IMD Weather Forecast: ಈ ಭಾಗಗಳಲ್ಲಿ ಆಗಸ್ಟ್ 24ರಿಂದ 26ರ ವರೆಗೆ ರಣಭೀಕರ ಮಳೆ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಮುಂಗಾರು ಮಳೆ ಚುರುಕು ಪಡೆದಿದೆ. ಈಗಾಗಲೇ ಭಾರೀ ಮಳೆಯಿಂದ ದೊಡ್ಡ ದೊಡ್ಡ ಅವಾಂತರಗಳೇ ಸಂಭವಿಸಿವೆ. ಹಾಗೆಯೇ ಮುಂದಿನ ಮೂರು ದಿನಗಳ ಕಾಲ ಈ ಭಾಗಗಳಲ್ಲಿ ರಣಭೀಕರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದೇಶಾದ್ಯಂತ ಮುಂಗಾರು ಮಳೆ ತೀವ್ರಗೊಂಡಿದೆ. ಆಗಸ್ಟ್ 24ರಿಂದ 26ರ ವರೆಗೆ ರಾಷ್ಟ್ರ ರಾಜದಾನಿ ನವದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ, ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್, ಬಿಹಾರ, ಒಡಿಶಾ, ತಮಿಳುನಾಡು, ಪುದುಚೇರಿ ಮತ್ತು ಪಶ್ಚಿಮ ಬಂಗಾಳದಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನವದೆಹಲಿ ಹವಾಮಾನ ವಿವರ: ಈಗಾಗಲೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶನಿವಾರ ಸಂಜೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಪರಿಣಾಮ ಹಲವು ಭಾಗಗಳಲ್ಲಿ ರಸ್ತೆಗಳ ಚರಂಡಿಯಂತೆ ಮಾರ್ಪಟ್ಟು ವಾಹನ ಸವಾರರು ಪರದಾಡಿದ ಘಟನೆ ನಡೆಯಿತು. ಇನ್ನು ಇಂದು (ಆಗಸ್ಟ್ 24) ಸಹ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಎಲ್ಲೆಲ್ಲಿ ಮಳೆ?: ಕೆಂಪು ಕೋಟೆ, ಲಜಪತ್ ನಗರ, ನರೇಲಾ, ಬವಾನಾ, ಅಲಿಪುರ್ ಮತ್ತು ಐಟಿಒ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬಿರುಗಾಳಿಯೊಂದಿಗೆ ರಣಭೀಕರ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ. ತಾಪಮಾನದ ವಿಚಾರಕ್ಕೆ ಬಂದರೆ, ನವದೆಹಲಿಯಲ್ಲಿ ಶನಿವಾರ ಗರಿಷ್ಠ ತಾಪಮಾನ 34.5°C ಇದ್ದರೆ, ಕನಿಷ್ಠ ತಾಪಮಾನ 25.7°C ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಗಾಳಿಯ ಗುಣಮಟ್ಟ ತುಸು ಮಟ್ಟಿಗೆ ಸುಧಾರಿಸಿದೆ ಎಂದು ತಿಳಿದುಬಂದಿದೆ.
ಭಾರೀ ಮಳೆಯಿಂದ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಭೂಕುಸಿತದ ಸಂಭವಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಗಾಗಲೇ ನಿರಂತರ ಮಳೆಯಿಂದಾಗಿ ಉತ್ತರಾಖಂಡ್ ರಾಜ್ಯದಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಉತ್ತರಕಾಶಿಯ ಧರಾಲಿ ಮತ್ತು ಸಯಾನಾ ಚಟ್ಟಿಯಲ್ಲಿ ಮೇಘಸ್ಫೋಟದ ನಂತರ, ಚಮೋಲಿ ಜಿಲ್ಲೆಯ ಥರಾಲಿ ಮತ್ತು ನಾರಾಯಣಬಗಡ್ ಬ್ಲಾಕ್‌ಗಳಲ್ಲಿ ತೀವ್ರ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಭಾರೀ ಮಳೆಯಿಂದಾಗಿ ಹಲವಾರು ಕಟ್ಟಡಗಳು, ಮನೆ-ಮಠಗಳು, ಅಂಗಡಿಗಳು ಕೊಚ್ಚಿ ಹೋಗಿದ್ದು, ಜನಜೀವನ ಅಸ್ತವ್ಯಸ್ತವಾಗಿರುವ ಘಟನೆಗಳು ನಡೆದಿವೆ. ಇನ್ನು ಇಂದು (ಆಗಸ್ಟ್ 24) ಡೆಹ್ರಾಡೂನ್, ತೆಹ್ರಿ, ಉತ್ತರಕಾಶಿ, ಚಮೋಲಿ, ಬಾಗೇಶ್ವರ ಮತ್ತು ನೈನಿತಾಲ್ ಜಿಲ್ಲೆಗಳ ಅಲ್ಲಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications