Nrega Scheme:ಕೇಂದ್ರದಿಂದ ನರೇಗಾ ದಿನಗೂಲಿ ಹೆಚ್ಚಳ: ಏಪ್ರಿಲ್ 1 ರಿಂದಲೇ ಜಾರಿ
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ಒಂದು ದಿನದ ಕೂಲಿ ಮೊತ್ತವನ್ನು 316 ರೂ.ನಿಂದ 349 ರೂ ಏರಿಕೆ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಈ ಹೊಸ ಕೂಲಿ ಮೊತ್ತ ಏ. 1ರಿಂದಲೇ ಜಾರಿಗೆ ಬರಲಿದೆ.
ಕೇಂದ್ರ ಸರಕಾರ ಹೆಚ್ಚುವರಿಯಾಗಿ ನಿತ್ಯ 33 ರೂ. ಕೂಲಿ ಹಣ ನೀಡಲಿದೆ. ಮೊದಲು 316 ರೂ. ನೀಡಲಾಗುತ್ತಿತ್ತು. ಇದೀಗ ಏ. 1ರಿಂದ ಕೂಲಿ ಕಾರ್ಮಿಕರಿಗೆ 349 ರೂ. ದೊರೆಯಲಿದೆ. ಜೊತೆಗೆ ಸಲಕರಣೆಗಳ ಶುಲ್ಕ 10 ರೂಪಾಯಿ ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ನಿತ್ಯ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಇದರಿಂದ ತುಂಬ ಅನುಕೂಲವಾಗಲಿದೆ.

ಆದರೆ ಕಾಟಾಚಾರಕ್ಕೆ ಕಾಮಗಾರಿಗಳನ್ನು ಮಾಡಿಸುವ ಬದಲಿಗೆ, ಅವಶ್ಯಕತೆ ಇರುವ ಕಾಮಗಾರಿ ನೀಡುವುದು ಹಾಗೂ ಬರಗಾಲದಲ್ಲಿ ಮಾನವ ದಿನಗಳನ್ನು ಹೆಚ್ಚಿಸಿ, ಇದ್ದಲ್ಲಿಯೇ ಕೆಲಸ ನೀಡಿದರೆ, ಒಂದೆಡೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವುದು, ಕೃಷಿ ಚಟುವಟಿಕೆಗಳಿಗೆ ಆಸರೆಯಾಗ ಬೇಕಿದ್ದ ಮುಂಗಾರು ಮತ್ತು ಹಿಂಗಾರು ಮಳೆ ಅಭಾವದಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ಕಂಗೆಟ್ಟಿದ್ದ ಜನತೆಗೆ ಬರದ ಪರಿಸ್ಥಿತಿಯಲ್ಲಿ ಮನರೇಗಾ ಕೂಲಿ ಮೊತ್ತವನ್ನು 33 ರೂ. ಹೆಚ್ಚಿಸಿದೆ. ಹೀಗಾಗಿಯೇ ನರೇಗಾ ಕಾರ್ಮಿಕರ ಮೊಗದಲ್ಲಿ ಮಂದಹಾಸ ಮೂಡಿದೆ.
ನರೇಗಾದಿಂದಾಗಿ ಗ್ರಾಮೀಣ ಪ್ರದೇಶದ ಜನತೆ ತಾವು ಗುಳೆ ಹೋಗುವ ಬದಲಾಗಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ತಮ್ಮೂರಿನಲ್ಲಿಯೇ ಕೂಲಿ ಕೆಲಸ ಮಾಡಲು ಅಂದಿನ ಯುಪಿಎ ಸರಕಾರ ಜಾರಿಗೆ ತಂದ ಈ ಮಹತ್ವಾಕಾಂಕ್ಷಿ ಯೋಜನೆಗೆ ಕಾಲಕಾಲಕ್ಕೆ ಮತ್ತಷ್ಟು ಬಲ ತುಂಬುವ ಕೆಲಸವನ್ನು ಎನ್ ಡಿಎ ಸರಕಾರ ಮಾಡುವ ಜೊತೆಗೆ ಅಗತ್ಯಕ್ಕೆ ತಕ್ಕಂತೆ ಕೂಲಿ ಹೆಚ್ಚಳ ಮಾಡುವ ಮೂಲಕ ಕೂಲಿ ಕಾರರ ಬೆನ್ನಿಗೆ ನಿಲ್ಲುತ್ತಿದೆ.
ಸಮಾನ ಕೂಲಿ-
ದೇಶದ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಸೇರಿ 34 ಕಡೆ ಮನರೇಗಾ ಕೂಲಿಕಾರರ ದಿನಗೂಲಿಯನ್ನು ಪರಿಷ್ಕರಿಸಲಾಗಿದೆ. ಇದರಿಂದ ಸದ್ಯ ಗ್ರಾಮೀಣ ಜನರ ಬದುಕಿಗೆ ಅನುಕೂಲವಾಗಲಿದೆ.

