IMD Weather Update: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಅಕ್ಟೋಬರ್ 24ರವರೆಗೆ ಭಾರೀ ಮಳೆ: ಐಎಂಡಿ ಮುನ್ಸೂಚನೆ
IMD Weather Update: ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದೆ. ಚಂಡಮಾರುತ ಪ್ರಸರಣ ಪ್ರಭಾವ ಹಾಗೂ ಹಿಂಗಾರು ಆಗಮನದಿಂದ ದೇಶದ ವಿವಿಧ ಪ್ರದೇಶಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ.
ನೈಋತ್ಯ ಅರಬ್ಬಿ ಸಮುದ್ರದ ಮೇಲಿರುವ ಸುಸ್ಪಷ್ಟ ಕಡಿಮೆ ಒತ್ತಡದ ಪ್ರದೇಶವು, ಅಕ್ಟೋಬರ್ 19 ರಂದು ಅದೇ ಪ್ರದೇಶದಲ್ಲಿ ಮುಂದುವರಿದಿದೆ. ಇದರೊಂದಿಗೆ ಸಂಬಂಧಿಸಿದ ಚಂಡಮಾರುತದ ಪರಿಚಲನೆಯು (Cyclonic circulation) ಸರಾಸರಿ ಸಮುದ್ರ ಮಟ್ಟದಿಂದ 9.6 ಕಿ.ಮೀ ಎತ್ತರದವರೆಗೆ ವಿಸ್ತರಿಸಿದೆ. ಮುಂದಿನ 24 ಗಂಟೆಗಳಲ್ಲಿ ಇದೇ ಪ್ರದೇಶದಲ್ಲಿ ಇದು ತೀವ್ರಗೊಂಡು 'ಡಿಪ್ರೆಷನ್' (depression) ಆಗಿ ಬದಲಾಗುವ ಸಾಧ್ಯತೆಯಿದೆ. ಇದು ಆರಂಭದಲ್ಲಿ ಪೂರ್ವ-ಈಶಾನ್ಯ ದಿಕ್ಕಿನತ್ತ ಚಲಿಸಿ, ನಂತರ ಕ್ರಮೇಣ ವಾಯುವ್ಯ ದಿಕ್ಕಿನತ್ತ ತಿರುಗಿ, ಮುಂದಿನ 2-3 ದಿನಗಳಲ್ಲಿ ಸೊಮಾಲಿಯಾ ಕರಾವಳಿಯತ್ತ ಸಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ತಮಿಳುನಾಡು ಕರಾವಳಿಯ ಸಮೀಪವಿರುವ ನೈಋತ್ಯ ಬಂಗಾಳ ಕೊಲ್ಲಿಯ ಮೇಲ್ಬಾಗದಲ್ಲಿ, ಸರಾಸರಿ ಸಮುದ್ರ ಮಟ್ಟದಿಂದ 5.8 ಕಿ.ಮೀ ಎತ್ತರದವರೆಗೆ ಚಂಡಮಾರುತದ ಪರಿಚಲನೆಯು ಮುಂದುವರಿದಿದೆ. ನೈಋತ್ಯ ಬಂಗಾಳ ಕೊಲ್ಲಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಉತ್ತರ ತಮಿಳುನಾಡು ಕರಾವಳಿಯಿಂದ ವಾಯುವ್ಯ ಬಂಗಾಳ ಕೊಲ್ಲಿಯವರೆಗೆ ವಿಸ್ತರಿಸಿರುವ 'ಟ್ರಫ್' (trough - ವಾಯುಭಾರ ಕುಸಿತದ ಪಟ್ಟಿ) ಮುಂದುವರಿದಿದ್ದು, ಪ್ರಸ್ತುತ ಸರಾಸರಿ ಸಮುದ್ರ ಮಟ್ಟದಿಂದ 1.5 ರಿಂದ 3.1 ಕಿ.ಮೀ ಎತ್ತರದ ನಡುವೆ ಕಂಡುಬರುತ್ತಿದೆ. ಉತ್ತರ ಒಳನಾಡು ಕರ್ನಾಟಕ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿ ಚಂಡಮಾರುತದ ಪರಿಚಲನೆಯು ಮುಂದುವರಿದಿದೆ ಎಂದು ಐಎಂಡಿ ರಿಪೋರ್ಟ್ ಉಲ್ಲೇಖಿಸಿದೆ.
ವಾಯುವ್ಯ, ಮಧ್ಯ, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ವಾರವಿಡೀ ಒಣಹವೆ ಇರಲಿದೆ. ಬಂಗಾಳಕೊಲ್ಲಿಯ ಮೇಲೆ ಚಂಡಮಾರುತದ ಪರಿಚಲನೆ ಮತ್ತು ಅರೇಬಿಯನ್ ಸಮುದ್ರದ ಮೇಲೆ ಉತ್ತಮವಾಗಿ ಗುರುತಿಸಲಾದ ಕಡಿಮೆ ಒತ್ತಡದ ಪ್ರದೇಶವು ಸೇರಿದಂತೆ ವಿವಿಧ ಹವಾಮಾನ ಬದಲಾವಣೆಯಿಂದಾಗಿ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಮಳೆ ಆರ್ಭಟ ಇರಲಿದೆ.
ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿಯಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆ ಆಗುತ್ತಿದೆ. ಹರಿಯಾಣ, ಚಂಡೀಗಢ ಮತ್ತು ದೆಹಲಿಯಲ್ಲಿ ಒಣ ಹವಾಮಾನದ ಪರಿಸ್ಥಿತಿ ಮುಂದುವರಿದಿದೆ. ಇನ್ನು ದೆಹಲಿಯಲ್ಲಿ ಗರಿಷ್ಠ ತಾಪಮಾನವು 31 ಡಿಗ್ರಿ ಸೆಲ್ಸಿಯಸ್ ಹಾಗೂ 34 ಡಿಗ್ರಿ ಸೆಲ್ಸಿಯಸ್ ನಡುವೆ ಇರುವ ಸಾಧ್ಯತೆ ಇದೆ. ಕನಿಷ್ಠ ತಾಪಮಾನವು 18 ಡಿಗ್ರಿ ಸೆಲ್ಸಿಯಸ್‌ನಿಂದ 20 ಡಿಗ್ರಿ ಸೆಲ್ಸಿಯಸ್ ವರೆಗೆ ಆಹ್ಲಾದಕರವಾಗಿರಲಿದೆ. ಇದರೊಂದಿಗೆ ಮೇಲ್ಮೈ ಗಾಳಿ ಬೀಸಲಿದೆ.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆ ಆರ್ಭಟ
ಇನ್ನು ದಕ್ಷಿಣ ಭಾರತದ ವಿವಿಧ ಪ್ರದೇಶಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಅಕ್ಟೋಬರ್ 24 ರವರೆಗೆ ಕೇರಳ, ಮಾಹೆ, ಲಕ್ಷದ್ವೀಪ, ದಕ್ಷಿಣ ಒಳನಾಡು ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಭಾರೀ ಮಳೆ ಇರಲಿದೆ. ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ ಮತ್ತು ದಕ್ಷಿಣ ಒಳನಾಡು ಕರ್ನಾಟಕದಾದ್ಯಂತ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ ಮತ್ತು ತೆಲಂಗಾಣದಲ್ಲಿ ಮಿಂಚು ಮತ್ತು ಗುಡುಗು ಸಹಿತ ಮಳೆ ಆಗಲಿದ್ದು, ಗಾಳಿಯು ಪ್ರತಿ ಗಂಟೆಗೆ 30 ರಿಂದ 50 ಕಿ.ಮೀ ವೇಗದಲ್ಲಿ ಇರಲಿದೆ. ಕರಾವಳಿ ಆಂಧ್ರಪ್ರದೇಶ, ಯಾಣಂ ಮತ್ತು ರಾಯಲಸೀಮಾ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಬೀಸುವ ಸಾಧ್ಯತೆ ಇದೆ.
ಇನ್ನು ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸೇರಿದಂತೆ ವಾಯುವ್ಯ ಮತ್ತು ಮಧ್ಯ ಭಾರತದ ಪ್ರದೇಶಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿಯು ಉಲ್ಲೇಖಿಸಿದೆ.


Click it and Unblock the Notifications
