ಒಂದೇ ದಿನ ಕೋವಿಡ್ ಸಂಖ್ಯೆ ಶೇ. 24.8 ಏರಿಕೆ; ಪಾಸಿಟಿವಿಟಿ ರೇಟ್ ಕೂಡ ಹೆಚ್ಚಳ
ನವದೆಹಲಿ, ಮೇ 4: ದೇಶದಲ್ಲಿ ಕೊರೊನಾ ವೈರಸ್‌ನ ನಾಲ್ಕನೇ ಅಲೆ ಸೃಷ್ಟಿಯಾಗಿಲ್ಲ ಎಂದು ಸರಕಾರ ಹೇಳುತ್ತಲೇ ಬರುತ್ತಿದ್ದರೂ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರುಮುಖವಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ, ಅಂದರೆ ಒಂದೇ ದಿನದಲ್ಲಿ 3,205 ಹೊಸ ಪ್ರಕರಣಗಳು ದಾಖಲಾಗಿವೆ. ಇದು ಹಿಂದಿನ ದಿನಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 24.8ರಷ್ಟು ಏರಿಕೆಯಾಗಿದೆ.
2020ರ ವರ್ಷಾರಂಭದಲ್ಲಿ ಮೊದಲ ಕೋವಿಡ್ ಪ್ರಕರಣ ಕಂಡಿದ್ದ ಭಾರತದಲ್ಲ ಇದೂವರೆಗೂ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 4,30,88.118 ಆಗಿದೆ ಎಂಬುದು ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯಿಂದ ತಿಳಿದುಬರುತ್ತದೆ.
ನಿನ್ನೆ ಒಂದೇ ದಿನ ದೇಶದಲ್ಲಿ 31 ಸಾವುಗಳಾಗಿವೆ. ಇದರೊಂದಿಗೆ ಒಟ್ಟಾರೆ ಸಾವಿನ ಸಂಖ್ಯೆ 5,23,920 ಆಗಿದೆ. ಇದು ಇಂದು ಬುಧವಾರ ಬೆಳಗ್ಗೆ 8 ಗಂಟೆಯವರೆಗಿನ ಅಂಕಿ ಅಂಶ.

ಭಾರತದಾದ್ಯಂತ ಸದ್ಯ ಇರುವ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 19,792 ಇದೆ. ಇವರಲ್ಲಿ 698 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಒಟ್ಟಾರೆ ಪ್ರಕರಣಗಳಲ್ಲಿ ಆ್ಯಕ್ಟಿವ್ ಕೇಸ್ ಪ್ರಮಾಣ ಶೇ. 0.05 ಮಾತ್ರ ಇದೆ. ಆದರೆ, ದಿನೇ ದಿನೇ ಪ್ರಕರಣಗಳ ಏರಿಕೆ ದರ ಹೆಚ್ಚುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಇಲ್ಲಿ ನಿತ್ಯದ ಪಾಸಿಟಿವಿಟಿ ರೇಟ್ ಶೇ. 0.98ಕ್ಕೆ ಏರಿದೆ. ಪಾಸಿಟಿವಿಟಿ ರೇಟ್ ಎಂದರೆ ಪ್ರತೀ ನೂರು ಕೋವಿಡ್ ಪರೀಕ್ಷೆಗಳಲ್ಲಿ ಎಷ್ಟು ಪಾಸಿಟಿವ್ ರಿಸಲ್ಟ್ ಬಂದಿದೆ ಎಂಬುದು ಲೆಕ್ಕ. ಅಂದರೆ ಪ್ರತೀ 10 ಸಾವಿರ ಕೋವಿಡ್ ಪರೀಕ್ಷೆಗಳಲ್ಲಿ 98 ಸ್ಯಾಂಪಲ್‌ಗಳು ಕೋವಿಡ್ ಪಾಸಿಟಿವ್ ಫಲಿತಾಂಶ ಪಡೆಯುತ್ತಿವೆ.
ಭಾರತದಲ್ಲಿ ಸದ್ಯ ಸಾವಿನ ಸಂಖ್ಯೆ ಭೀತಿ ಹುಟ್ಟಿಸುವಷ್ಟು ಇಲ್ಲ. ಸಾವಿನ ಸಂಖ್ಯೆ ಶೇ. 1.22ರಷ್ಟಿದೆ. ಅಂದರೆ ಪ್ರತೀ 10 ಸಾವಿರ ಮಂದಿ ಸೋಂಕಿತರ ಪೈಕಿ 122 ಮಂದಿ ಸತ್ತಿದ್ದಾರೆ.
ಅಮೆರಿಕದಲ್ಲಿ ಮುಂದುವರಿದ ಕೋವಿಡ್ ಅಬ್ಬರ:
ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದಲ್ಲಿ ಕೋವಿಡ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಇನ್ನೂ ಯಶಸ್ವಿಯಾಗಿಲ್ಲ. ಅಲ್ಲೀಗ ಒಟ್ಟಾರೆ ಕೋವಿಡ್ ಪ್ರಕರಣಗಳ ಸಂಖ್ಯೆ 8.32 ಕೋಟಿ ದಾಟಿದೆ. ಸಾವಿನ ಸಂಖ್ಯೆ ಕೂಡ 10 ಲಕ್ಷದ ಗಡಿ ದಾಟಿದೆ. ಸಕ್ರಿಯ ಪ್ರಕರಣಗಳು 14 ಸಾವಿರಕ್ಕಿಂತ ಅಧಿಕ ಇವೆ.

ಪ್ರಧಾನಿ ಮೋದಿ ಭೇಟಿ ನೀಡಿರುವ ಫ್ರಾನ್ಸ್, ಜರ್ಮನಿ ದೇಶಗಳಲ್ಲೂ ಕೋವಿಡ್ ಅಬ್ಬರ ಬಹಳಷ್ಟು ನಡೆಯುತ್ತಿದೆ. ಜರ್ಮನಿಯಲ್ಲಿ ಆ್ಯಕ್ಟಿವ್ ಕೇಸ್‌ಗಳು 20 ಲಕ್ಷದಷ್ಟಿದ್ದರೆ, ಫ್ರಾನ್ಸ್‌ನಲ್ಲಿ ಈ ಸಂಖ್ಯೆ 15 ಲಕ್ಷ ಸಮೀಪ ಇದೆ. ವಿಯೆಟ್ನಾಮ್, ಇಟಲಿ ದೇಶಗಳಲ್ಲೂ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷಕ್ಕಿಂತ ಮೇಲಿದೆ.
ಭಾರತದಲ್ಲಿ ಲಸಿಕೆ ಮಾಹಿತಿ:
ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಈವರೆಗೆ 189.48 ಕೋಟಿ ಕೋವಿಡ್ ಲಸಿಕೆಗಳ ಡೋಸ್ ನೀಡಲಾಗಿದೆ. 193.53 ಕೋಟಿ ವ್ಯಾಕ್ಸಿನ್ ಡೋಸ್‌ಗಳನ್ನ ಕೇಂದ್ರದಿಂದ ಉಚಿತವಾಗಿ ರಾಜ್ಯ ಸರಕಾರಗಳಿಗೆ ನೀಡಲಾಗಿರುವುದು ತಿಳಿದುಬಂದಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications