India Weather: ದೇಶದ ಈ ಭಾಗಗಳಲ್ಲಿ ಮುಂದಿನ ಒಂದು ವಾರ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ
India Weather: ಅಸ್ನಾ ಚಂಡಮಾರುತ ಪ್ರಭಾವ ಹಿನ್ನೆಲೆ ದೇಶದ ಬಹುತೇಕ ಭಾಗಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಈಗಾಗಲೇ ಹಲವೆಡೆ ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ಹಾಗೆಯೇ ಮುಂದಿಬ ಒಂದು ವಾರ ಈ ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ.
ಅಸ್ನಾ ಚಂಡಮಾರುತದ ಪ್ರಭಾವವು ಭಾನುವಾರ (ಸೆಪ್ಟೆಂಬರ್ 01) ಬೆಳ್ಳಂಬೆಳಗ್ಗೆಯೇ ಗುಜರಾತ್‌ನ ಪಶ್ಚಿಮಕ್ಕೆ ಸಮೀಪವಿರುವ ವಾಯುವ್ಯ ಅರಬ್ಬಿ ಸಮುದ್ರದ ಮೇಲೆ ಬೀರಿದೆ. ಇನ್ನು ಸಂಜೆ ವೇಳೆಗೆ ಈ ರಾಜ್ಯದಲ್ಲಿ ಭಾರೀ ಮಳೆಯಾಗಲಿದ್ದು, ಸೋಮವಾರ ಮತ್ತಷ್ಟು ಚುರುಕು ಪಡೆಯುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.

ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ: ಈಗಾಗಲೇ ದಕ್ಷಿಣ ಒಡಿಶಾ, ಉತ್ತರ ಆಂಧ್ರಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇನ್ನು ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಛತ್ತೀಸ್‌ಗಢದಾದ್ಯಂತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಂದು ವಾರ ಭಾರೀ ಮಳೆ ಮುನ್ಸೂಚನೆ: ಕರಾವಳಿ ಕರ್ನಾಟಕ, ಆಂಧ್ರಪ್ರದೇಶ, ಲಕ್ಷದ್ವೀಪ, ಕೇರಳ, ತೆಲಂಗಾಣ , ತಮಿಳುನಾಡು ಮತ್ತು ಪುದುಚೇರಿಯಲ್ಲಿ ಮುಂದಿನ ಒಂದು ವಾರ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಇಂದು (ಸೆಪ್ಟೆಂಬರ್ 01) ತೆಲಂಗಾಣ, ಕರ್ನಾಟಕ, ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್‌ನ ಕೆಲವು ಭಾಗಗಳಲ್ಲಿ, ಛತ್ತೀಸ್‌ಗಢ, ಗೋವಾ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಸೆಪ್ಟೆಂಬರ್‌ನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ: ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಸೆಪ್ಟೆಂಬರ್ 15ರ ಮತ್ತೆ ಮುಂಗಾರು ಮಳೆ ಚುರುಕು ಪಡೆಯಲಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ನವದೆಹಲಿ, ಪೂರ್ವ ರಾಜಸ್ಥಾನ , ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಛತ್ತೀಸ್‌ಗಢ, ಜಾರ್ಖಂಡ್, ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ , ತ್ರಿಪುರಾ, ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದ ಎಂದು ಮುನ್ಸೂಚನೆ ನೀಡಿದೆ. ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಭೂಕುಸಿತ ಎಚ್ಚರಿಕೆಯನ್ನೂ ನೀಡಿದೆ. ಈಗಾಗಲೇ ಭಾರೀ ಮಳೆಯಿಂದ ಗುಜರಾತ್‌ನಲ್ಲಿ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ.












Click it and Unblock the Notifications