IMD Weather Forecast: ಈ ಭಾಗಗಳಲ್ಲಿ ಜುಲೈ 11ರ ವರೆಗೂ ರಣಭೀಕರ ಮಳೆ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಮುಂಗಾರು ಚುರುಕು ಪಡೆದಿದೆ. ಹಾಗೆಯೇ ಮುಂದಿನ 6-7 ದಿನಗಳ ಕಾಲ ಈ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ದೇಶದ ಬಹುತೇಕ ಭಾಗಗಳಲ್ಲಿ ಮುಂಗಾರು ಮಳೆ ಆರ್ಭಟ ಶುರು ಮಾಡಿದೆ. ಮುಂದಿನ 6 ರಿಂದ 7 ದಿನಗಳ ಕಾಲ ವಾಯುವ್ಯ, ಮಧ್ಯ ಮತ್ತು ಈಶಾನ್ಯ ಭಾಗಗಳ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅದರಲ್ಲೂ ಈ ಅವಧಿಯಲ್ಲಿ ಪೂರ್ವ ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಮಧ್ಯ ಮಹಾರಾಷ್ಟ್ರದ ಘಾಟ್ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುಂದುವರೆದು ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ.
ಜುಲೈ 6ರಂದು ಪೂರ್ವ ಮಧ್ಯಪ್ರದೇಶದಲ್ಲಿ 21 ಸೆಂ.ಮೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಜುಲೈ 6-7ರ ವರೆಗೆ ಛತ್ತೀಸ್‌ಗಢ, ಜುಲೈ 6ರಂದು ಪಶ್ಚಿಮ ಬಂಗಾಳ, ಜಾರ್ಖಂಡ್ , ಒಡಿಶಾ, ಅಂಡಮಾನ್ ಮತ್ತು ನಿಕೋಬಾರ್, ಜುಲೈ 8-10ರ ವರೆಗೆ ಉಪ-ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಭಾರೀ ಮಳೆಯಾಗಲಿದ್ದು,
ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆಯನ್ನು ನೀಡಿದೆ.
ವಾಯುವ್ಯ ಭಾರತದಲ್ಲಿ ಎಲ್ಲೆಲ್ಲಿ ಮಳೆ?: ಜುಲೈ 6ರಿಂದ 8ರ ವರೆಗೆ ಹಿಮಾಚಲ ಪ್ರದೇಶ, ಜುಲೈ 6-7ರ ವರೆಗೆ ಉತ್ತರಾಖಂಡ, ಪಂಜಾಬ್, ಹರಿಯಾಣ, ಜುಲೈ 6, 9, 10ರಂದು ಪೂರ್ವ ರಾಜಸ್ಥಾನ, ಜುಲೈ 6-9ರ ವರೆಗೆ ಜಮ್ಮು ಮತ್ತು ಕಾಶ್ಮೀರ, ಜುಲೈ 6ರಿಂದ 11ರ ವರೆಗೆ ಪೂರ್ವ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಜುಲೈ 6 ಹಾಗೂ 7ರಂದು ಮಧ್ಯ ಮಹಾರಾಷ್ಟ್ರ ಭಾಗದಲ್ಲಿ 21 ಸೆಂ.ಮೀನಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ 6-11ರ ವರೆಗೆ ಕೊಂಕಣ ಮತ್ತು ಗೋವಾ, ಜುಲೈ 6 ಹಾಗೂ 7ರಂದು ಸೌರಾಷ್ಟ್ರ ಮತ್ತು ಕಚ್‌ನಲ್ಲಿ, ಮಹಾರಾಷ್ಟ್ರದ ಮರಾಠವಾಡದಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ. ಗುಜರಾತ್‌ನಲ್ಲಿ ಒಂದು ವಾರ ಮಳೆಯಾಗಲಿದ್ದು, ಹೆಚ್ಚಿನ ಭಾಗಗಳಲ್ಲಿ ಗಂಟೆಗೆ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ ಎಂದು ಎಚ್ಚರಿಕೆ ನೀಡಿದೆ.
ಈಶಾನ್ಯ ಭಾರತದಲ್ಲಿ ಎಲ್ಲೆಲ್ಲಿ ಮಳೆ?: ಜುಲೈ 6ರಂದು ಮೇಘಾಲಯದಲ್ಲಿ ಭಾರೀ ಮಳೆಯಾಗಲಿದ್ದು, ಅಸ್ಸಾಂನಲ್ಲಿ ಒಂದು ವಾರ ಪೂರ್ತಿ ಗುಡುಗು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದಕ್ಷಿಣ ಭಾರತದಲ್ಲಿ ಎಲ್ಲೆಲ್ಲಿ ಮಳೆ?: ಜುಲೈ 6ರಂದು ತಮಿಳುನಾಡಿನ ಪ್ರತ್ಯೇಕ ಭಾಗಗಳಲ್ಲಿ, ಕರ್ನಾಟಕದ ದಕ್ಷಿಣ ಒಳನಾಡು, ಜುಲೈ 6ರಿಂದ 11ರ ವರೆಗೆ ಕೇರಳ, ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತೆಲಂಗಾಣ, ಕರಾವಳಿ ಆಂಧ್ರಪ್ರದೇಶದಲ್ಲಿ ಒಂದು ವಾರ ಹಗುರದಿಂದ ಮಧ್ಯಮ ಮಳೆಯಾಗಲಿದ್ದು, ಜೊತೆಗೆ, ಮುಂದಿನ 5 ದಿನಗಳ ಕಾಲ 40-50 ಕಿ.ಮೀ. ವೇಗದದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ನವದೆಹಲಿ ಹವಾಮಾನದ ವಿವರ: ನವದೆಹಲಿಯಲ್ಲಿ ಇಂದು (ಜುಲೈ 6) ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು, ಮಿಂಚು ಸಹಿತ ಹಗುರದಿಂದ ಮಧ್ಯಮ ಮಳೆಯಾಗಬಹುದು. ಈ ಅವಧಿಯಲ್ಲಿ ತಾಪಮಾನದಲ್ಲಿ ಇಳಿಕೆಯಾಗುವ ಸಾಧ್ಯತೆ ಇರುತ್ತದೆ. ಇಂದು ನವದೆಯಲಿಯ ಹಲವೆಡೆ ಗರಿಷ್ಠ 34-36, ಕನಿಷ್ಠ ತಾಪಮಾನ 26-28 ಡಿಗ್ರಿ ಸೆಲ್ಸಿಯಸ್‌ವರೆಗೂ ದಾಖಲಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಜುಲೈ 7 ಹಾಗೂ 8ರಂದು ಗರಿಷ್ಠ 32-34, ಕನಿಷ್ಠ ತಾಪಮಾನ 24-26 ಡಿಗ್ರಿ ಸೆಲ್ಸಿಯಸ್‌ವರೆಗೂ ದಾಖಲಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಈ ಮೂರು ದಿನಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 1-4°C ಗಿಂತ ಕಡಿಮೆ ಇರುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications