ಬಾಹ್ಯ ಸಾಲದ ಕುರಿತ ವಾಸ್ತವಾಂಶ ಮುಚ್ಚಿಟ್ಟ ಕೇಂದ್ರ ಸರ್ಕಾರ: ಸಿಎಜಿ ವರದಿಯಲ್ಲಿ ಸ್ಫೋಟಕ ಮಾಹಿತಿ
ನವದೆಹಲಿ, ಸೆಪ್ಟೆಂಬರ್ 20: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬಾಹ್ಯ ಸಾಲದ ( ವಿದೇಶಿ ಸಾಲ ) ಕುರಿತು ವಾಸ್ತವ ಪರಿಸ್ಥಿತಿಯನ್ನು ಮುಚ್ಚಿಟ್ಟಿದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯಲ್ಲಿ ತಿಳಿಸಿದೆ.
ಸುಳ್ಳು ಮಾಹಿತಿ ಮೂಲಕ ವಾಸ್ತವ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರವು ಬಹಿರಂಗಪಡಿಸಿಲ್ಲವೆಂದು ಸಿಎಜಿ ಆರೋಪಿಸಿದೆ. ಕೇಂದ್ರವು 2021-2022 ಹಣಕಾಸು ವರ್ಷದಲ್ಲಿ 4.39 ಲಕ್ಷ ಕೋಟಿ ರೂಪಾಯಿಗಳ ಬಾಹ್ಯ ಸಾಲವನ್ನು ತೋರಿಸಿದೆ. ಆದರೆ, ಭಾರತದ ನಿಜವಾದ ಬಾಹ್ಯ ಸಾಲವು 6.58 ಲಕ್ಷ ಕೋಟಿ ರೂಪಾಯಿ ಆಗಿದೆ.

2021-2022ರ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಆಗಸ್ಟ್‌ನಲ್ಲಿ ಸಿಎಜಿ ವರದಿ ಪ್ರಕಟಿಸಿದೆ. ನರೇಂದ್ರ ಮೋದಿ ಸರ್ಕಾರದ ಪ್ರಮುಖ ಮಾಹಿತಿಯನ್ನು ತನ್ನ ಖಾತೆಗಳ ಮುಖ್ಯ ವಿಭಾಗದಲ್ಲಿ ವರದಿ ಮಾಡುವ ಬದಲು ಅಡಿಟಿಪ್ಪಣಿಗಳಲ್ಲಿ ಮರೆಮಾಚುವ ಕೆಟ್ಟ ಪ್ರವೃತ್ತಿಯನ್ನು ಬೆಳಸಿಕೊಂಡಿದೆ ಎಂದು ಸಿಎಜಿ ಆರೋಪಿಸಿದೆ.
ಕೇಂದ್ರ ಸರ್ಕಾರ ನೀಡಿದ ಬಾಹ್ಯ ಸಾಲದ ಲೆಕ್ಕಾಚಾರವು ಪ್ರಸ್ತುತ ವಿನಿಮಯ ದರಗಳಲ್ಲಿನ ಬಾಹ್ಯ ಸಾಲದ ಲೆಕ್ಕಾಚಾರಕ್ಕೆ ತಾಳೆ ಹೊಂದುತ್ತಿಲ್ಲ. ಈ ಮೂಲಕ ಎಫ್‌ಆರ್‌ಬಿಎಂ ಕಾಯಿದೆ- 2003 ಅನ್ನು ಉಲ್ಲಂಘಿಸಿಲಾಗಿದೆ ಎಂದು ಸಿಎಜಿ ಹೇಳಿದೆ.
ಬಾಹ್ಯ ಸಾಲದ ಕುರಿತಾಗಿ ಹೆಚ್ಚುವರಿ ಮಾಹಿತಿಯನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಿಲ್ಲ. ಹಣಕಾಸು ಖಾತೆಗಳ ಎಲ್ಲಾ 16 ಹೇಳಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯ ಅಡಿಟಿಪ್ಪಣಿಗಳನ್ನು ಸೇರಿಸಲಾಗಿದೆ ಎಂದು ಸಿಎಜಿ ಆರೋಪಿಸಿದೆ.
ಬಾಹ್ಯ ಸಾಲ ಎಂದರೇನು?
ವಿದೇಶಗಳಲ್ಲಿರುವ ಖಾಸಗಿ ವಾಣಿಜ್ಯ ಬ್ಯಾಂಕುಗಳು, ಸರ್ಕಾರಗಳು ಅಥವಾ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲವನ್ನು ಬಾಹ್ಯ ಸಾಲವೆಂದು ಕರೆಯುತ್ತಾರೆ.
ಈ ಸಾಲಕ್ಕೆ ಬಡ್ಡಿ ಸೇರಿದಂತೆ ವಿದೇಶಿ ಸಂಸ್ಥೆಗಳಿಗೆ ನಗದು ರೂಪ ಅಥವಾ ಸರಕುಗಳ ರಪ್ತು ರೂಪದಲ್ಲಿ ಸರ್ಕಾರ ಪಾವತಿಸಬೇಕಾಗುತ್ತದೆ. ಇದು ದೇಶದ ನಿವಾಸಿಗಳ ಮೇಲಿನ ಹೊರೆಯಾಗಿದೆ. ಈ ಸಾಲದ ಬಗ್ಗೆ ಸ್ಪಷ್ಟ ಮಾಹಿತಿ ಒದಗಿಸುವುದು ಸರ್ಕಾರಗಳ ಕರ್ತವ್ಯವಾಗಿದೆ.
ಸಾಲ ಪಡೆದ ದೇಶವು ತನ್ನ ಸಾಲವನ್ನು ವಾಪಸ್ಸು ತೀರಿಸದೇ ಹೋದರೆ, ಅಂತಹ ದೇಶವನ್ನು ಆರ್ಥಿಕವಾಗಿ ದಿವಾಳಿ ಎದ್ದು ದೇಶವೆಂದು ಘೋಷಿಸಲಾಗುತ್ತದೆ.
ಕೆಲವು ನಿರ್ದಿಷ್ಟ ಉದ್ದೇಶಗಳಿಗಾಗಿ ಬಾಹ್ಯ ಸಾಲವನ್ನು ಪಡೆಯಬಹುದು. ಸಾಲ ಪಡೆಯುವ ದೇಶ ಹಾಗೂ ಸಾಲ ನೀಡುವ ದೇಶಗಳ ನಡುವೆ ಒಪ್ಪಂದಗಳು ಏರ್ಪಡುತ್ತವೆ. ಈ ಮೂಲಕ ಸಾಲ ವಿನಿಮಯವಾಗುತ್ತದೆ. ಈ ಸಾಲವನ್ನು ನೈಸರ್ಗಿಕ ವಿಪತ್ತುಗಳು, ಯುದ್ಧಪೀಡಿತ ದೇಶಗಳ ಅನಿವಾರ್ಯತೆಗಳನ್ನು ನೀಗಿಸಲು ಬಳಸಬಹುದಾಗಿದೆ.












Click it and Unblock the Notifications