‘ಸೀಮಾ ಹೈದರ್ ಹಿಂತಿರುಗದಿದ್ದರೆ...’- ಮುಂಬೈ ಪೊಲೀಸರಿಗೆ ಉರ್ದುವಿನಲ್ಲಿ ಮತ್ತೊಂದು 26/11 ಬೆದರಿಕೆ
ಪ್ರೇಮಿಯೊಂದಿಗೆ ಇರಲು ಭಾರತಕ್ಕೆ ಅಕ್ರಮವಾಗಿ ಬಂದ ಪಾಕಿಸ್ತಾನದ ನಾಲ್ಕು ಮಕ್ಕಳ ತಾಯಿ ಸೀಮಾಳನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸುವಂತೆ ಬೆದರಿಕೆ ಕರೆಯೊಂದು ಬಂದಿದೆ. ಮುಂಬೈ ಟ್ರಾಫಿಕ್ ಕಂಟ್ರೋಲ್ ರೂಮ್‌ಗೆ ಅಪರಿಚಿತ ಉರ್ದು ಮಾತನಾಡುವ ಕರೆಗಾರರಿಂದ ಕರೆ ಬಂದಿದೆ.
ತನ್ನ ಪ್ರೇಮಿಯನ್ನು ಮದುವೆಯಾಗಲು ಭಾರತಕ್ಕೆ ಬಂದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ತನ್ನ ದೇಶಕ್ಕೆ ಹಿಂತಿರುಗದಿದ್ದರೆ ಭಾರತವು "ವಿನಾಶವನ್ನು ಎದುರಿಸಲಿದೆ" ಎಂದು ಕರೆ ಮಾಡಿದವರು ಹೇಳಿದ್ದಾರೆಂದು ತಿಳಿದು ಬಂದಿದೆ. ಜೊತೆಗೆ ಆತ 26/11 ರೀತಿಯ ಭಯೋತ್ಪಾದಕ ದಾಳಿಯ ಬಗ್ಗೆ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾನೆ ಎನ್ನಲಾಗಿದೆ.

ಕರೆ ಮಾಡಿದ ವ್ಯಕ್ತಿ, "ಅಗರ್ ಸೀಮಾ ಹೈದರ್ ವಾಪಾಸ್ ನಹೀ ಆಯಿ, ತೋ ಭಾರತ್ ಕಾ ನಾಶ್ ಹೋಗಾ (ಸೀಮಾ ಹೈದರ್ ಹಿಂತಿರುಗದಿದ್ದರೆ, ಭಾರತವು ವಿನಾಶವನ್ನು ಎದುರಿಸಲಿದೆ)." ಎಂದು ಹೇಳಿದ್ದಾರೆಂದು ವರದಿಯಾಗಿದೆ. 26/11 ಮುಂಬೈ ಭಯೋತ್ಪಾದಕ ಘಟನೆಯಂತೆಯೇ ದಾಳಿಗೆ ಎಲ್ಲರೂ ಸಿದ್ಧರಾಗಿರಬೇಕು ಮತ್ತು ಉತ್ತರ ಪ್ರದೇಶ ಸರ್ಕಾರವು ಇದಕ್ಕೆ ಹೊಣೆಯಾಗಲಿದೆ ಎಂದು ಕರೆ ಮಾಡಿದವರು ಹೇಳಿದ್ದಾರೆ. ಬುಧವಾರ ತಡರಾತ್ರಿ ಕರೆ ಬಂದಿದ್ದು, ಈ ಬಗ್ಗೆ ತಕ್ಷಣ ತನಿಖೆ ನಡೆಸಲು ಸೂಚಿಸಲಾಗಿದೆ.
ಮುಂಬೈ ಪೊಲೀಸರು ಮತ್ತು ಕ್ರೈಂ ಬ್ರಾಂಚ್ ಪ್ರಸ್ತುತ ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ. ಮುಂಬೈ ಪೊಲೀಸ್ ಕಂಟ್ರೋಲ್ ರೂಮ್‌ಗೆ ಆಗಾಗ್ಗೆ ಇಂತಹ ಕರೆಗಳು ಬರುತ್ತಿದ್ದರೂ, ಪೊಲೀಸರು ಈಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ಪರಿಶೀಲಿಸುತ್ತಿದ್ದಾರೆ.
ಸೀಮಾ ಹೈದರ್ ಯಾರು?
