India Weather: ದೇಶದ ಈ ಭಾಗಗಳಲ್ಲಿ 5ರಿಂದ 7 ದಿನಗಳ ಕಾಲ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ
India Weather: ದೇಶದ ಹಲವು ಭಾಗಗಳಲ್ಲಿ ಮಳೆರಾಯನ ಆರ್ಭಟ ತಗ್ಗಿದ್ದು, ಇನ್ನೂ ಕೆಲವೆಡೆ ಮಾತ್ರ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಲೇ ಇದ್ದಾನೆ. ಹಾಗೆಯೇ ಮುಂದಿನ 5ರಿಂದ 7 ದಿನಗಳ ಕಾಲ ಈ ರಾಜ್ಯಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಾಹಿತಿ ಇಲ್ಲಿದೆ ನೋಡಿ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂದಿನ ವಾರ ಪೂರ್ವ ಮತ್ತು ಮಧ್ಯ ಭಾರತದಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ ಮುಂದಿನ 2-3 ದಿನಗಳ ಕಾಲ ಕೇರಳ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಪ್ರತ್ಯೇಕವಾಗಿ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.

ಉತ್ತರ ಪ್ರದೇಶ ಸೇರಿದಂತೆ ವಾಯುವ್ಯ ರಾಜ್ಯಗಳಲ್ಲಿ ಮುಂದಿನ 5ರಿಂದ 7 ದಿನಗಳ ಕಾಳ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಈ ವಾರ ಜಮ್ಮು-ಕಾಶ್ಮೀರ, ಲಡಾಖ್, ಮುಜಫರಾಬಾದ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ಹರಿಯಾಣ, ಚಂಡೀಗಢ, ನವದೆಹಲಿ ಮತ್ತು ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ನವದೆಹಲಿ ಹವಾಮಾನದ ವಿವರ: ಇಂದು ನವದೆಹಲಿಯ ಹಲವೆಡೆ ಮೋಡ ಕವಿದ ವಾತಾವರಣ ಇದ್ದು, ಸಂಜೆ ವೇಳೆಗೆ ಮಳೆ ಸುರಿದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಇಂದು ಇಲ್ಲಿ ಗರಿಷ್ಠ ತಾಪಮಾನ ಸುಮಾರು 35 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ ಸುಮಾರು 27 ಡಿಗ್ರಿ ಸೆಲ್ಸಿಯಸ್ ದಾಖಲು ಆಗಿದೆ ಎಂದು ತಿಳಿದುಬಂದಿದೆ.
ಈಶಾನ್ಯ ರಾಜ್ಯಗಳಿಗೆ ಆರೆಂಜ್ ಅಲರ್ಟ್: ಪಶ್ಚಿಮ ಬಂಗಾಳ, ನಾಗಾಲ್ಯಾಂಡ್, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಈ ಹಿನ್ನೆಲೆ ಈ ಭಾಗಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಆಗಸ್ಟ್ 21ರವರೆಗೆ ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದದಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ.
ಭಾರೀ ಮಳೆಯಿಂದ ದೇಶದ ಹಲವೆಡೆ ಪ್ರಮುಖ ಜಲಾಶಯಗಳು, ದೊಡ್ಡ ದೊಡ್ಡ ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಅಲ್ಲದೆ, ಉತ್ತರ ಭಾರತ, ಹಾಗೂ ದಕ್ಷಿಣ ಭಾರತದ ಹಲವೆಡೆ ದೊಡ್ಡ ದೊಡ್ಡ ಅವಾಂತರಗಳನ್ನೇ ಮಳೆರಾಯ ಸೃಷ್ಟಿಸಿದ್ದಾನೆ. ದಕ್ಷಿಣ ಭಾರತದ ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿತದಿಂದ ಅಪಾರ ಹಾನಿ ಸಂಭವಿಸಿದೆ. ಒಟ್ಟಿನಲ್ಲಿ ಈ ಬಾರಿ ಮುಂಗಾರು ಮಳೆ ಆರ್ಭಟದಿಂದ ಬಹುತೇಕ ಭಾಗಗಳಲ್ಲಿ ಅನಾಹುತಗಳು ಸೃಷ್ಟಿಯಾಗಿವೆ. ಹಾಗೆಯೇ ಮುಂದಿನ ಕೆಲವು ದಿನಗಳವರೆಗೂ ಮಳೆ ಮತ್ತಷ್ಟು ಚುರುಕು ಪಡೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications