ಅಗ್ನಿ-5 ಖಂಡಾಂತರ ಕ್ಷಿಪಣಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿ
ನವದೆಹಲಿ, ಅಕ್ಟೋಬರ್ 27; ಭಾರತ ಬುಧವಾರ ಅಗ್ನಿ-5 ಖಂಡಾಂತರ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಈ ಕ್ಷಿಪಣಿ ಪ್ರಯೋಗದ ಮೂಲಕ ಚೀನಾಕ್ಕೆ ಪರೋಕ್ಷ ಸಂದೇಶವನ್ನು ರವಾನೆ ಮಾಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಣ್ವಸ್ತ್ರ ಸಿಡಿತಲೆ ಹೊತ್ತು 5 ಸಾವಿರ ಕಿ. ಮೀ. ದೂರದ ಗುರಿಯನ್ನು ಧ್ವಂಸಗೊಳಿಸುವ ಸಾಮರ್ಥ್ಯವನ್ನು ಅಗ್ನಿ-5 ಖಂಡಾಂತರ ಕ್ಷಿಪಣಿ ಹೊಂದಿದೆ. ಒಡಿಶಾದ ಎ. ಪಿ. ಜೆ. ಅಬ್ದುಲ್ ಕಲಾಂ ದ್ವೀಪದಿಂದ ರಾತ್ರಿ 7.50ಕ್ಕೆ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ನಡೆದಿದೆ.

ಅಗ್ನಿ-5 ಖಂಡಾಂತರ ಕ್ಷಿಪಣಿ ಒಟ್ಟು ಮೂರು ಹಂತದ ಘನ ಇಂಧನ ಎಂಜಿನ್ ಹೊಂದಿದೆ. ಈ ಕ್ಷಿಪಣಿ ಗುರಿಯನ್ನು ಅತ್ಯಂತ ನಿಖರವಾಗಿ ತಲಪಿ ಧ್ವಂಸಗೊಳಿಸಲಿದೆ. ಜಲಾಂತರ್ಗಾಮಿಗಳಿಂದಲೂ ಈ ಕ್ಷಿಪಣಿಗಳನ್ನು ಉಡಾಯಿಸುವ ವ್ಯವಸ್ಥೆಯನ್ನು ಭಾರತ ಸಿದ್ಧಪಡಿಸುತ್ತಿದೆ.
ಭಾರತ-ಚೀನಾ ನಡುವಿನ ಗಡಿಯಲ್ಲಿ ಸುಮಾರು ಒಂದು ವರ್ಷದಿಂದ ಉದ್ವಿಗ್ನ ಪರಿಸ್ಥಿತಿ ಇರುವಾಗಲೇ ಭಾರತ ಅಗ್ನಿ-5 ಕ್ಷಿಪಣಿ ಪ್ರಯೋಗವನ್ನು ಮಾಡಿದೆ. ಇದರಿಂದಾಗಿ ಚೀನಾಗೆ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಕ್ಷಣಾ ವಿಜ್ಞಾನಿಯಾದ ನಟರಾಜನ್ 2007ರಲ್ಲಿ ಮೊದಲ ಬಾರಿಗೆ ಅಗ್ನಿ ಕ್ಷಿಪಣಿ ಪ್ರಯೋಗ ಮಾಡಿದರು. ಬಳಿಕ ಅಗ್ನಿ ಕ್ಷಿಪಣಿಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲಾಗುತ್ತಿದೆ. ಬುಧವಾರ 5 ಸಾವಿರ ಕಿ. ಮೀ. ದೂರದ ಗುರಿ ತಲುಪುವ ಅಗ್ನಿ-5 ಕ್ಷಿಪಣೆ ಉಡಾವಣೆ ಯಶಸ್ವಿಯಾಗಿ ನಡೆದಿದೆ.
ಅಗ್ನಿ-5 ಖಂಡಾಂತರ ಕ್ಷಿಪಣಿಯು 50,000 ಕೆಜಿ ತೂಕವಿದೆ. 24 ಎಂಎಸಿಎಚ್ ವೇಗದಲ್ಲಿ ಸಂಚಾರ ನಡೆಸಲಿದೆ. 17.5 ಮೀಟರ್ ಉದ್ದವಿದೆ. 1,500 ಕೆಜಿ ಅಣ್ವಸ್ತವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ಅಗ್ನಿ ಕ್ಷಿಪಣೆ ಕುರಿತು; 2012ರ ಏಪ್ರಿಲ್ 19ರಂದು ಭಾರತ ಅಗ್ನಿ-1 ಕ್ಷಿಪಣಿ ಪ್ರಯೋ ಮಾಡಿತ್ತು. ಇದು 700 ಕಿ. ಮೀ. ಸಾಗುತ್ತಿತ್ತು. 2013ರ ಸೆಪ್ಟೆಂಬರ್ 15ರಂದು ಅಗ್ನಿ-2 ಪರೀಕ್ಷೆ ಮಾಡಲಾಯಿತು. ಇದು 2 ಸಾವಿರ ಕಿ. ಮೀ. ಸಾಗುವ ಶಕ್ತಿ ಹೊಂದಿತ್ತು.
