ಇಂಡಿಯಾ ಹೆಸರು ಬದಲಿಸಿದರೆ ಒಂದು ಡಾಲರ್ ಹದಿನೈದು ರೂಪಾಯಿ ಆಗುತ್ತದೆಯೇ?
ಬೆಂಗಳೂರು, ಸೆಪ್ಟೆಂಬರ್ 07: ಇಂಡಿಯಾವನ್ನು ಭಾರತ್ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಘಟಕ, ಇಂಡಿಯಾ ಹೆಸರು ಬದಲಿಸಿದರೆ ಒಂದು ಡಾಲರ್ ಹದಿನೈದು ರೂಪಾಯಿ ಆಗುತ್ತದೆಯೇ ಎಂದು ಪ್ರಶ್ನಿಸಿದೆ.
ಇಂಡಿಯಾ ಹೆಸರು ಬದಲಿಸಿದರೆ ಒಂದು ಡಾಲರ್ ಹದಿನೈದು ರೂಪಾಯಿ ಆಗುತ್ತದೆಯೇ? ಯುವಕರ ನಿರುದ್ಯೋಗ ಸಮಸ್ಯೆ ಬಗೆಹರಿದು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯಾಗುತ್ತದೆಯೇ? ಕುಸಿದ ಅರ್ಥ ವ್ಯವಸ್ಥೆ ಪುಟ್ಟಿದೇಳುವುದೇ ? ಚೀನಾ ಆಕ್ರಮಿಸಿದ ಭಾರತದ ನೆಲವನ್ನು ಬಿಟ್ಟು 'ಇಂಡಿಯಾ'ದ ನೆಲದತ್ತ ಗಮನಿಸುವುದೇ? ಎಂದು ಕೆಪಿಸಿಸಿ ಪ್ರಶ್ನಿಸಿದೆ.

ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ ಕಂಡಿದೆ. ಕೇಂದ್ರ ಸರ್ಕಾರ ಮಾತ್ರ ದೇಶದ ಹೆಸರಿನ ಬಗ್ಗೆ ತಲೆ ಕೆಡಿಸಿಕೊಂಡಿದೆ ಎಂದು ಆರೋಪಿಸಿದೆ.
ದೇಶದ ಪರ ಕಾಳಜಿ ಹಾಗೂ ಪ್ರಗತಿಪರ ಚಿಂತನೆಯುಳ್ಳ ಸಮಾನ ಮನಸ್ಕ ರಾಜಕೀಯ ಪಕ್ಷಗಳ ಒಕ್ಕೂಟವು INDIA ಹೆಸರನ್ನು ಹೊಂದಿದ್ದಕ್ಕೆ ಕೇಂದ್ರ ಸರ್ಕಾರ ದೇಶಕ್ಕಿರುವ ಇಂಡಿಯಾ ಹೆಸರನ್ನೇ ಕೈಬಿಡಲು ಮುಂದಾಗಿರುವುದು ಅಸಹನೆ ಮತ್ತು ದ್ವೇಷದ ಪರಮಾವಧಿ ಎಂದು ವಾಗ್ದಾಳಿ ನಡೆಸಿದೆ.
ದೇಶ ಬದಲಿಸುತ್ತೇವೆ ಎಂದು ಬಂದವರು ದ್ವೇಷದಿಂದ ದೇಶದ ಹೆಸರು ಬದಲಿಸುವುದು ದುರಂತ. ಇವರೇ ಇಟ್ಟಿರುವ Skill india, Make in india ಹೆಸರುಗಳನ್ನು ಏನು ಮಾಡುತ್ತಾರೆ? ಎಂದು ಪ್ರಶ್ನಿಸಿದೆ.
ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಡಿಯಾ ಹೆಸರನ್ನು ಬದಲಿಸುತ್ತಿದೆ ಎಂದು ವಿಪಕ್ಷಗಳ ನಾಯಕರು ಆರೋಪಿಸಿದ್ದಾರೆ.
ಒಂದು ವೇಳೆ, ವಿಪಕ್ಷಗಳು ಇಂಡಿಯಾ ಹೆಸರಿನ ಬದಲಿಗೆ ಭಾರತವೆಂದು ಹೆಸರಿಸಿದರೆ ಅದನ್ನೂ ಬದಲಿಸಲಾಗುತ್ತದೆಯೇ ಎಂದು ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಇಂಡಿಯಾ ಹೆಸರು ಬದಲಾವಣೆಗೆ ಬಿಜೆಪಿ ನಾಯಕರು ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಯಾವುದೇ ಹೇಳಿಕೆ ನೀಡದಂತೆ ಕೇಂದ್ರ ಸಚಿವರಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಸೆಪ್ಟೆಂಬರ್ 18 ರಿಂದ ನಡೆಯುವ ವಿಶೇಷ ಅಧಿವೇಶದಲ್ಲಿ ಇಂಡಿಯಾ ಹೆಸರನ್ನು ಭಾರತವೆಂದು ಬದಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಇದು ಭಾರತದಲ್ಲಿ ರಾಜಕೀಯ ಕಲ್ಲೋಲಗಳಿಗೆ ಕಾರಣವಾಗಿದೆ.












Click it and Unblock the Notifications