ಪ್ರಯಾಣಿಕರೇ ಗಮನಿಸಿ: ಬೃಹತ್ ಯೋಜನೆಗೆ ಸಿದ್ಧವಾಗಿದೆ ಭಾರತೀಯ ರೈಲ್ವೆ!
ಭಾರತೀಯ ರೈಲ್ವೆ ಜಾಗತಿಕವಾಗಿ ಕೂಡ ದೊಡ್ಡ ಶಕ್ತಿಯಾಗಿ ಬೆಳೆಯುತ್ತಿದೆ. ಶತಮಾನಗಳ ಇತಿಹಾಸ ಹೊಂದಿರುವ ನಮ್ಮ ದೇಶದ ರೈಲ್ವೆ ಸಂಪರ್ಕಕ್ಕೆ, ಈಗ ಹೊಸ ಟಚ್ ಕೊಡಲು ರೈಲ್ವೆ ಇಲಾಖೆ ಸಜ್ಜಾಗಿದೆ. ಅದರಲ್ಲೂ ಪ್ರಯಾಣಿಕರ ಪರದಾಟ ತಪ್ಪಿಸುವ ಉದ್ದೇಶದಿಂದ ಈ ಶತಮಾನದಲ್ಲೇ ದೊಡ್ಡ ಯೋಜನೆ ಘೋಷಣೆ ಮಾಡಿದೆ ರೈಲ್ವೆ ಇಲಾಖೆ. ಈ ಮೂಲಕ ರೈಲು ಪ್ರಯಾಣಿಕರಿಗೆ ಇನ್ನುಮುಂದೆ ಸಮಸ್ಯೆಯೇ ಇರೋದಿಲ್ಲವಂತೆ!
ಭಾರತದಲ್ಲಿ ಜನಸಂಖ್ಯೆ ಹೆಚ್ಚು, ಅದರಲ್ಲೂ ಉತ್ತರ ಭಾರತದಲ್ಲಿ ಜನಸಂಖ್ಯೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಿದ್ದಾಗ ಅನಿವಾರ್ಯ ಸ್ಥಿತಿಯಲ್ಲಿ ಜನರು ರೈಲು ಪ್ರಯಾಣ, ಮತ್ತು ಸರಕು ಸಾಗಾಣಿಕೆಗೆ ಕೂಡ ಬಹುತೇಕ ರೈಲುಗಳನ್ನೇ ಅವಲಂಬಿಸಿದ್ದಾರೆ. ಆದರೆ ಈ ನಡುವೆ ರೈಲು ಪ್ರಯಾಣಿಕರಿಗೆ ನಾನಾ ಸಮಸ್ಯೆ ಕಾಡುತ್ತಿದ್ದು ತುಂಬಿ ತುಳುಕುವ ರೈಲುಗಳ ಹತ್ತಿ ಸಂಚಾರ ಮಾಡಬೇಕಿದೆ. ಇದಕ್ಕೆಲ್ಲ ಒಂದೇ ಪರಿಹಾರ ಎನ್ನುವಂತೆ ಮಹತ್ವದ ಕೆಲಸ ಮಾಡಲು ಮುಂದಾಗಿದೆ ಭಾರತೀಯ ರೈಲ್ವೆ ಇಲಾಖೆ.

ರೈಲು ಪ್ರಯಾಣಿಕರಿಗೆ ಭರ್ಜರಿ ಸುದ್ದಿ!
ಹೌದು ಭಾರತದಲ್ಲಿ ರೈಲು ಪ್ರಯಾಣಿಕರ ಸಾಮರ್ಥ್ಯವನ್ನ ಈಗ ಇರುವ 800 ಕೋಟಿಯಿಂದ 1000 ಕೋಟಿಗೆ ಹೆಚ್ಚಿಸಲು ರೈಲ್ವೆ ಇಲಾಖೆ ಮಹತ್ವದ ಗುರಿ ಹಾಕಿಕೊಂಡಿದೆ. ಇದಕ್ಕೋಸ್ಕರ ಮಹತ್ವದ ಯೋಜನೆ ರೂಪಿಸಿದ್ದು ಮುಂದಿನ 4 ರಿಂದ 5 ವರ್ಷದಲ್ಲಿ 3,000 ಹೊಸ ರೈಲು ಪರಿಚಯಿಸಲು ಸಿದ್ಧವಾಗಿದೆ. ಈ ಬಗ್ಗೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಮಾಹಿತಿ ನೀಡಿದ್ದಾರೆ. ರೈಲು ಸಂಖ್ಯೆ ಹೆಚ್ಚಳದ ಜತೆ ಇನ್ನೂ ಹಲವು ಬದಲಾವಣೆ ಕೂಡ ಕಾಣಲಿದೆ ಭಾರತೀಯ ರೈಲ್ವೆ.
ಹೊಸದಾಗಿ ಬರಲಿವೆ 69,000 ಬೋಗಿ!
3,000 ಹೊಸ ರೈಲು ಪರಿಚಯಿಸುವ ಜೊತೆಗೆ ರೈಲು ಪ್ರಯಾಣದ ಸಮಯ ಕಡಿಮೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಸಿದ್ಧತೆ ನಡೆಸಲಾಗಿದೆ. ಇದೇ ನಮ್ಮ ಗುರಿಯಾಗಿದ್ದು ಅದನ್ನ ತಲುಪುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ. ಈ ರೈಲ್ವೆ ವಾರ್ಷಿಕವಾಗಿ ಸುಮಾರು 800 ಕೋಟಿ ಪ್ರಯಾಣಿಕರನ್ನ ಅವರ ಗುರಿ ತಲುಪಿಸುತ್ತಿದೆ. ಇನ್ನ ಭಾರತೀಯ ರೈಲ್ವೆಯನ್ನ ಮತ್ತಷ್ಟು ಅಪ್‌ಗ್ರೇಡ್ ಮಾಡಲು ರೈಲು ಬೋಗಿ ಅಂದರೆ ಕೋಚ್‌ಗಳನ್ನ ಕೂಡ ಹೆಚ್ಚಿಸುವ ಗುರಿ ಹೊಂದಲಾಗಿದೆ.