ಮನರೇಗಾ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ಕೂಲಿ ಹಣವನ್ನು ಇ-ಎಫ್‌ಎಂಎಸ್ ಮೂಲಕ ನೇರವಾಗಿ ಕೂಲಿಕಾರರ ವೈಯಕ್ತಿಕ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಹಾಗೂ ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ನೀಡಲಾಗುತ್ತದೆ.
ಸಕಾಲದಲ್ಲಿ ಕೆಲಸ ಮತ್ತು ಕೂಲಿ ಪಾವತಿ -
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಜನರು ಉದ್ಯೋಗ ಬೇಡಿಕೆ ನೀಡಿದ ತಕ್ಷಣ ಉದ್ಯೋಗ ಒದಗಿಸಲು ಹಾಗೂ ಸಕಾಲದಲ್ಲಿಕೂಲಿ ಪಾವತಿ ಮಾಡಲು ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಅನುಷ್ಠಾನ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಯಾವ ಯಾವ ರಾಜ್ಯದಲ್ಲಿ ಕೂಲಿ ದರ ಎಷ್ಟು?
ದೇಶದಲ್ಲೆ ಅತೀ ಹೆಚ್ಚು ದಿನಗೂಲಿ ಇರುವ ರಾಜ್ಯಗಳ ಪೈಕಿ, ಮೊದಲ ಸ್ಥಾನದಲ್ಲಿ ಹರಿಯಾಣ ಮತ್ತು ಸಿಕ್ಕಿಂ 374 ರೂ. ಇದ್ದರೆ, ದ್ವಿತೀಯ ಸ್ಥಾನದಲ್ಲಿರುವ ಗೋವಾದಲ್ಲಿ 356 ರೂ. ಹಾಗೂ ತೃತೀಯ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 316 ರೂ.ನಿಂದ 349 ರೂ.ಗೆ ಏರಿಕೆ ಮಾಡಲಾಗಿದೆ. ಅಂದರೆ, ಹಿಂದಿಗಿಂತ 33 ರೂ. ಪರಿಷ್ಕರಣೆ ಮಾಡಲಾಗಿದ್ದು, ಇದೇ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
ಸ್ಥಳೀಯವಾಗಿ ಉದ್ಯೋಗ-
ಮನರೇಗಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಕಾಯಕ ಬಂದುವನ್ನು ನೇಮಿಸಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರಿಗೆ, ವಿಶೇಷಚೇತನರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಹಾಗೂ ಮಹಿಳೆಯರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದ್ದು, ವಿಶೇಷ ಅಭಿಯಾನಗಳನ್ನು ಆಯೋಜಿಸಿ ಕೂಲಿಕಾರರಿಂದ ಕೂಲಿ ಬೇಡಿಕೆ ಪಡೆದು ಸಮಯಕ್ಕೆ ಸರಿಯಾಗಿ ಕೆಲಸ ಒದಗಿಸಲಾಗುತ್ತದೆ.
ಕೇಂದ್ರ ಸರಕಾರ ನರೇಗಾ ಕೂಲಿಯನ್ನು 349 ರೂ.ಗೆ ಏರಿಸಿದೆ. ಅಗತ್ಯ ವಸ್ತುಗಳ ಬೆಲೆ ನಿತ್ಯ ಏರಿಕೆ ಆಗುತ್ತಲೇ ಇವೆ. ಹೀಗಾಗಿಯೇ ಕೂಲಿ ಹೆಚ್ಚಿಸಸಿರುವುದು ಖುಷಿ ತಂದಿದೆ. ಕೂಲಿ ಹಣ 15 ದಿನಗಳ ಒಳಗೆ ಕೈ ಸೇರಿದರೆ ಸಾಕು ಎನ್ನುತ್ತಾರೆ ನರೇಗಾ ಕಾರ್ಮಿಕರು.
ಈ ಬಗ್ಗೆ ಮಾತನಾಡಿದ ಕಮ್ಮಗುಟ್ಟಹಳ್ಳಿ ಪಿಡಿಒ ಮದ್ದರೆಡ್ಡಿ, 'ಕೇಂದ್ರ ಸರ್ಕಾರ ಮನರೇಗಾ ಕೂಲಿಕಾರರ ದಿನಗೂಲಿ ಪರಿಷ್ಕರಿಸಿ 349 ರೂ.ಗೆ ಹೆಚ್ಚಿಸಲಾಗಿದೆ. ಇದರಿಂದ ಗ್ರಾಮೀಣ ಕೂಲಿಕಾರರ ಬದುಕಿಗೆ ಅನುಕೂಲವಾಗಲಿದೆ. ಗುಳೆ ಹೋಗುವವರಲ್ಲಿ ಜಾಗೃತಿ ಮೂಡಿಸಿ, ಇದ್ದಲ್ಲೇ 100 ದಿನಗಳ ಕೆಲಸ ಒದಗಿಸುತ್ತೇವೆ' ಎಂದರು.












Click it and Unblock the Notifications