ICSE 10ನೇ ತರಗತಿ ಫಲಿತಾಂಶ ಇಂದು ರಿಲೀಸ್? ದಿನಾಂಕ, ಸಮಯ ಮತ್ತು ಅಂಕಪಟ್ಟಿ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ನಡೆಸಿದ ಐಸಿಎಸ್‌ಇ (ದೀ ಇಂಡಿಯನ್ ಸರ್ಟಿಪಿಕೆಟ್ ಆಫ್ ಸೆಕೆಂಡರಿ ಎಜುಕೇಶನ್ ) 10ನೇ ತರಗತಿಯ ಪರೀಕ್ಷೆ ಬರೆದು ಫಲಿತಾಂಶಗಳಿಗಾಗಿ ಕಾತರದಿಂದ ಕಾಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಂಡಳಿಯು ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ. ಇಂದು, ಅಂದರೆ ಏಪ್ರಿಲ್ 22, 2026 ರಂದು ಐಸಿಎಸ್‌ಇ 10ನೇ ತರಗತಿಯ ಫಲಿತಾಂಶಗಳು ಪ್ರಕಟವಾಗುತ್ತಿಲ್ಲ ಎಂದು ಮಂಡಳಿ ಅಧಿಕೃತವಾಗಿ ಸ್ಪಷ್ಟಪಡಿಸಿದೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಎಲ್ಲಾ ಸುಳ್ಳು ವದಂತಿಗಳಿಗೆ ತೆರೆ ಎಳೆದಿದೆ.
ಕಳೆದ ಕೆಲವು ದಿನಗಳಿಂದ ವಾಟ್ಸಾಪ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುತ್ತೋಲೆಯೊಂದು ಭಾರಿ ವೈರಲ್ ಆಗಿತ್ತು. ಆ ನಕಲಿ ಪ್ರಕಟಣೆಯಲ್ಲಿ ಏಪ್ರಿಲ್ 22ರಂದು ಮಧ್ಯಾಹ್ನ ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಲಾಗಿತ್ತು. ಈ ವಿಚಾರ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಹಾಗೂ ಗೊಂದಲ ಸೃಷ್ಟಿಸಿತ್ತು. ಆದರೆ, ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು, ಮಂಡಳಿಯು ಯಾವುದೇ ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಸಿಐಎಸ್‌ಸಿಇ ಅಧಿಕಾರಿಯೊಬ್ಬರು, "ನಾವು ನಾಳೆ (ಅಂದರೆ ಇಂದು) ಫಲಿತಾಂಶಗಳನ್ನು ಖಂಡಿತ ಪ್ರಕಟಿಸುತ್ತಿಲ್ಲ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ನೋಟಿಸ್ ಅನ್ನು ನಾವು ಹೊರಡಿಸಿಲ್ಲ. ಯಾರೋ ಸೃಷ್ಟಿಸಿರುವ ಈ ನಕಲಿ ಪ್ರಕಟಣೆಯನ್ನು ಅಧಿಕೃತ ಎಂದು ಪರಿಗಣಿಸಬಾರದು" ಎಂದು ಖಚಿತಪಡಿಸಿದ್ದಾರೆ.

ಫಲಿತಾಂಶ ಯಾವಾಗ ಪ್ರಕಟವಾಗಬಹುದು?
ಮೌಲ್ಯಮಾಪನ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, "ಫಲಿತಾಂಶ ಸಿದ್ಧಪಡಿಸುವ ಕಾರ್ಯವು ಅಂತಿಮ ಹಂತದಲ್ಲಿದೆ. ಈ ವರ್ಷ ಫಲಿತಾಂಶಗಳು ಬಹುಬೇಗನೆ, ಅಂದರೆ 2026ರ ಏಪ್ರಿಲ್ ಕೊನೆಯ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ" ಎಂದು ತಿಳಿಸಿದ್ದಾರೆ. ಐಸಿಎಸ್‌ಇ ಫಲಿತಾಂಶಗಳ ಹಿಂದಿನ ವರ್ಷಗಳ ಟ್ರೆಂಡ್ ಗಮನಿಸಿದರೆ, ಸಾಮಾನ್ಯವಾಗಿ ಫಲಿತಾಂಶಗಳು ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಪ್ರಕಟವಾಗುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಆಧಾರರಹಿತ ವದಂತಿಗಳಿಗೆ ಕಿವಿಗೊಡಬಾರದು. ಕೇವಲ ಮಂಡಳಿಯ ಅಧಿಕೃತ ವೆಬ್‌ಸೈಟ್ ಅಥವಾ ಅಧಿಕೃತ ಮಾಧ್ಯಮಗಳ ಪ್ರಕಟಣೆಗಳನ್ನು ಮಾತ್ರ ನಂಬಬೇಕು ಎಂದು ಮನವಿ ಮಾಡಲಾಗಿದೆ.
ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಚೆಕ್ ಮಾಡುವುದು ಹೇಗೆ?
ಫಲಿತಾಂಶ ಪ್ರಕಟವಾದ ತಕ್ಷಣ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ ಆದ results.cisce.org ಗೆ ಭೇಟಿ ನೀಡಿ ತಮ್ಮ ಅಂಕಗಳನ್ನು ಸುಲಭವಾಗಿ ಪರಿಶೀಲಿಸಬಹುದು.
1. ಮೊದಲು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ CISCE ವೆಬ್‌ಸೈಟ್ - results.cisce.org ಅನ್ನು ತೆರೆಯಿರಿ.
2. ಮುಖಪುಟದಲ್ಲಿ ಲಭ್ಯವಿರುವ "ICSE Result 2026" ಎನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
3. ನಿಮ್ಮ ಲಾಗಿನ್ ವಿವರಗಳಾದ ಯುಐಡಿ, ಇಂಡೆಕ್ಸ್ ಸಂಖ್ಯೆ ಮತ್ತು ಅಲ್ಲಿ ಕಾಣುವ ಕ್ಯಾಪ್ಚಾ (Captcha) ಕೋಡ್ ಅನ್ನು ತಪ್ಪದೆ ನಮೂದಿಸಿ.
4. "Show Result" ಬಟನ್ ಮೇಲೆ ಒತ್ತಿ.
5. ನಿಮ್ಮ ಅಂಕಪಟ್ಟಿಯನ್ನು ಪರದೆಯ ಮೇಲೆ ಪರಿಶೀಲಿಸಿ, ಮುಂದಿನ ಶೈಕ್ಷಣಿಕ ಉಲ್ಲೇಖಕ್ಕಾಗಿ ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ಪಾಸಿಂಗ್ ಮಾರ್ಕ್ಸ್ ನಿಯಮಗಳೇನು?
2026ರ ಸಿಐಎಸ್‌ಸಿಇ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು, ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿ ಕನಿಷ್ಠ ಶೇ. 33ರಷ್ಟು ಅಂಕಗಳನ್ನು ಗಳಿಸಬೇಕಿರುವುದು ಕಡ್ಡಾಯ. ಇದರಲ್ಲಿ ಥಿಯರಿ ಪರೀಕ್ಷೆ ಮತ್ತು ಶಾಲಾ ಮಟ್ಟದ ಆಂತರಿಕ ಮೌಲ್ಯಮಾಪನ ಎರಡೂ ಸೇರಿರುತ್ತದೆ. ಇಂಗ್ಲಿಷ್ ಅನ್ನು ಕಡ್ಡಾಯ ವಿಷಯವಾಗಿ ಪರಿಗಣಿಸಿ, ಅದರ ಜೊತೆಗೆ ಇತರ ನಾಲ್ಕು ವಿಷಯಗಳಲ್ಲಿ (ಒಟ್ಟು ಐದು ವಿಷಯಗಳಲ್ಲಿ) ಉತ್ತೀರ್ಣರಾಗಬೇಕು. ಒಟ್ಟಾರೆಯಾಗಿ ಶೇ. 33ರಷ್ಟು ಅಗ್ರಿಗೇಟ್ ಅಂಕಗಳನ್ನು ಪಡೆದರೆ ಮಾತ್ರ ವಿದ್ಯಾರ್ಥಿಯನ್ನು ಪಾಸ್ ಎಂದು ಘೋಷಿಸಲಾಗುತ್ತದೆ.












Click it and Unblock the Notifications