ಟಿಕೆಟ್ ಇಲ್ಲದೇ ರೈಲಲ್ಲಿ ಪಯಣಿಸಿದರೆ ದೊಡ್ಡ ಮೊತ್ತದ ದಂಡ, ಮಹಿಳೆಯರಿಗೆ ಕರುಣೆ ತೋರಿದ ಅಶ್ವಿನ್ ವೈಷ್ಣವ್
ಭಾರತದಲ್ಲಿ ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಅದರಲ್ಲೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಭಾರತೀಯ ರೈಲ್ವೆ ಹಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಕೆಲವೊಮ್ಮೆ ತುರ್ತು ಪರಿಸ್ಥಿತಿ, ಟಿಕೆಟ್ ಕಳೆದುಹೋಗುವುದು ಅಥವಾ ಟಿಕೆಟ್ ಪಡೆಯಲು ಸಾಧ್ಯವಾಗದೆ ಇರುವ ಸಂದರ್ಭಗಳು ಎದುರಾಗಬಹುದು. ಇಂತಹ ವೇಳೆ ಟಿಕೆಟ್ ತಪಾಸಣಾಧಿಕಾರಿ (TTE) ಬಂದರೆ ಪ್ರಯಾಣಿಕರಿಗೆ ಆತಂಕವಾಗುವುದು ಸಹಜ.
ಇಂತಹ ಸಂದರ್ಭಗಳಲ್ಲಿ ಮಹಿಳೆಯರಿಗೆ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೆಯ ಅತ್ಯಂತ ಪ್ರಮುಖ ನಿಯಮವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ರೈಲ್ವೆ ನಿಯಮಗಳ ಪ್ರಕಾರ ಟಿಕೆಟ್ ಇಲ್ಲದಿದ್ದರೂ ಅಥವಾ ಸೂಕ್ತ ದಾಖಲೆಗಳು ಇಲ್ಲದಿದ್ದರೂ ರಾತ್ರಿ ವೇಳೆ ಒಂಟಿ ಮಹಿಳೆ ಅಥವಾ ಮಕ್ಕಳೊಂದಿಗೆ ಇರುವ ಮಹಿಳೆಯನ್ನು ರೈಲಿನಿಂದ ಕೆಳಗೆ ಇಳಿಸುವಂತಿಲ್ಲ. ಮಹಿಳೆ ಸುರಕ್ಷತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಈ ವಿಶೇಷವಾದ ಮಾರ್ಗಸೋಚಿಗಳನ್ನು ಜಾರಿಗೆ ತಂದಿದೆ.

ರೈಲ್ವೆ ಇಲಾಖೆ ಹೊಸ ನಿಯಮ ಏನು ಹೇಳುತ್ತದೆ?
ಭಾರತೀಯ ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿಗಳ ಪ್ರಕಾರ, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ಅವಧಿಯಲ್ಲಿ ಒಂಟಿ ಮಹಿಳೆಯರು ಅಥವಾ ಸಣ್ಣ ಮಕ್ಕಳೊಂದಿಗೆ ಪ್ರಯಾಣಿಸುತ್ತಿರುವ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ವಿಶೇಷ ಸೂಚನೆ ನೀಡಲಾಗಿದೆ. ಟಿಕೆಟ್ ಇಲ್ಲ ಎಂಬ ಒಂದೇ ಕಾರಣಕ್ಕಾಗಿ ಮಹಿಳೆಯರನ್ನು ಅಪರಿಚಿತ ಅಥವಾ ಸಣ್ಣ ರೈಲು ನಿಲ್ದಾಣಗಳಲ್ಲಿ ಬಲವಂತವಾಗಿ ರೈಲಿನಿಂದ ಕೆಳಗೆ ಇಳಿಸಬಾರದು ಎಂದು ರೈಲ್ವೆ ಅಧಿಕಾರಿಗಳು ಮತ್ತು ಟಿಟಿಇ (TTE) ಸಿಬ್ಬಂದಿಗೆ ಕಟ್ಟುನಿಟ್ಟಿನ ಸುರಕ್ಷತಾ ನಿರ್ದೇಶನ ನೀಡಲಾಗಿದೆ.
ಈ ನಿಯಮದ ಪ್ರಮುಖ ಉದ್ದೇಶ ಮಹಿಳೆಯರ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡುವುದಾಗಿದೆ. ರಾತ್ರಿಯ ವೇಳೆಯಲ್ಲಿ ಮಹಿಳಾ ಪ್ರಯಾಣಿಕರನ್ನು ಅಪರಿಚಿತ ಅಥವಾ ನಿರ್ಜನ ಪ್ರದೇಶಗಳಲ್ಲಿ ಇಳಿಸುವುದು ಅಪಾಯ ಆಗಬಹುದು ಎಂಬ ಕಾರಣದಿಂದ ಈ ರೀತಿಯ ಎಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತದೆ.
