Indian Railways ಹೊಸ ಕ್ರಾಂತಿ: ರಾತ್ರಿ ಪ್ರಯಾಣದ ಹೊಸ ಅನುಭವಕ್ಕೆ ಶೀಘ್ರದಲ್ಲೇ ಬರಲಿದೆ ವಂದೇ ಭಾರತ್ ಸ್ಲೀಪರ್ ರೈಲು
ಭಾರತೀಯ ರೈಲ್ವೆಯ ಕೀರಿಟದಂತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು 2019ರಲ್ಲಿ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನ ಗಳಿಸಿವೆ. ಆರಂಭದಲ್ಲಿ ಹಗಲು ಹೊತ್ತಿನ ಪ್ರಯಾಣಕ್ಕಾಗಿ ಕೇವಲ ಚೇರ್-ಕಾರ್ (ಕುಳಿತುಕೊಳ್ಳುವ ವ್ಯವಸ್ಥೆ) ಸೇವೆಯಾಗಿ ಆರಂಭವಾದ ಈ ರೈಲುಗಳು, ಇದೀಗ ರಾತ್ರಿ ಪ್ರಯಾಣಕ್ಕೂ ವಿಸ್ತರಣೆಯಾಗುತ್ತಿವೆ.
ದೂರದ ಊರುಗಳಿಗೆ ಪ್ರಯಾಣಿಸುವವರಿಗಾಗಿ ವಂದೇ ಭಾರತ್ ಸ್ಲೀಪರ್ ರೈಲುಗಳನ್ನ ಶೀಘ್ರದಲ್ಲೇ ಪರಿಚಯಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈಗಾಗಲೇ ಗುವಾಹಟಿ-ಹೌರಾ ಮಾರ್ಗದಲ್ಲಿ ಮೊದಲ ಸ್ಲೀಪರ್ ರೈಲು ಸೇವೆ ಆರಂಭವಾಗಿದ್ದು, ಎರಡನೇ ರೈಲಿನ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಮೂಲಗಳ ಪ್ರಕಾರ, ಶೀಘ್ರದಲ್ಲೇ ಬೆಂಗಳೂರು-ಮುಂಬೈ ಮಾರ್ಗದಲ್ಲಿ ಈ ರೈಲು ಸಂಚರಿಸುವ ಸಾಧ್ಯತೆಯಿದೆ.

ಭಾರತೀಯ ರೈಲ್ವೆಯು ಒಟ್ಟು 260 ವಂದೇ ಭಾರತ್ ಸ್ಲೀಪರ್ ರೈಲುಗಳನ್ನ ನಿರ್ಮಿಸುವ ಬೃಹತ್ ಯೋಜನೆಯನ್ನ ಹಮ್ಮಿಕೊಂಡಿದೆ. ಮೊದಲ ತಲಾ 16 ಬೋಗಿಗಳಿರುವ 10 ರೈಲುಗಳನ್ನ ಬಿಇಎಂಎಲ್ (BEML) ನಿರ್ಮಿಸುತ್ತಿದ್ದರೆ, 50 ರೈಲುಗಳನ್ನ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ತಯಾರಿಸುತ್ತಿದೆ.
ಐಸಿಎಫ್ ನಿರ್ಮಿಸುವ ರೈಲುಗಳು 24 ಬೋಗಿಗಳನ್ನ ಹೊಂದಿರಲಿದ್ದು, ಪ್ಯಾಂಟ್ರಿ ಕಾರ್ ವ್ಯವಸ್ಥೆಯನ್ನೂ ಒಳಗೊಂಡಿರಲಿವೆ. ಇದಲ್ಲದೆ, 120 ರೈಲುಗಳನ್ನು ಕೈನೆಟ್ (Kinet) ಹಾಗೂ 80 ರೈಲುಗಳನ್ನು ಟಿಟಾಗರ್-ಭೆಲ್ (Titagarh-BHEL) ಜಂಟಿ ಉದ್ಯಮವು ನಿರ್ಮಿಸುತ್ತಿವೆ. ಮುಂಬರುವ ವರ್ಷಗಳಲ್ಲಿ ಇವೆಲ್ಲವೂ ಪ್ರಯಾಣಿಕರ ಸೇವೆಗೆ ಮುಕ್ತವಾಗುವ ನಿರೀಕ್ಷೆಯಿದೆ.
ರೈಲಿನ ವೇಗ ಮತ್ತು ವಿನ್ಯಾಸ
ಈ ಹೊಸ ವಂದೇ ಭಾರತ್ ಸ್ಲೀಪರ್ ರೈಲುಗಳನ್ನ ಗರಿಷ್ಠ 180 ಕಿ.ಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಆದರೆ, ಆಯಾ ಮಾರ್ಗ ಮತ್ತು ಮೂಲಸೌಕರ್ಯಗಳಿಗೆ ಅನುಗುಣವಾಗಿ 160 ಕಿ.ಮೀ ವೇಗದಲ್ಲಿ ಇವು ಕಾರ್ಯಾಚರಣೆ ನಡೆಸಲಿವೆ.