ಪಾಕಿಸ್ತಾನದ ಸಿಂಧ್ ಪ್ರಾಂತ್ಯದವರಾದ ಸೀಮಾ ಹೈದರ್ ಅವರು 2014 ರಲ್ಲಿ ವಿವಾಹವಾದ ನಂತರ ಕರಾಚಿಯಲ್ಲಿ ನೆಲೆಸಿದ್ದರು. ಜುಲೈ 4 ರಂದು ನೇಪಾಳದ ಮೂಲಕ ವೀಸಾ ಇಲ್ಲದೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಯಿತು. 27 ವರ್ಷದ ಮಹಿಳೆ ತನ್ನ ನಾಲ್ಕು ಮಕ್ಕಳೊಂದಿಗೆ ಆನ್‌ಲೈನ್ ಗೇಮ್ PUBG ನಲ್ಲಿ ಭೇಟಿಯಾದ ತನ್ನ ಪ್ರೇಮಿಯಾದ ಸಚಿನ್‌ನನ್ನು ಭೇಟಿ ಮಾಡಲು ಭಾರತಕ್ಕೆ ಬಂದಿದ್ದಳು. ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ್ದಕ್ಕಾಗಿ ಸಚಿನ್ ಅವರನ್ನು ಸಹ ಜೈಲಿಗೆ ಹಾಕಲಾಯಿತು.
ಬಿಡುಗಡೆಯಾದ ನಂತರ, ಸಚಿನ್ ಮತ್ತು ಸೀಮಾ ತನ್ನ ಮಕ್ಕಳೊಂದಿಗೆ ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿರುವ ಸಚಿನ್ ಪೋಷಕರ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ. ಜೊತೆಗೆ ನೇಪಾಳದಲ್ಲಿ ಪರಸ್ಪರ ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಸೀಮಾ ಮತ್ತು ಸಚಿನ್ 2019 ರಲ್ಲಿ PUBG ಆಡುತ್ತಿರುವಾಗ ಸಂಪರ್ಕಕ್ಕೆ ಬಂದರು ಮತ್ತು ಅಂತಿಮವಾಗಿ ಅವರು ಭಾರತದಲ್ಲಿ ಒಟ್ಟಿಗೆ ವಾಸಿಸಲು ನಿರ್ಧರಿಸುವ ಮಟ್ಟಿಗೆ ಹತ್ತಿರವಾದರು. ಕೆಲಸದ ನಿಮಿತ್ತ ಸೌದಿ ಅರೇಬಿಯಾದಲ್ಲಿದ್ದ ಸೀಮಾ ಅವರ ಪತಿ ಗುಲಾಮ್ ಹೈದರ್ ಅವರಿಗೆ ಈ ವಿಚಾರ ತಿಳಿದಿಲ್ಲ.
ವೀಡಿಯೊ ಸಂದೇಶದಲ್ಲಿ ಸೀಮಾ ಅವರ ಪತಿ ಗುಲಾಮ್ ಹೈದರ್ ಅವರು ತಮ್ಮ ಪತ್ನಿಯೊಂದಿಗೆ ಮತ್ತೆ ಒಂದಾಗಲು ಸಹಾಯ ಮಾಡುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಾಕಿಸ್ತಾನಕ್ಕೆ ಮರಳುವುದಿಲ್ಲ ಎಂದ ಸೀಮಾ
ಪ್ರೇಮಿಯೊಂದಿಗೆ ಇರಲು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನ ಮಹಿಳೆ ತನ್ನ ಸ್ವದೇಶಕ್ಕೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಇದು ಪಾಕಿಸ್ತಾನದಲ್ಲಿರುಲು ಮಹಿಳೆಯರಿಗಿರುವ ಭೀತಿಯನ್ನು ಎತ್ತಿ ತೋರಿಸುತ್ತದೆ.
ಸೀಮಾ ಹೈದರ್ ಅವರಿಗೆ ನಾಲ್ವರು ಮಕ್ಕಳಿದ್ದಾರೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ತನ್ನ ಪ್ರೇಮಿ ಸಚಿನ್ ಜೊತೆ ಇರಲು ತನ್ನ ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದರು. ಈ ಆರೋಪದ ಮೇಲೆ ಈಕೆ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಗಿದ್ದಾರೆ. ಜೊತೆಗೆ ಈಕೆ ತಾನು ಭಾರತೀಯ ಸಂಸ್ಕೃತಿಯನ್ನು ಮನಃಪೂರ್ವಕವಾಗಿ ಸ್ವೀಕರಿಸಿದ್ದೇನೆ ಮತ್ತು ಪಾಕಿಸ್ತಾನಕ್ಕೆ ಮರಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications