Independence Day 2024: ಭಾರತದ ಮೊದಲ ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಆಸಕ್ತಿದಾಯಕ ಸಂಗತಿಗಳು
ಭಾರತೀಯ ಇತಿಹಾಸದಲ್ಲಿ ಅತ್ಯಂತ ಪ್ರಮುಖ ದಿನ ಆಗಸ್ಟ್ 15. ಪ್ರತಿ ವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ನಮ್ಮ ಭಾರತ ತನ್ನ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಸುಮಾರು 200 ವರ್ಷಗಳ ಗುಲಾಮಗಿರಿಯ ನಂತರ ಭಾರತ ಆಗಸ್ಟ್ 15, 1947 ರಂದು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಗಳಿಸಿತು.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಗಣರಾಜ್ಯವಾದ ಭಾರತದ ಎಲ್ಲಾ ರಾಜ್ಯಗಳಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಈಗ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಗುತ್ತಿದ್ದರೂ, ಭಾರತದ ಮೊದಲ ಸ್ವಾತಂತ್ರ್ಯ ದಿನಾಚರಣೆ ಹೇಗಿತ್ತು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಆ ದಿನ ಭಾರತದಲ್ಲಿ ಅನೇಕ ಸ್ವಾರಸ್ಯಕರ ಘಟನೆಗಳು ನಡೆದವು. ಹಾಗಾದರೆ ಅವು ಯಾವುವು ಎಂಬುದನ್ನು ಈಗ ತಿಳಿಯೋಣ.

ಮಹಾತ್ಮ ಗಾಂಧೀಜಿಯವರು ಭಾರತದ ಸ್ವಾತಂತ್ರ್ಯ ಹೋರಾಟದ ಪಿತಾಮಹ ಎಂದು ಕರೆಯುತ್ತಾರೆ. ಆಗಸ್ಟ್ 15, 1947 ರಂದು ಭಾರತ ಹಲವಾರು ಹೋರಾಟಗಳ ನಂತರ ತನ್ನ ಸ್ವಾತಂತ್ರ್ಯವನ್ನು ಆಚರಿಸಿದಾಗ, ಮಹಾತ್ಮ ಗಾಂಧಿಯವರು ಬಂಗಾಳದಲ್ಲಿ ನಡೆಯುತ್ತಿರುವ ಹಿಂದೂ-ಮುಸ್ಲಿಂ ಗಲಭೆಗಳನ್ನು ಕೊನೆಗೊಳಿಸಲು ಪ್ರಯತ್ನಿಸುವಲ್ಲಿ ನಿರತರಾಗಿದ್ದರು. ಹೀಗಾಗಿ ಮಹಾತ್ಮ ಗಾಂಧಿಯವರು ದೆಹಲಿಯಲ್ಲಿ ಮೊದಲ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಲು ಆಗಲಿಲ್ಲ.
ಮೊದಲ ಧ್ವಜ
ಭಾರತದ ಮೊದಲ ಅನಧಿಕೃತ ಧ್ವಜವನ್ನು ಆಗಸ್ಟ್ 7, 1906 ರಂದು ಆಗಿನ ಕಲ್ಕತ್ತಾದ ಪಾರ್ಸಿ ಬಗಾನ್ ಚೌಕದಲ್ಲಿ ಹಾರಿಸಲಾಯಿತು. ಇದು ಕೆಂಪು, ಹಳದಿ ಮತ್ತು ಹಸಿರು ಮೂರು ಅಡ್ಡ ಗೆರೆಗಳನ್ನು ಹೊಂದಿತ್ತು. ಅದರ ಮಧ್ಯದಲ್ಲಿ ವಂದೇ ಮಾತರಂ ಎಂದು ಬರೆಯಲಾಗಿತ್ತು.
ತ್ರಿವರ್ಣ ಧ್ವಜದ ಮೂಲ
ಭಾರತದ ರಾಷ್ಟ್ರಧ್ವಜ, ತ್ರಿವರ್ಣ ಧ್ವಜವು ಮಚಲಿಪಟ್ಟಣಂನ ರೈತ ಸ್ವಾತಂತ್ರ್ಯ ಹೋರಾಟಗಾರ ಬಿಂಗಾಲಿ ವೆಂಕಯ್ಯ ರಚಿಸಿದ ಸ್ವರಾಜ್ ಧ್ವಜವನ್ನು ಆಧರಿಸಿದೆ.
