Indian Railways: ಭಾರತದಿಂದ ಶೀಘ್ರದಲ್ಲೇ ಅಂತರರಾಷ್ಟ್ರೀಯ ರೈಲು ಸೇವೆ- ಯಾವ ದೇಶಗಳಿಗೆ ತಿಳಿಯಿರಿ
ಅಂತಾರಾಷ್ಟ್ರೀಯ ರೈಲು ಸೇವೆಗಳನ್ನು ಆರಂಭಿಸಲು ಭಾರತೀಯ ರೈಲ್ವೇ ಮುಂದಾಗಿದೆ. ನೆರೆಯ ದೇಶಕ್ಕೆ ಸಂಚರಿಸುವ ರೈಲು ಭಾರತದ ಅಸ್ಸಾಂನಿಂದ ಕಾರ್ಯನಿರ್ವಹಿಸುತ್ತದೆ. ಇದು ಎರಡು ರಾಷ್ಟ್ರಗಳ ನಡುವಿನ ಪ್ರವಾಸೋದ್ಯಮವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಮಾಹಿತಿ ನೀಡಿದ್ದಾರೆ.
ಅಂತರರಾಷ್ಟ್ರೀಯ ರೈಲು ಸೇವೆ ಕುರಿತು ಮಾತನಾಡಿದ ಜೈಶಂಕರ್, ಈ ರೈಲು ಸೇವೆಗಳಿಂದ ಭಾರತ ಹಾಗೂ ನೆರೆಯ ದೇಶಗಳ ನಡುವೆ ಹೆಚ್ಚಿನ ಸಂಚಾರವಾಗಲಿದೆ. ಇದು ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ ಎಂದು ತಿಳಿಸಿದ್ದಾರೆ.

'ಭೂತಾನ್ ಮತ್ತು ಅಸ್ಸಾಂ ನಡುವಿನ ರೈಲು ಸಂಪರ್ಕದ ಕುರಿತು ನಾವು ಮಾತುಕತೆ ನಡೆಸುತ್ತಿದ್ದೇವೆ. ಭಾರತದ ಪ್ರವಾಸಿಗರಿಗೆ ಹೆಚ್ಚು ತೆರೆದುಕೊಳ್ಳಲು ಭೂತಾನ್ ಉತ್ಸುಕವಾಗಿದೆ. ಇದು ಭಾರತಕ್ಕೆ ತುಂಬಾ ಒಳ್ಳೆಯ ಸುದ್ದಿಯಾಗಿದೆ' ಎಂದು ಡಾ ಎಸ್ ಜೈಶಂಕರ್ ಹೇಳಿದ್ದಾರೆ.
ನೇಪಾಳ ಮತ್ತು ಬಾಂಗ್ಲಾದೇಶದೊಂದಿಗೆ ಸಂಪರ್ಕವನ್ನು ಹೆಚ್ಚಿಸಲು ಭಾರತವು ಕೆಲಸ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಜೈಶಂಕರ್ ಅವರು ಚೀನಾದೊಂದಿಗೆ ಗಡಿಭಾಗ ಸೇರಿದಂತೆ ಕಳೆದ ಒಂಬತ್ತು ವರ್ಷಗಳಲ್ಲಿ ಹೆಚ್ಚಿರುವ ಗಡಿ ಮೂಲಸೌಕರ್ಯವನ್ನು ಉದ್ದೇಶಿಸಿ ಮಾತನಾಡಿದರು.
ಭಾರತ ಮತ್ತು ಭೂತಾನ್ ನಡುವಿನ ರೈಲ್ವೆ ಸಂಪರ್ಕದ ನಿರ್ಮಾಣವನ್ನು ಪ್ರಾರಂಭಿಸುವ ಸಮೀಕ್ಷೆಯು ಏಪ್ರಿಲ್ 2023 ರಲ್ಲಿ ಪೂರ್ಣಗೊಂಡಿದೆ ಎಂದು ಭೂತಾನ್ ಲೈವ್ ವರದಿ ಮಾಡಿದೆ.

ಈ ರೈಲು ಮಾರ್ಗವು ಭೂತಾನ್‌ನ ಗೆಲೆಫು ಮತ್ತು ಭಾರತದ ಅಸ್ಸಾಂನ ಕೊಕ್ರಜಾರ್ ಅನ್ನು ಸಂಪರ್ಕಿಸುತ್ತದೆ. ಈ 57-ಕಿಮೀ ರೈಲ್ವೆ ಸಂಪರ್ಕದ ನಿರ್ಮಾಣ ಕಾರ್ಯವು 2026 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಭಾರತ ಸರ್ಕಾರದಿಂದ ಹಣವನ್ನು ನೀಡಲಾಗುತ್ತದೆ. ಈ ಮಾರ್ಗದ ರೈಲನ್ನು ಈಶಾನ್ಯ ಫ್ರಾಂಟಿಯರ್ (ಎನ್‌ಎಫ್) ರೈಲ್ವೇಗಳು ನಿರ್ವಹಿಸುತ್ತವೆ ಎಂಬ ಮಾಹಿತಿ ಲಭ್ಯವಾಗಿದೆ.
ಅಮೃತ್ ಭಾರತ್ ಸ್ಟೇಷನ್ ಯೋಜನೆಯ ಭಾಗವಾಗಿ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಡಿಪಾಯ ಹಾಕಿದರು.
ಯೋಜನೆಗೆ 24,470 ಕೋಟಿ ರೂಪಾಯಿಗಳನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಮೋದಿ, 'ಸುಮಾರು 25,000 ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತದೆ. ನಮ್ಮ ದೇಶದಲ್ಲಿ ರೈಲು ಮೂಲಸೌಕರ್ಯವನ್ನು ಅತ್ಯುತ್ತಮವಾಗಿ ಹೆಚ್ಚಿಸಲಾಗುತ್ತಿದೆ. ಇದು ಜೀವನವನ್ನು ಸುಲಭವಾಗಿಸುತ್ತದೆ. ನಿಲ್ದಾಣಗಳು ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪಗಳನ್ನು ಹೊಂದಿರುತ್ತವೆ' ಎಂದು ತಿಳಿಸಿದ್ದಾರೆ.
ಈ ನಿಲ್ದಾಣಗಳು ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55 ಸೇರಿದಂತೆ 16 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರಲಿವೆ. ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಪಶ್ಚಿಮ ಬಂಗಾಳದಲ್ಲಿ 37, ಮಧ್ಯಪ್ರದೇಶದಲ್ಲಿ 34, ಅಸ್ಸಾಂನಲ್ಲಿ 32, ಒಡಿಶಾದಲ್ಲಿ 25, ಪಂಜಾಬ್‌ನಲ್ಲಿ 22, ಗುಜರಾತ್ ಮತ್ತು ತೆಲಂಗಾಣದಲ್ಲಿ ತಲಾ 21, ಜಾರ್ಖಂಡ್‌ನಲ್ಲಿ 20, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 18, ಹರಿಯಾಣದಲ್ಲಿ 15 ಮತ್ತು ಕರ್ನಾಟಕದಲ್ಲಿ 13 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications