಣೆ ಮಾಡುತ್ತಿರುತ್ತಾರೆ ಎಂದು ತಿಳಿದು ಬಂದಿದೆ.
ಎಲೆಕ್ಟ್ರಾನಿಕ್ ಸಾಧನ ಅಳವಡಿಕೆ
ವಿಲಿಸೊ ಟೆಕ್ನಾಲಜೀಸ್‌ನ ವೆಬ್‌ಸೈಟ್‌ನ ಪ್ರಕಾರ, ತಂತ್ರಜ್ಞಾನ ಅಳವಡಿಕೆಯು ಉತ್ತಮ ನೈರ್ಮಲ್ಯಕ್ಕೆ ಸಹಾಯ ಮಾಡುತ್ತದೆ. ಉದಾಹರಣೆಗೆ, ವಾಸನೆ, ಒಟ್ಟು ಬಾಷ್ಪಶೀಲ ಸಾವಯವ ಸಂಯುಕ್ತ (TVOC), ತಾಪಮಾನ ಮತ್ತು ತೇವಾಂಶವನ್ನು ಮೇಲ್ವಿಚಾರಣೆಯನ್ನು ಐಒಟಿ ಆಧಾರಿತ ಎಲೆಕ್ಟ್ರಾನಿಕ್ ಸಾಧನ ಮಾಡುತ್ತದೆ.
ವಾಸನೆಯ ಮೇಲ್ವಿಚಾರಣೆ ಅಗತ್ಯವಿರುವ ಶೌಚಾಲಯದಲ್ಲಿ ಈ ಸಾಧನವನ್ನು ಅಳವಡಿಕೆ ಮಾಡಲಾಗುತ್ತದೆ. ಈ ಸಾಧನವು ಶೌಚಾಲಯದಲ್ಲಿ ಉಂಟಾಗುವ ವಾಸನೆಯ ಡೇಟಾವನ್ನು ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ ಅಪ್ಲಿಕೇಶನ್‌ಗೆ ರವಾನಿಸುತ್ತದೆ.
ಕೂಡಲೇ ಅಲರ್ಟ್ ಆಗುವ ರೈಲ್ವೆ ಸಿಬ್ಬಂದಿ, ಇಲ್ಲವೇ ಶೌಚಾಲಯದ ನೈರ್ಮಲ್ಯಕ್ಕೆ ಜವಾಬ್ದಾರಿ ಹೊತ್ತ ಇನ್‌ಚಾರ್ಜ್‌ಗಳು ಕೂಡಲೇ ಅಲ್ಲಿಗೆ ತೆರಳಿ ನೈರ್ಮಲ್ಯ ಕಾಪಾಡುತ್ತಾರೆ. ಈ ರೀತಿ ಸೂಕ್ತ ಕಾರ್ಯನಿರ್ವಹಣೆ ಮೂಲಕ ಪ್ರಯಾಣಿಕರಿಗೆ ಉಂಟಾಗುವ ಕಿರಿಕಿರಿಯನ್ನು ತಪ್ಪಿಸಲಾಗುವುದು ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.












Click it and Unblock the Notifications