ರಾಷ್ಟ್ರಗೀತೆ
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಭಾರತದಲ್ಲಿ ರಾಷ್ಟ್ರಗೀತೆ ಇರಲಿಲ್ಲ. ರವೀಂದ್ರನಾಥ ಠಾಗೋರ್ ಅವರು 1911 ರಲ್ಲಿ 'ಜನ ಗಣ ಮನ' ರಚಿಸಿದ್ದರೂ, ಅದನ್ನು ಅಧಿಕೃತವಾಗಿ ರಾಷ್ಟ್ರಗೀತೆಯಾಗಿ ಜನವರಿ 24, 1950 ರಂದು ಅಂಗೀಕರಿಸಲಾಯಿತು.
ಆಗಸ್ಟ್ 15 ಅನ್ನು ಸ್ವಾತಂತ್ರ್ಯ ದಿನವನ್ನಾಗಿ ಏಕೆ ಆರಿಸಲಾಯಿತು?
ಭಾರತದ ಕೊನೆಯ ವೈಸರಾಯ್ ಮತ್ತು ಮೊದಲ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್ ಬ್ಯಾಟನ್ ಅವರು ಭಾರತದ ಸ್ವಾತಂತ್ರ್ಯವನ್ನು ಘೋಷಿಸಲು ಆಗಸ್ಟ್ 15 ಅನ್ನು ಆಯ್ಕೆ ಮಾಡಿದರು. ಜೂನ್ 1948ರ ಹೊತ್ತಿಗೆ, ಬ್ರಿಟಿಷ್ ಸಂಸತ್ತು ಅಧಿಕಾರವನ್ನು ಭಾರತೀಯರಿಗೆ ವರ್ಗಾಯಿಸುವ ಅಧಿಕಾರವನ್ನು ನೀಡಿತು.
ಆದಾಗ್ಯೂ, ಗಲಭೆಗಳನ್ನು ತಪ್ಪಿಸಲು ಅವರು ಅದನ್ನು ಆಗಸ್ಟ್ 15, 1947ಕ್ಕೆ ಮುಂದೂಡಿದರು. ಮಿತ್ರ ಪಡೆಗಳಿಗೆ ಜಪಾನ್ ಶರಣಾದ ಎರಡನೇ ವಾರ್ಷಿಕೋತ್ಸವದ ನೆನಪಿಗಾಗಿ ಅವರು ಈ ದಿನವನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.
ಆಗಸ್ಟ್ 14 ರಂದು ಪಾಕಿಸ್ತಾನಕ್ಕೆ ಸ್ವಾತಂತ್ರ್ಯ
ಭಾರತೀಯ ಸ್ವಾತಂತ್ರ್ಯ ಮಸೂದೆಯು ಭಾರತ ಮತ್ತು ಪಾಕಿಸ್ತಾನ ಎರಡಕ್ಕೂ ಆಗಸ್ಟ್ 15 ಅನ್ನು ಸ್ವಾತಂತ್ರ್ಯ ದಿನವನ್ನಾಗಿ ನೀಡಿದೆ. ಮೌಂಟ್‌ಬ್ಯಾಟನ್ ಅವರು ಎರಡೂ ದೇಶಗಳಲ್ಲಿನ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಬಯಸಿದ್ದರಿಂದ ಪಾಕಿಸ್ತಾನಕ್ಕೆ ಹಸ್ತಾಂತರ ಸಮಾರಂಭದ ದಿನಾಂಕವಾಗಿ ಆಗಸ್ಟ್ 14 ಅನ್ನು ಆಯ್ಕೆ ಮಾಡಿದರು.
ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವ ಇತರ ದೇಶಗಳು
ಬಹ್ರೇನ್, ಉತ್ತರ ಕೊರಿಯಾ, ದಕ್ಷಿಣ ಕೊರಿಯಾ, ಕಾಂಗೋ ಗಣರಾಜ್ಯ ಮತ್ತು ಲಿಚ್ಟೆನ್‌ಸ್ಟೈನ್‌ನಂತಹ ದೇಶಗಳು ವಿವಿಧ ವರ್ಷಗಳಲ್ಲಿ ಸ್ವಾತಂತ್ರ್ಯವನ್ನು ಗಳಿಸಿದರೆ, ಭಾರತದೊಂದಿಗೆ ಇತರ ಐದು ದೇಶಗಳು ಆಗಸ್ಟ್ 15 ರಂದು ತಮ್ಮ ಸ್ವಾತಂತ್ರ್ಯವನ್ನು ಆಚರಿಸುತ್ತವೆ.












Click it and Unblock the Notifications