ಭಾರತದಲ್ಲಿ ಸತತ ನಾಲ್ಕನೇ ದಿನವೂ 2,000ಕ್ಕಿಂತ ಹೆಚ್ಚು ಕೋವಿಡ್ ಕೇಸ್
ನವದೆಹಲಿ, ಏಪ್ರಿಲ್ 23: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಾಲ್ಕನೇ ಅಲೆ ಜೋರಾಗುತ್ತಾ ಎನ್ನುವ ಆತಂಕ ಹೆಚ್ಚಾಗಿದೆ. ಕಳೆದ ನಾಲ್ಕು ದಿನಗಳಿಂದ ದೇಶದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ 2000ಕ್ಕಿಂತ ಹೆಚ್ಚಾಗಿದೆ.
ಕಳೆದ ಒಂದು ದಿನದಲ್ಲಿ 2527 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಶನಿವಾರವೊಂದೇ ದಿನದಲ್ಲಿ 33 ಮಂದಿ ಮೃತಪಟ್ಟಿದ್ದು, 1656 ಸೋಂಕಿತರು ಗುಣಮುಖರಾಗಿದ್ದಾರೆ.
ಕೊರೊನಾವೈರಸ್ ರೂಪಾಂತರ ಆತಂಕದ ನಡುವೆಯೇ ಪಾಸಿಟಿವಿಟಿ ದರದಲ್ಲೂ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ ಪಾಸಿಟಿವಿಟಿ ದರ ಶೇ.0.56ರಷ್ಟಿದೆ. ಓಮಿಕ್ರಾನ್ ರೂಪಾಂತರದ ಎಕ್ಸ್ಇ ತಳಿಯು ಹೊಸ ಅಲೆಯ ಆತಂಕವನ್ನು ಹೆಚ್ಚಿಸಿದೆ. ಇದರ ಮಧ್ಯೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯು ಏರುಮುಖವಾಗಿದೆ.

ದೇಶದಲ್ಲಿ ಹೆಚ್ಚಿದ ಸಕ್ರಿಯ ಪ್ರಕರಣಗಳ ಸಂಖ್ಯೆ:
ಭಾರತದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ ಹೊಸ ರೂಪಾಂತರಿ ಎಕ್ಸ್ಇ ತಳಿಯ ಭೀತಿ ಹೆಚ್ಚಾಗಿದೆ. ಇದರ ಮಧ್ಯೆ ದೇಶದಲ್ಲಿ ಮತ್ತೊಮ್ಮೆ ಸೋಂಕಿತ ಪ್ರಕರಣಗಳ ಸಂಖ್ಯೆ ಎರಡು ಸಾವಿರಕ್ಕಿಂತ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 2527 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 33 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 1656 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 43,054,952ಕ್ಕೆ ಏರಿಕೆಯಾಗಿದೆ. ಈ ಪೈಕಿ 42,517,724 ಸೋಂಕಿತರು ಗುಣಮುಖರಾಗಿದ್ದರೆ, 522,149 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 15,079 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ವಿಶ್ವದಲ್ಲಿ ಕೊವಿಡ್-19 ಲೆಕ್ಕಾಚಾರ:
ವಿಶ್ವದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಲವು ರಾಷ್ಟ್ರಗಳಲ್ಲಿ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಜಗತ್ತಿನಲ್ಲಿ ಈವರೆಗೂ 508,701,406 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾಮಾರಿಗೆ ಈವರೆಗೂ 6,240,625 ಮಂದಿ ಪ್ರಾಣ ಬಿಟ್ಟಿದ್ದಾರೆ. 461,113,914 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, ಇನ್ನೂ 41,346,867 ಸಕ್ರಿಯ ಪ್ರಕರಣಗಳಿವೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.












Click it and Unblock the Notifications