“I Hate Men”: ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆಯನ್ನು ಹೀಯಾಳಿಸಿದ ಡೆಂಟಿಸ್ಟ್ ಮುಸ್ಕಾನ್ ಸೋನಿ ಕೆಲಸವೇ ಹೋಯ್ತು!
ಪುಣೆಯ ಯುವ ಉದ್ಯಮಿ ಕೇತನ್ ಅಗರ್ವಾಲ್ ಅವರ ಭೀಕರ ಹತ್ಯೆ ಪ್ರಕರಣವು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿರುವ ಬೆನ್ನಲ್ಲೇ, ಈ ಕೊಲೆಯನ್ನು ಸಾಮಾಜಿಕ ಜಾಲತಾಣದಲ್ಲಿ ಸಮರ್ಥಿಸಿಕೊಂಡು ವಿಕೃತ ಸಂತೋಷ ಪಟ್ಟಿದ್ದ ದಂತ ವೈದ್ಯೆಯೊಬ್ಬರಿಗೆ ಈಗ ಕಾನೂನಿನ ಹಾಗೂ ವೃತ್ತಿಪರ ಸಂಘಟನೆಯಿಂದ ಬಹುದೊಡ್ಡ ಆಘಾತ ಎದುರಾಗಿದೆ.
ಕೇತನ್ ಸಾವನ್ನು ಅಪಹಾಸ್ಯ ಮಾಡಿ, ಆತನ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದ ಮಧ್ಯಪ್ರದೇಶದ ಭೋಪಾಲ್ ಮೂಲದ ವೈದ್ಯೆ ಡಾ. ಮುಸ್ಕಾನ್ ಸೋನಿ ಅವರನ್ನು 'ಆಲ್ ಇಂಡಿಯಾ ಡೆಂಟಲ್ ಸ್ಟೂಡೆಂಟ್ಸ್ ಅಂಡ್ ಸರ್ಜನ್ಸ್ ಅಸೋಸಿಯೇಷನ್' ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತುಗೊಳಿಸಿ ಕಠಿಣ ಆದೇಶ ಹೊರಡಿಸಿದೆ.

ಎಐಡಿಎಸ್‌ಎ ಸಂಘಟನೆಯಿಂದ ಕಠಿಣ ಕ್ರಮ
ಅಮಾನತುಗೊಂಡ ಡಾ. ಮುಸ್ಕಾನ್ ಸೋನಿ ಅವರು ಈ ಸಂಘಟನೆಯ ಮಧ್ಯಪ್ರದೇಶ ಘಟಕದ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಈ ಬೇಜವಾಬ್ದಾರಿ ಮತ್ತು ಅಮಾನವೀಯ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಎಐಡಿಎಸ್‌ಎ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ದಿವಾಕರ್ ಮೂಡೌಟಿಯಾ ಅವರು, ಐದು ವರ್ಷಗಳ ಕಾಲ ಮುಸ್ಕಾನ್ ಅವರನ್ನು ಸಂಘಟನೆಯಿಂದ ಉಚ್ಛಾಟಿಸಿದ್ದಾರೆ.
ಹಿಂಸೆಯನ್ನು ವೈಭವೀಕರಿಸುವ ಅಥವಾ ಸಮರ್ಥಿಸಿಕೊಳ್ಳುವ ಯಾವುದೇ ಕೃತ್ಯವನ್ನು ನಮ್ಮ ಸಂಘಟನೆ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಮಾನತು ಅವಧಿಯಲ್ಲಿ ಅವರು ಸಂಘಟನೆಯ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ ಹಾಗೂ ಯಾವುದೇ ಹುದ್ದೆಗಳಿಗೆ ಸ್ಪರ್ಧಿಸುವಂತೆಯೂ ಇಲ್ಲ ಎಂದು ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ.
ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಏನಿತ್ತು? ವೈರಲ್ ವಿವಾದದ ಹಿನ್ನೆಲೆ
ಕೇತನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯೇ ಆತನನ್ನು ಕಣಿವೆಗೆ ತಳ್ಳಿ ಕೊಂದ ಭೀಕರ ಘಟನೆಯ ಬಗ್ಗೆ ಡಾ. ಮುಸ್ಕಾನ್ ಸೋನಿ ಇನ್‌ಸ್ಟಾಗ್ರಾಮ್‌ನಲ್ಲಿ ವಿವಾದಾತ್ಮಕ ವಿಡಿಯೋ ಹಂಚಿಕೊಂಡಿದ್ದರು. ಕೊಲೆಯಾದ ಕೇತನ್ ತಲೆಕೂದಲು ಉದುರುವಿಕೆ ಸಮಸ್ಯೆಯಿಂದ ಹೇರ್ ಪ್ಯಾಚ್ ಬಳಸುತ್ತಿದ್ದ.
"ಪುಣೆಯ ಆ ಹುಡುಗನಿಗೆ ಕೂದಲೇ ಇರಲಿಲ್ಲ... ನೀನು ಇಂಥ ಸುಳ್ಳುಗಳನ್ನು ಹೇಳಿದರೆ ನಿಸ್ಸಂಶಯವಾಗಿಯೂ ಸಾಯುತ್ತೀಯಾ," ಎಂದು ವಿಡಿಯೋದಲ್ಲಿ ಸೋನಿ ಹೇಳಿದ್ದರು. ಅಷ್ಟೇ ಅಲ್ಲದೆ, ಆ ವಿಡಿಯೋ ಜೊತೆಗೆ "ಐ ಹೇಟ್ ಮೆನ್" ಎಂಬ ಹ್ಯಾಶ್‌ಟ್ಯಾಗ್ ಬಳಸುವ ಮೂಲಕ ಕೊಲೆಯನ್ನು ಪರೋಕ್ಷವಾಗಿ ಸಂಭ್ರಮಿಸಿದ್ದರು.
ಇದು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿ, ನೆಟ್ಟಿಗರು ಆಕೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿವಾದ ತಾರಕಕ್ಕೆ ಏರುತ್ತಿದ್ದಂತೆಯೇ ಎಚ್ಚೆತ್ತ ಸೋನಿ, ವಿಡಿಯೋ ಡಿಲೀಟ್ ಮಾಡಿ ಕ್ಷಮೆಯಾಚಿಸಿದರೂ, ಸಂಘಟನೆ ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ.
ಪುಣೆಯ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ಅಸಲಿಯತ್ತು
ಮಹಾರಾಷ್ಟ್ರದ ಖ್ಯಾತ ಉದ್ಯಮಿಯ ಪುತ್ರನಾದ ಕೇತನ್ ಅಗರವಾಲ್ ಮತ್ತು ಸಿಯಾ ಗೋಯಲ್ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸಣ್ಣ ಪ್ರಮಾಣದ ಕೂದಲು ಉದುರುವಿಕೆ ಸಮಸ್ಯೆಯ ಬಗ್ಗೆ ಕೇತನ್ ಕುಟುಂಬವು ಮೊದಲೇ ಸಿಯಾ ಕುಟುಂಬಕ್ಕೆ ಸ್ಪಷ್ಟವಾಗಿ ತಿಳಿಸಿತ್ತು. ಆದರೆ, ಕಳೆದ ಜೂನ್ 18ರಂದು ಪುಣೆ ಸಮೀಪದ ಲೋಹಗಢ ಕೋಟೆಯಲ್ಲಿ ಸಿಯಾ, ತನ್ನ ಪ್ರಿಯಕರ ಚೇತನ್ ಬಬುಲಾಲ್ ಚೌಧರಿ ಜೊತೆ ಸೇರಿ ಕೇತನ್‌ನನ್ನು ಆಳವಾದ ಕಂದಕಕ್ಕೆ ತಳ್ಳಿ ಬರ್ಬರವಾಗಿ ಹತ್ಯೆ ಮಾಡಿದ್ದಳು.
2025ರ ನವೆಂಬರ್‌ನಲ್ಲಿಯೇ ಚೇತನ್ ಜೊತೆ ಸಿಯಾಳ ಪ್ರೇಮ ಪ್ರಕರಣ ಆರಂಭವಾಗಿತ್ತು. ಕೇತನ್ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ಭಾವಿಸಿ ಇಬ್ಬರೂ ಸೇರಿ ಈ ಕೊಲೆ ಸಂಚು ರೂಪಿಸಿದ್ದರು. ಸದ್ಯ ಪುಣೆ ಪೊಲೀಸರು ಸಿಯಾ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿ, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.













Click it and Unblock the Notifications