3ನೇ ಮಹಾಯುದ್ಧಕ್ಕೆ ಸಿದ್ಧವಾದ ಅಮೆರಿಕ, ಚೀನಾ?
ನವದೆಹಲಿ: ರಕ್ಷಣಾ ವೆಚ್ಚದ ಲೆಕ್ಕಾಚಾರದಲ್ಲಿ ಭಾರತ 4ನೇ ಸ್ಥಾನ ಪಡೆದುಕೊಂಡಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧ ಶುರು ಆದ ಬಳಿಕ ಜಾಗತಿಕ ಮಿಲಿಟರಿ ವೆಚ್ಚ 2022ರಲ್ಲಿ ಸಾರ್ವಕಾಲಿಕ ಗರಿಷ್ಟ ಮಟ್ಟಕ್ಕೆ ತಲುಪಿದೆ ಎಂಬ ಆಘಾತಕಾರಿ ಮಾಹಿತಿಯು ಜಗತ್ತಿನ ನಿದ್ದೆಗೆಡಿಸಿದೆ. ಈ ಮೂಲಕ ಜಗತ್ತು 3ನೇ ಮಹಾಯುದ್ಧಕ್ಕೆ ಸಿದ್ಧವಾಗುತ್ತಿದೆಯಾ ಎಂಬ ಅನುಮಾನ ಸೃಷ್ಟಿಯಾಗಿದೆ.
ಅಷ್ಟಕ್ಕೂ ಈ ವರದಿ ನೀಡಿರುವುದು ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (SIPRI). ವರದಿಯ ಪ್ರಕಾರ ಭಾರತ ಇಡೀ ಜಗತ್ತಿನಲ್ಲೇ ಮಿಲಿಟರಿಗೆ ಅತಿಹೆಚ್ಚು ಹಣ ಖರ್ಚು ಮಾಡುವ 4ನೇ ದೇಶವಾಗಿದೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ ನಂತರ ಜಾಗತಿಕವಾಗಿ ಶಸ್ತ್ರಾಸ್ತ್ರ ಖರೀದಿ ಹಾಗೂ ಯುದ್ಧ ಸಾಮಗ್ರಿ ಮೇಲೆ ಮಾಡುತ್ತಿರುವ ವೆಚ್ಚ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದು 3ನೇ ಮಹಾಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚು ಮಾಡಿದೆ. ಅದರಲ್ಲೂ ಅಮೆರಿಕ ಇಡೀ ಜಗತ್ತಿನ ಶೇ. 39ರಷ್ಟು ರಕ್ಷಣಾ ವೆಚ್ಚ ಮಾಡುತ್ತಿರುವುದು ಗಮನ ಸೆಳೆದಿದೆ.

2 ಟ್ರಿಲಿಯಲ್ ಡಾಲರ್ ವೆಚ್ಚ!
ನಂಬಲು ಸಾಧ್ಯವಾಗದೇ ಇದ್ದರೂ ಇದು ಸತ್ಯ. ಜಗತ್ತಿನಾದ್ಯಂತ ಸೇನೆ ಮತ್ತು ಶಸ್ತ್ರಾಸ್ತ್ರಕ್ಕೆ ಅಂತಲೇ ಖರ್ಚು ಮಾಡುತ್ತಿರುವ ಒಟ್ಟು ಹಣ 2240 ಶತಕೋಟಿ ಡಾಲರ್, ಅಂದರೆ ಇದನ್ನ ಭಾರತೀಯ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 179 ಲಕ್ಷ ಕೋಟಿ ರೂಪಾಯಿ ಹಣವನ್ನು ಮಿಲಿಟರಿ ವೆಚ್ಚವಾಗಿ ಖರ್ಚು ಮಾಡುತ್ತಿದೆಯಂತೆ ಜಗತ್ತು. ರಷ್ಯಾ ಜೊತೆಗೆ ಯುದ್ಧಕ್ಕೆ ಸಿದ್ಧವಾಗುತ್ತಿರುವ ಅಮೆರಿಕ 179 ಲಕ್ಷ ಕೋಟಿ ರೂಪಾಯಿಯಲ್ಲಿ 70 ಲಕ್ಷ ಕೋಟಿ ರೂಪಾಯಿ ಹಣವನ್ನು ನೀರಿನಂತೆ ಸುರಿಯುತ್ತಿದೆ. ಯಾವ ಯಾವ ದೇಶ ಎಷ್ಟು ಖರ್ಚು ಮಾಡುತ್ತಿದೆ ಎಂಬುದನ್ನ ಮುಂದೆ ತಿಳಿಯಿರಿ.
ಚೀನಾ 2, ಭಾರತಕ್ಕೆ 4ನೇ ಸ್ಥಾನ
ಅಮೆರಿಕ ಬಿಟ್ಟರೆ ರಕ್ಷಣಾ ವೆಚ್ಚಕ್ಕೆ ಹೆಚ್ಚು ಖರ್ಚು ಮಾಡುತ್ತಿರುವ ರಾಷ್ಟ್ರ ಚೀನಾ. ಸುಮಾರು 23 ಲಕ್ಷ ಕೋಟಿ ರೂಪಾಯಿ ಹಣವನ್ನು ಚೀನಾ ರಕ್ಷಣಾ ವೆಚ್ಚಕ್ಕೆ ಖರ್ಚು ಮಾಡುತ್ತಿದೆ. ಇನ್ನು ರಷ್ಯಾ ಸುಮಾರು 7 ಲಕ್ಷ ಕೋಟಿ ರೂಪಾಯಿಯನ್ನ ತನ್ನ ಸೇನೆ ಮತ್ತು ರಕ್ಷಣಾ ವೆಚ್ಚಗಳಿಗೆ ಖರ್ಚು ಮಾಡುತ್ತಿದೆ. 4ನೇ ಸ್ಥಾನದಲ್ಲಿರುವ ಭಾರತ 6.5 ಲಕ್ಷ ಕೋಟಿ ರೂಪಾಯಿಯನ್ನು ರಕ್ಷಣಾ ವೆಚ್ಚವಾಗಿ ಖರ್ಚು ಮಾಡುತ್ತಿದೆ. ಈ ಮೂಲಕ ರಕ್ಷಣಾ ವೆಚ್ಚಕ್ಕೆ ಜಗತ್ತಿನಾದ್ಯಂತ ಅತಿಹೆಚ್ಚು ಖರ್ಚು ಮಾಡುತ್ತಿರುವ ರಾಷ್ಟ್ರಗಳಲ್ಲಿ ಭಾರತ 4ನೇ ಸ್ಥಾನದಲ್ಲಿದೆ.

