ಕಾಲೇಜಿಗೆ 228 ಕೋಟಿ ರೂ. ಷೇರು ದಾನ ನೀಡಿದ ಹಳೆ ವಿದ್ಯಾರ್ಥಿ: ಇಂದು IIT ಮದ್ರಾಸ್‌ಗೆ 112 ಕೋಟಿ ರೂ. ಜಾಕ್‌ಪಾಟ್

ಯಶಸ್ವಿ ಉದ್ಯಮವನ್ನ ಕಟ್ಟಿ ಸಾವಿರಾರು ಕೋಟಿ ರೂಪಾಯಿ ಒಡೆಯರಾಗುವುದು ಸಾಧನೆಯಾದರೆ, ಇನ್ನೂ ತಮಗೆ ಅಕ್ಷರ ಜ್ಞಾನ ನೀಡಿ ಬದುಕಿಗೆ ಒಂದು ಅರ್ಥ ಕೊಟ್ಟು, ಸುಭದ್ರ ಅಡಿಪಾಯ ಹಾಕಿಕೊಟ್ಟ ಶಿಕ್ಷಣ ಸಂಸ್ಥೆಯನ್ನ ನೆನಪಿಸಿಕೊಂಡು ಕೋಟ್ಯಂತರ ರೂಪಾಯಿ ದಾನ ಮಾಡುವುದು ದೊಡ್ಡ ಗುಣ. ಈ ರೀತಿ ದಾನ ಮಾಡಲು ಎಲ್ಲರಿಂದ ಸಾಧ್ಯವಿಲ್ಲ. ನೂರರಲ್ಲಿ ಒಬ್ಬರು ಈ ರೀತಿ ನಮಗೆ ವಿದ್ಯೆ ಕಲಿಸಿದ ಶಾಲಾ- ಕಾಲೇಜುಗಳಿಗೆ ದಾನ ನೀಡುತ್ತಾರೆ.

ಅಂತೆಯೇ, ನೂರರಲ್ಲಿ ಒಬ್ಬರು ಎನ್ನುವಂತೆ, ಹೀಗೆ ಉದಾರ ಮನಸ್ಸಿನಿಂದ ಒಂದು ಒಳ್ಳೇಯ ಕೆಲಸವನ್ನಾ ಐಐಟಿ ಮದ್ರಾಸ್‌ನ ಹಳೆಯ ವಿದ್ಯಾರ್ಥಿ ಹಾಗೂ 'ಇಂಡೋ-ಮಿಮ್' ಸಂಸ್ಥೆಯ ಸಂಸ್ಥಾಪಕರಾದ ಡಾ. ಕೃಷ್ಣ ಚಿವುಕುಲ ಮಾಡಿದ್ದಾರೆ ನೋಡಿ.

IIT Madras

ತಾವು ವ್ಯಾಸಂಗ ಮಾಡಿದ್ದ ಐಐಟಿ ಮದ್ರಾಸ್‌ಗೆ 2024ರಲ್ಲಿ ತಮ್ಮ ಕಂಪನಿಯ ಬರೋಬ್ಬರಿ 228 ಕೋಟಿ ರೂ. ಮೌಲ್ಯದ ಷೇರುಗಳನ್ನ ದಾನ ನೀಡಿದ್ದ ಡಾ. ಕೃಷ್ಣ ಚಿವುಕುಲ ಅವರ ಕೊಡುಗೆ ಇದೀಗ ಹೊಸದೊಂದು ಇತಿಹಾಸ ಸೃಷ್ಟಿಸಿದೆ.

ಹೌದು, ಇತ್ತೀಚೆಗೆ ಷೇರು ಮಾರುಕಟ್ಟೆಗೆ ಪ್ರವೇಶಿಸಿದ ಇಂಡೋ-ಮಿಮ್ ಕಂಪನಿಯ ಐಪಿಒ ಭರ್ಜರಿ ಯಶಸ್ಸು ಕಂಡಿದ್ದು, ಆಫರ್ ಫಾರ್ ಸೇಲ್ ಮೂಲಕ ಐಐಟಿ ಮದ್ರಾಸ್ ಸಂಸ್ಥೆಗೆ ಸುಮಾರು 112 ಕೋಟಿ ರೂ. ನಗದು ಆದಾಯ ಲಭಿಸಿದೆ. ಭಾರತೀಯ ವಿಶ್ವವಿದ್ಯಾಲಯವೊಂದು ಐಪಿಒ ಮೂಲಕ ಈ ಪ್ರಮಾಣದ ಭಾರಿ ನಗದು ಮೊತ್ತವನ್ನು ಗಳಿಸಿರುವುದು ದೇಶದ ಇತಿಹಾಸದಲ್ಲೇ ಇದೇ ಮೊದಲು.