2015ರ ಜನವರಿ 31ರಂದು 3,500 ಕಿ. ಮೀ. ಸಾಗುವ ಅಗ್ನಿ-3 ಕ್ಷಿಪಣಿ ಪ್ರಯೋಗ ನಡೆಸಲಾಗಿತ್ತು. 2015ರ ನವೆಂಬರ್ 9ರಂದು 4 ಸಾವಿರ ಕಿ. ಮೀ. ಸಂಚಾರ ನಡೆಸುವ ಅಗ್ನಿ-4 ಕ್ಷಿಪಣಿ ಪ್ರಯೋಗ ಯಶಸ್ವಿಯಾಗಿತ್ತು.
ಅಣ್ವಸ್ತ್ರ ಸಿಡಿತಲೆ ಹೊತ್ತು 5 ಸಾವಿರ ಕಿ. ಮೀ. ದೂರದ ಗುರಿಯನ್ನು ತಲುಪುವ ಇದೇ ಮಾದರಿಯ ಕ್ಷಿಪಣಿಯನ್ನು ಅಮೆರಿಕ, ರಷ್ಯಾ, ಚೀನಾ ಮತ್ತು ಫ್ರಾನ್ಸ್ ದೇಶಗಳು ಈಗಾಗಲೇ ಹೊಂದಿವೆ. ಭಾರತವೂ ಇಂದು ಯಶಸ್ವಿಯಾದಿ ಇದೇ ಮಾದರಿಯ ಕ್ಷಿಪಣಿ ಪ್ರಯೋಗ ನಡೆಸಿದೆ.
ಅಗ್ನಿ-5 ಖಂಡಾಂತರ ಕ್ಷಿಪಣಿಯು ಸದ್ಯ ಟ್ರಕ್ ಲೋಡ್ ಮಾಡಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರ ಮಾಡಬಹುದಾಗಿದೆ. ನಿಖರವಾದ ಗುರಿ ಮುಟ್ಟುವ ಸಾಮರ್ಥ್ಯವನ್ನು ಹೊಂದಿರುವುದು ಇದರ ವೈಶಿಷ್ಟ್ಯವಾಗಿದೆ.
ಅಗ್ನಿ ಪ್ರೈಮ್; ಭಾರತ ಜೂನ್ 28ರಂದು ಒಡಿಶಾ ಕರಾವಳಿಯ ಸೇನಾ ನೆಲೆಯಿಂದ 'ಅಗ್ನಿ ಪ್ರೈಮ್' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಡೆಸಿತ್ತು. ಈ ಪ್ರಯೋಗ ಯಶಸ್ವಿಯಾಗಿದೆ ಎಂದು ಡಿಆರ್‌ಡಿಓ ಹೇಳಿತ್ತು.
ಅತ್ಯಾಧುನಿಕ ರೂಪಾಂತರಿ ಕ್ಷಿಪಣಿ 'ಅಗ್ನಿ ಪ್ರೈಮ್' ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಮೊಬೈಲ್ ಲಾಂಚರ್ ಮೂಲಕವೂ ಇದನ್ನು ಉಡಾವಣೆ ಮಾಡಬಹುದಾಗಿದೆ. ಪೂರ್ವ ಕರಾವಳಿಯ ಟೆಲಿಮೆಟ್ರಿ ಮತ್ತು ರಡಾರ್ ಕೇಂದ್ರಗಳು ಕ್ಷಿಪಣಿಯನ್ನು ಪತ್ತೆ ಹಚ್ಚಿ ಮೇಲ್ವಿಚಾರಣೆ ಮಾಡಿವೆ.
ಭೂಮಿಯಿಂದ ಭೂಮಿಗೆ ಹಾರಾಟ ಮಾಡುವ ಅಗ್ನಿ ಪ್ರೈಮ್ ಕ್ಷಿಪಣಿ 1000 ಕೆ. ಜಿ. ಪೆಲೋಡ್ ಅಥವ ಪರಮಾಣು ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯವನ್ನು ಇದು ಹೊಂದಿದೆ. ಅಗ್ನಿ-1 ಕ್ಷಿಪಣಿಗಿಂತ ತುಂಬಾ ಹಗುರವಾಗಿದೆ.












Click it and Unblock the Notifications