ಏಷ್ಯಾದಲ್ಲೂ ಸೂಕ್ಷ್ಮ ಪರಿಸ್ಥಿತಿ!
ಉಕ್ರೇನ್ ಜೊತೆಗಿನ ರಷ್ಯಾ ಯುದ್ಧ ಮಾತ್ರ ರಕ್ಷಣಾ ವೆಚ್ಚವನ್ನು ಏರುವಂತೆ ಮಾಡಿಲ್ಲ. ಇದರ ಜೊತೆಗೆ ಚೀನಾ ಜೊತೆಗಿರುವ ಏಷ್ಯಾ ರಾಷ್ಟ್ರಗಳ ಮುನಿಸು ಕೂಡ ರಕ್ಷಣಾ ವೆಚ್ಚ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವಂತೆ ಮಾಡಿದೆ. ಪೂರ್ವ ಏಷ್ಯಾದಲ್ಲಿ ಅಮೆರಿಕ ಮತ್ತು ಚೀನಾದ ನಡುವಿನ ವಿವಾದ ಕೂಡ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದೆ. ಈ ಎಲ್ಲಾ ಕಾರಣದಿಂದಾಗಿ ಶಸ್ತ್ರಾಸ್ತ್ರ ಬೇಡಿಕೆ ಹೆಚ್ಚಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಮತ್ತಷ್ಟು ರಕ್ಷಣಾ ವೆಚ್ಚ ಹೆಚ್ಚಾಗುವ ನಿರೀಕ್ಷೆ ಇದೆ. ಇನ್ನೊಂದು ಕಡೆ ಇದು 3ನೇ ಮಹಾಯುದ್ಧದ ಭೀತಿ ಹುಟ್ಟುಹಾಕಿದೆ.
ಜಗತ್ತಿನ 15 ದೇಶಗಳ 2022ರಲ್ಲಿ ಜಗತ್ತಿನ ರಕ್ಷಣಾ ವೆಚ್ಚದ ಶೇಕಡಾ 82ರಷ್ಟು ಹಣವನ್ನು ಸುರಿದಿವೆ. ಈ ಪೈಕಿ ರಷ್ಯಾ ಮತ್ತು ಭಾರತದ ನಡುವೆ ಕೆಲವೇ ಸಾವಿರ ಕೋಟಿಯ ಅಂತರ ಇದ್ದು, ಇನ್ನು ಕೆಲವೇ ವರ್ಷದಲ್ಲಿ ಭಾರತ ರಕ್ಷಣಾ ವೆಚ್ಚದಲ್ಲಿ 3ನೇ ಸ್ಥಾನ ಅಲಂಕರಿಸುವ ಸಾಧ್ಯತೆ ಇದೆ. ಮತ್ತೊಂದು ಕಡೆ ಚೀನಾ ಕೂಡ ತನ್ನ ರಕ್ಷಣಾ ವೆಚ್ಚ ಏರಿಕೆ ಮಾಡಿಕೊಳ್ಳುತ್ತಿದೆ. ಅತ್ತ ಅಮೆರಿಕ ಜೊತೆ ಪೈಪೋಟಿಗೆ ಬಿದ್ದಂತೆ ಚೀನಾ 2ನೇ ಸ್ಥಾನದಲ್ಲಿ ಮುಂದುವರಿಯುತ್ತಿದೆ.












Click it and Unblock the Notifications