ಸಾಮಾನ್ಯ ರೈಲುಗಳಂತೆ ಪ್ರತ್ಯೇಕ ಎಂಜಿನ್ ಬದಲಿಗೆ, ಇವುಗಳಲ್ಲಿ ಡಿಸ್ಟ್ರಿಬ್ಯೂಟೆಡ್ ಪವರ್ ವ್ಯವಸ್ಥೆ ಇರಲಿದೆ. ಇದರಿಂದ ರೈಲು ವೇಗವಾಗಿ ಚಲಿಸಲು ಮತ್ತು ಬ್ರೇಕ್ ಹಾಕಲು ಸುಲಭವಾಗಲಿದ್ದು, ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ. ಇದು ಆಧುನಿಕ ಯುರೋಪಿಯನ್ ರೈಲು ವ್ಯವಸ್ಥೆಯಿಂದ ಸ್ಫೂರ್ತಿ ಪಡೆದಿದೆ.
ವಂದೇ ಭಾರತ್ ಸ್ಲೀಪರ್ ಬೋಗಿಗಳ ವ್ಯವಸ್ಥೆ
ಪ್ರಸ್ತುತ ನಿರ್ಮಾಣವಾಗಿರುವ 16 ಬೋಗಿಗಳ ರೈಲಿನಲ್ಲಿ 11 ಎಸಿ 3-ಟೈರ್, 4 ಎಸಿ 2-ಟೈರ್ ಹಾಗೂ 1 ಎಸಿ ಫಸ್ಟ್ ಕ್ಲಾಸ್ ಬೋಗಿಗಳು ಇರಲಿವೆ. ರಾತ್ರಿ ಪ್ರಯಾಣವನ್ನು ಹೆಚ್ಚು ಆರಾಮದಾಯಕವಾಗಿಸಲು ಉತ್ತಮ ಗುಣಮಟ್ಟದ ಮೆತ್ತೆ ಮತ್ತು ಮೇಲಿನ ಬರ್ತ್‌ಗೆ ಸುಲಭವಾಗಿ ಹೋಗಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಐಸಿಎಫ್ ನಿರ್ಮಿಸಲಿರುವ 24 ಬೋಗಿಗಳ ರೈಲುಗಳು ಇನ್ನೂ ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಿವೆ.
ಅತ್ಯಾಧುನಿಕ ಸೌಲಭ್ಯಗಳು
ಪ್ರಯಾಣಿಕರ ಅನುಕೂಲಕ್ಕಾಗಿ ಬೋಗಿಗಳಲ್ಲಿ ನೈಟ್ ಲೈಟಿಂಗ್, ನಿಲ್ದಾಣಗಳಲ್ಲಿ ತಾನೇ ತೆರೆದುಕೊಳ್ಳುವ ಆಟೋಮ್ಯಾಟಿಕ್ ಬಾಗಿಲುಗಳು, ಸಿಸಿಟಿವಿ ಕ್ಯಾಮೆರಾ, ಚಾರ್ಜಿಂಗ್ ಪಾಯಿಂಟ್ಸ್ ಹಾಗೂ ಅನೌನ್ಸ್‌ಮೆಂಟ್ ಸಿಸ್ಟಮ್ ಅಳವಡಿಸಲಾಗಿದೆ. ವಿಮಾನಗಳ ಮಾದರಿಯಲ್ಲಿರುವ ಬಯೋ-ವ್ಯಾಕ್ಯೂಮ್ ಶೌಚಾಲಯಗಳಿದ್ದು, ಇದರಿಂದ ನೀರಿನ ಬಳಕೆ ಕಡಿಮೆಯಾಗಲಿದೆ. ವಿಕಲಚೇತನರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕೂಡ ಇರಲಿದೆ. ವಿಶೇಷವಾಗಿ ಎಸಿ ಫಸ್ಟ್ ಕ್ಲಾಸ್ ಬೋಗಿಯಲ್ಲಿ ಬಿಸಿ ನೀರಿನ ಸ್ನಾನದ ಸೌಲಭ್ಯವೂ ಇರುವುದು ಇದರ ಪ್ರಮುಖ ಆಕರ್ಷಣೆ.
ಸುರಕ್ಷತೆಯ ದೃಷ್ಟಿಯಿಂದ, ರೈಲುಗಳ ಡಿಕ್ಕಿ ತಪ್ಪಿಸಲು ಸಹಾಯ ಮಾಡುವ ಭಾರತದ ಸ್ವದೇಶಿ ತಂತ್ರಜ್ಞಾನ 'ಕವಚ್' ವ್ಯವಸ್ಥೆಯನ್ನ ಅಳವಡಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು ನೇರವಾಗಿ ರೈಲಿನ ಚಾಲಕನನ್ನು ಸಂಪರ್ಕಿಸುವ ವ್ಯವಸ್ಥೆ ಹಾಗೂ ಕೋಚ್ ಮಾನಿಟರಿಂಗ್ ಸಿಸ್ಟಮ್ ಕೂಡ ಈ ಹೊಸ ರೈಲುಗಳಲ್ಲಿದೆ.
ಬ್ರೇಕ್ ಹಾಕಿದಾಗ ಎನರ್ಜಿ ಉಳಿಸುವ ರಿಜೆನೆರೇಟಿವ್ ಬ್ರೇಕಿಂಗ್ ಸಿಸ್ಟಮ್ ಇದರ ಮತ್ತೊಂದು ವಿಶೇಷತೆಯಾಗಿದೆ.


Click it and Unblock the Notifications