ಷೇರು ಮಾರುಕಟ್ಟೆಯಲ್ಲಿ ಇಂಡೋ-ಮಿಮ್ ಭರ್ಜರಿ ಎಂಟ್ರಿ

ಜುಲೈ 30ರಂದು ಷೇರು ಮಾರುಕಟ್ಟೆಗೆ ಪ್ರವೇಶಿಸಿದ ಇಂಡೋ-ಮಿಮ್ ಕಂಪನಿಯ 3,811 ಕೋಟಿ ರೂ.ಗಳ ಸಾರ್ವಜನಿಕ ಕೊಡುಗೆಗೆ ಹೂಡಿಕೆದಾರರಿಂದ ಅಭೂತಪೂರ್ವ ಪ್ರತಿಕ್ರಿಯೆ ಬಂದಿದೆ. ಒಟ್ಟಾರೆಯಾಗಿ 98.47 ಪಟ್ಟು ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಪ್ರತಿ ಷೇರಿಗೆ 485 ರೂಪಾಯಿ ನಿಗದಿಪಡಿಸಲಾಗಿದ್ದ ಬೆಲೆಯು, ಲಿಸ್ಟಿಂಗ್ ದಿನದಂದು ಬಿಎಸ್‌ಇ ಹಾಗೂ ಎನ್‌ಎಸ್‌ಇ ಮಾರುಕಟ್ಟೆಯಲ್ಲಿ ಸುಮಾರು 700 ರಿಂದ 703 ರೂಪಾಯಿಗೆ ಪ್ರವೇಶ ಪಡೆಯುವ ಮೂಲಕ ಶೇ.45ರಷ್ಟು ಪ್ರೀಮಿಯಂ ಲಾಭ ತಂದುಕೊಟ್ಟಿದೆ.

ಈ ಐಪಿಒ ಪ್ರಕ್ರಿಯೆಯಲ್ಲಿ ಐಐಟಿ ಮದ್ರಾಸ್ ತಮಗೆ ದಾನವಾಗಿ ಬಂದಿದ್ದ 46.15 ಲಕ್ಷ ಷೇರುಗಳ ಪೈಕಿ ಒಂದು ಭಾಗವನ್ನ ಮಾರಾಟ ಮಾಡುವ ಮೂಲಕ 112 ಕೋಟಿ ರೂಪಾಯಿಗಳನ್ನ ಸಂಗ್ರಹಿಸಿದೆ. ಈ ಹಣವನ್ನು ಸಂಸ್ಥೆಯ ಸಂಶೋಧನೆ, ನಾವೀನ್ಯತೆ ಹಾಗೂ ಪ್ರಯೋಗಾಲಯಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

37ನೇ ವಯಸ್ಸಿಗೆ ಸಿಇಒ ಹುದ್ದೆ ತೊರೆದು ಉದ್ಯಮ ಕಟ್ಟಿದ ಸಾಹಸಿ

ಡಾ. ಕೃಷ್ಣ ಚಿವುಕುಲ ಅವರು 1970ರಲ್ಲಿ ಐಐಟಿ ಮದ್ರಾಸ್‌ನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಎಂಟೆಕ್ ಪದವಿ ಪಡೆದಿದ್ದರು. ತಮ್ಮ 37ನೇ ವಯಸ್ಸಿನಲ್ಲಿ 400 ಮಿಲಿಯನ್ ಡಾಲರ್ ಮೌಲ್ಯದ 'ಹಾಫ್‌ಮನ್ ಗ್ರೂಪ್' ಕಂಪನಿಯ ಸಿಇಒ ಹುದ್ದೆಗೆ ರಾಜೀನಾಮೆ ನೀಡಿ ಸ್ವಂತ ಉದ್ಯಮ ಕಟ್ಟುವ ಸಾಹಸಕ್ಕೆ ಕೈಹಾಕಿದ್ದರು. ತಮ್ಮ ಜೀವನದ ಸಂಪೂರ್ಣ ಉಳಿತಾಯವನ್ನು ಹೂಡಿಕೆ ಮಾಡಿ 'ಶಿವ ಟೆಕ್ನಾಲಜೀಸ್' ಆರಂಭಿಸಿದ ಅವರು, 1996ರಲ್ಲಿ 'ಇಂಡೋ-ಮಿಮ್' ಎನ್ನುವ ಮತ್ತೊಂದು ಕಂಪನಿಯನ್ನ ಹುಟ್ಟುಹಾಕಿದ್ರು.

ಇಂದು ಮೆಟಲ್ ಇಂಜೆಕ್ಷನ್ ಮೊಲ್ಡಿಂಗ್ ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಬೆಳೆದಿರುವ ಇಂಡೋ-ಮಿಮ್, ವಿಶ್ವದ 55 ದೇಶಗಳಲ್ಲಿ ಗ್ರಾಹಕರನ್ನ ಹೊಂದಿದೆ. ಆಟೋಮೊಬೈಲ್, ಏರೋಸ್ಪೇಸ್, ರಕ್ಷಣಾ ವಲಯ ಹಾಗೂ ವೈದ್ಯಕೀಯ ಉಪಕರಣಗಳಿಗೆ ಬೇಕಾದ 6,400ಕ್ಕೂ ಹೆಚ್ಚು ಬಿಡಿಭಾಗಗಳನ್ನ ಈ ಕಂಪನಿ ಉತ್ಪಾದಿಸುತ್ತಿದೆ. 2025-26ರ ಆರ್ಥಿಕ ವರ್ಷದಲ್ಲಿ ಕಂಪನಿಯು 4,320.7 ಕೋಟಿ ರೂ. ಒಟ್ಟು ಆದಾಯ ಹಾಗೂ 533.5 ಕೋಟಿ ರೂ. ನಿವ್ವಳ ಲಾಭ ಗಳಿಸಿ ಜಗತ್ತಿನೆಲ್ಲೆಡೆ ಇರುವ ತನ್ನ ಪ್ರಭಾವವನ್ನ ಸಾಬೀತು ಮಾಡಿತೋರಿಸಿದೆ.

ಸಂಸ್ಥೆಗೆ ಇತಿಹಾಸದಲ್ಲೇ ಹಳೆ ವಿದ್ಯಾರ್ಥಿಯ ದೊಡ್ಡ ಕೊಡುಗೆ

2024ರ ಫೆಬ್ರವರಿಯಲ್ಲಿ ಡಾ. ಕೃಷ್ಣ ಚಿವುಕುಲ ಅವರು ನೀಡಿದ್ದ 228 ಕೋಟಿ ರೂ. ಮೌಲ್ಯದ ಷೇರುಗಳ ಕೊಡುಗೆಯು ಐಐಟಿ ಮದ್ರಾಸ್ ಇತಿಹಾಸದಲ್ಲೇ ಹಳೆ ವಿದ್ಯಾರ್ಥಿಯೊಬ್ಬರು ನೀಡಿದ ಅತಿ ದೊಡ್ಡ ದಾನವಾಗಿದೆ. ಭಾರತದ ಶೈಕ್ಷಣಿಕ ಸಂಸ್ಥೆಗಳ ಇತಿಹಾಸದಲ್ಲಿ ಇದು ಮೂರನೇ ಅತಿ ದೊಡ್ಡ ಕೊಡುಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅವರ ಈ ಕೊಡುಗೆಯನ್ನು ಗೌರವಿಸಲು ಐಐಟಿ ಮದ್ರಾಸ್ ತನ್ನ ಕ್ಯಾಂಪಸ್‌ನ ಒಂದು ಬ್ಲಾಕ್‌ಗೆ ಅವರ ಹೆಸರನ್ನೇ ಇಟ್ಟಿದೆ.

ಮೈಸೂರಿನ ದೀನಬಂಧು ಟ್ರಸ್ಟ್‌ಗೂ ವಾರ್ಷಿಕ 50 ಲಕ್ಷ ರೂ. ನೆರವು

ಕೇವಲ ಐಐಟಿಗೆ ಮಾತ್ರವಲ್ಲದೆ, ಡಾ. ಕೃಷ್ಣ ಚಿವುಕುಲ ಅವರು ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನ ತಾವು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಅವರು ಪ್ರತಿ ತಿಂಗಳು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ 3 ಲಕ್ಷ ರೂ., ಆಶಾ ಫೌಂಡೇಷನ್‌ಗೆ 3 ಲಕ್ಷ ರೂ. ಹಾಗೂ ಮೈಸೂರಿನ ದೀನಬಂಧು ಟ್ರಸ್ಟ್ಗೆ ವಾರ್ಷಿಕ 50 ಲಕ್ಷ ರೂಪಾಯಿಗಳ ದಾನ ನೀಡುತ್ತಾ ಬಂದಿದ್ದಾರೆ.

ಶಿಕ್ಷಣ ಕೇವಲ ವೈಯಕ್ತಿಕ ಸಂಪತ್ತನ್ನ ಗಳಿಸುವ ಮಾರ್ಗವಲ್ಲ; ಅದು ಮುಂಬರುವ ಪೀಳಿಗೆಗೆ ಹೊಸ ಅವಕಾಶಗಳನ್ನ ಸೃಷ್ಟಿಸುವ ಮಾರ್ಗ ಎನ್ನುವುದಕ್ಕೆ ಡಾ. ಕೃಷ್ಣ ಚಿವುಕುಲ ಅವರ ಈ ನಡೆ ಇಂದಿನ ಯುವ ಉದ್ಯಮಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ದೊಡ್ಡ ಪಾಠ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+