ರೈಲ್ವೆ ನಿಯಮಾವಳಿ: ಟಿಕೆಟ್ ಇಲ್ಲದ ಮಹಿಳೆಯರ ವಿರುದ್ಧ ಟಿಟಿಇ ಕ್ರಮದ ವಿವರ
ರೈಲಿನಲ್ಲಿ ಮಹಿಳೆ ಪ್ರಯಾಣಿಕರ ಬಳಿ ಟಿಕೆಟ್ ಇಲ್ಲದಿದ್ದರೆ, ಟಿಟಿಇ ರೈಲ್ವೆ ನಿಯಮದ ಪ್ರಕಾರ ದಂಡ ವಿಧಿಸಿ ಹೊಸ ಟಿಕೆಟ್ ನೀಡಬಹುದು. ಪ್ರಯಾಣಿಕರು ತಕ್ಷಣ ಹಣ ಪಾವತಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿಯೂ ಸುರಕ್ಷತೆಯ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡುವ ವ್ಯವಸ್ಥೆಯೂ ಇದೆ.
ರೈಲಿನಿಂದ ಪ್ರಯಾಣಿಕರನ್ನು ಇಳಿಸುವ ನಿಯಮಗಳೇನು?
ಇತರರಿಗೆ ತೊಂದರೆ ಕೊಡುವ ಅಥವಾ ಕಾನೂನು ಉಲ್ಲಂಘಿಸುವ ಪ್ರಯಾಣಿಕರನ್ನು ರೈಲಿನಿಂದ ಇಳಿಸುವ ಅಧಿಕಾರ ರೈಲ್ವೆ ಅಧಿಕಾರಿಗಳಿಗಿದೆ. ಆದರೆ, ಒಂಟಿ ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ರೈಲ್ವೆ ಇಲಾಖೆ ಕಟ್ಟುನಿಟ್ಟಿನ ನಿಯಮ ಹೊಂದಿದೆ. ಇಂತಹ ಮಹಿಳೆಯರನ್ನು ಯಾವುದೇ ಸಣ್ಣ-ಪುಟ್ಟ ನಿಲ್ದಾಣಗಳಲ್ಲಿ ಇಳಿಸುವಂತಿಲ್ಲ; ಅಗತ್ಯವಿದ್ದಲ್ಲಿ ಕೇವಲ ಪ್ರಮುಖ ನಿಲ್ದಾಣಗಳಲ್ಲಿ, ಮಹಿಳಾ ಪೊಲೀಸ ಸಿಬ್ಬಂದಿಯ ಸಮ್ಮುಖದಲ್ಲಿ ಮಾತ್ರವೇ ಮುಂದಿನ ಕ್ರಮ ಕೈಗೊಳ್ಳಬೇಕು.
ರೈಲು ಪ್ರಯಾಣಿಕರು ಗಮನಿಸಬೇಕಾದ ಪ್ರಮುಖ ನಿಯಮಗಳು
ರೈಲಿನಲ್ಲಿ ಸೂಕ್ತ ಟಿಕೆಟ್ ಪಡೆದು ಪ್ರಯಾಣಿಸುವುದು ಪ್ರತಿಯೊಬ್ಬರ ನಾಗರಿಕರ ಜವಾಬ್ದಾರಿಯಾಗಿದೆ. ಆದರೆ ತುರ್ತು ಪರಿಸ್ಥಿತಿಯಲ್ಲಿ ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಈ ವಿಶೇಷವಾದ ಮಾರ್ಗಸೂಚಿಗಳನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಮಹಿಳೆಯರು ತಮ್ಮ ಹಕ್ಕುಗಳ ಜೊತೆಗೆ ರೈಲ್ವೆ ನಿಯಮಗಳ ಬಗ್ಗೆಯೂ ಅರಿವು ಹೊಂದಿರುವುದು ಅಗತ್ಯ.
ಗಮನಿಸಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಮಾಹಿತಿಯಲ್ಲಿ ಭಾರತೀಯ ರೈಲ್ವೆ ಕಾಯ್ದೆಯ ಸೆಕ್ಷನ್ 139 ಹೆಸರನ್ನು ಉಲ್ಲೇಖಿಸಲಾಗಿದ್ದರೂ, ಅದರ ವ್ಯಾಖ್ಯಾನ ಮತ್ತು ಅನ್ವಯಿಕೆ ಕುರಿತು ಅಧಿಕೃತ ರೈಲ್ವೆ ಮೂಲಗಳಿಂದ ದೃಢೀಕರಣ ಪಡೆಯುವುದು ಸೂಕ್ತ. ರೈಲ್ವೆ ನಿಯಮಗಳು ಕಾಲಕಾಲಕ್ಕೆ ಬದಲಾಗುವ ಸಾಧ್ಯತೆ ಇರುವುದರಿಂದ, ಅಧಿಕೃತ ಮಾಹಿತಿ ಪಡೆಯುವುದು ಉತ್ತಮ.














Click it and Unblock the Notifications