ಈಗಿನ ಮಾಹಿತಿಗಳ ಪ್ರಕಾರ ಒಟ್ಟು 69,000 ಹೊಸ ರೈಲು ಬೋಗಿಗಳು ಲಭ್ಯವಿದೆ. ಹಾಗೇ ಪ್ರತಿ ವರ್ಷ ಸುಮಾರು 5,000 ಹೊಸ ರೈಲು ಕೋಚ್ ತಯಾರಿಸಲಾಗುತ್ತಿದೆ. ಇದೆಲ್ಲವನ್ನೂ ಬಳಸಿಕೊಂಡು ರೈಲ್ವೆ ಸಂಪರ್ಕದಲ್ಲಿ ಕ್ರಾಂತಿ ಸೃಷ್ಟಿಸಲು ಸಿದ್ಧತೆ ಸಾಗಿದೆ. ಭಾರತ ರೈಲು ಬೋಗಿ ಉತ್ಪಾದನೆಯಿಂದ ಹಿಡಿದು, ರೈಲುಗಳ ಗಾಲಿ ಉತ್ಪಾದನೆ ತನಕ ಇಡೀ ಜಗತ್ತಿನಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದಿದೆ. ಹೀಗಿದ್ದಾಗ ಭಾರತದ ಪ್ರಯಾಣಿಕರಿಗೂ ಅತ್ಯುತ್ತಮ ಸೇವೆಯ ಒದಗಿಸಲು ರೈಲ್ವೆ ಇಲಾಖೆ ಬೃಹತ್ ಯೋಜನೆ ರೂಪಿಸಿದೆ.
ಕರ್ನಾಟಕಕ್ಕೂ ಹೆಚ್ಚು ರೈಲು ಸಿಗುತ್ತಾ?
ಸಾಮಾನ್ಯ ರೈಲುಗಳ ಜೊತೆಗೆ, ಹೆಚ್ಚುವರಿ 400 ರಿಂದ 450 ವಂದೇ ಭಾರತ್ ರೈಲು ಆರಂಭ ಮಾಡಲು ಸಿದ್ಧತೆ ಸಾಗಿದೆ. ಮುಂಬರುವ ವರ್ಷದಲ್ಲೇ, ಈ ರೈಲುಗಳು ಪ್ರಯಾಣಿಕರಿಗೆ ಲಭ್ಯ ಆಗಲಿವೆ ಎನ್ನಲಾಗಿದೆ. ಒಟ್ನಲ್ಲಿ ಭಾರತೀಯ ರೈಲ್ವೆಗೆ ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆ ಹೊರೆಯಾಗ್ತಿದೆ. ಹೀಗಾಗಿ ಅದನ್ನು ನಿಭಾಯಿಸಲು ಭಾರತೀಯ ರೈಲ್ವೆ ಇಲಾಖೆಯ ವತಿಯಿಂದ ಕ್ರಾಂತಿಕಾರಿ ಯೋಜನೆ ಸಿದ್ಧವಾಗಿದೆ. ಆದರೆ ಅದು ಅಚ್ಚುಕಟ್ಟಾಗಿ ಅನುಷ್ಠಾನ ಆಗಬೇಕಿದ್ದು, ಕರ್ನಾಟಕಕ್ಕೂ ಹೆಚ್ಚಿನ ರೈಲುಗಳನ್ನ ನೀಡಬೇಕಿದೆ ಎಂದು ಕನ್ನಡಿಗ ರೈಲು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ. ಆದ್ರೆ ಈ ಬೇಡಿಕೆ ಈಡೇರುತ್ತಾ? ಅಥವಾ ಬೇರೆ ರಾಜ್ಯದ ಪ್ರಯಾಣಿಕರ ಅನುಕೂಲದ ಜೊತೆಗೆ ಸಣ್ಣ ಪಾಲು ನಮಗೆ ಸಿಗುತ್ತಾ? ಅನ್ನೋದನ್ನ ಇದೀಗ ಕಾದು ನೋಡಬೇಕಿದೆ.












Click it and Unblock the Notifications