ಮಳೆಗಾಲದಲ್ಲಿ ಡ್ರೈವ್ ಮಾಡುವ ಮಜಾನೇ ಬೇರೆ! ಪ್ರಕೃತಿಯ ಸೌಂದರ್ಯ ಸವಿಯಲು ಬೆಂಗಳೂರು-ಕೂರ್ಗ್ ಸೇರಿ ಭಾರತದ ಈ 5 ಮಾರ್ಗ ಬೆಸ್ಟ್
ಭಾರತದಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಪ್ರಕೃತಿಯು ಹೊಸ ಚೈತನ್ಯವನ್ನು ಪಡೆದುಕೊಳ್ಳುತ್ತದೆ. ಹಸಿರಿನಿಂದ ಕಂಗೊಳಿಸುವ ಬೆಟ್ಟಗಳು, ಜಲಪಾತಗಳು, ಮಂಜಿನಿಂದ ಆವರಿಸಿದ ಕಣಿವೆಗಳು ಮತ್ತು ತಂಪಾದ ಗಾಳಿ ಪ್ರಯಾಣವು ಮತ್ತಷ್ಟು ವಿಶೇಷವಾಗಿಸುತ್ತದೆ. ಈ ಸಮಯದಲ್ಲಿ ಪ್ರಕೃತಿ ಪ್ರೇಮಿಗಳು ರಸ್ತೆ ಮಾರ್ಗದಲ್ಲಿ ಸಂಚರಿಸುವುದೇ ಒಂದು ವಿಭಿನ್ನ ಅನುಭವ. ಮಳೆಗಾಲದಲ್ಲಿ ಭೇಟಿ ನೀಡಲು ಭಾರತದ ಕೆಲವು ಸುಂದರ ರೋಡ್ ಟ್ರಿಪ್ ಮಾರ್ಗಗಳು ಅತ್ಯಂತ ರೋಮಾಂಚಕ ಅನುಭವವನ್ನು ನೀಡುತ್ತದೆ.
1. ಮಲೆನಾಡಿನ ಮಡಿಲಿಗೆ ಭವ್ಯ ಪಯಣ: ಬೆಂಗಳೂರು - ಕೂರ್ಗ್ ರಸ್ತೆ
ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧಿಯಾಗಿರುವ ಕೂರ್ಗ್ ಅಥವಾ ಕೊಡಗು ಜಿಲ್ಲೆಯು ಮಳೆಗಾಲದಲ್ಲಿ ಭೂಲೋಕದ ಸ್ವರ್ಗದಂತೆ ಕಂಗೊಳಿಸುತ್ತದೆ. ಬೆಂಗಳೂರಿನಿಂದ ಮೈಸೂರು ಎಕ್ಸ್‌ಪ್ರೆಸ್‌ವೇ ಮೂಲಕ ಸಾಗಿ ಹುಣಸೂರು ಮಾರ್ಗವಾಗಿ ಕೊಡಗನ್ನು ತಲುಪುವ ಈ ರಸ್ತೆ ಪ್ರಯಾಣವು ಅತ್ಯಂತ ಮನಮೋಹಕವಾಗಿರುತ್ತದೆ. ಹೆದ್ದಾರಿಯಲ್ಲಿ ಸಾಗುತ್ತಿದ್ದಂತೆ ರಸ್ತೆಯಲ್ಲಿ ಕಾಣುವ ದಟ್ಟ ಕಾಡುಗಳು ಮತ್ತು ವಿಶಾಲವಾದ ಕೃಷಿ ಭೂಮಿಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತವೆ.
ಸುಮಾರು ಇನ್ನೂರ ಐವತ್ತು ಕಿಲೋಮೀಟರ್ ದೂರದ ಈ ಪ್ರಯಾಣದಲ್ಲಿ, ಕೊಡಗು ಸಮೀಪಿಸುತ್ತಿದ್ದಂತೆ ವಾತಾವರಣದಲ್ಲಿ ಮಹತ್ತರ ಬದಲಾವಣೆಯಾಗುತ್ತದೆ. ಗಾಳಿಯಲ್ಲಿ ತೇಲಿಬರುವ ಕಾಫಿ ತೋಟಗಳ ಹಿತವಾದ ಸುಗಂಧ ಹಾಗೂ ತಂಪಾದ ಮಂಜಿನ ಹನಿಗಳು ನಮ್ಮ ಆಯಾಸವನ್ನು ತಕ್ಷಣವೇ ದೂರ ಮಾಡುತ್ತವೆ. ಮಳೆಗಾಲದಲ್ಲಿ ಇಲ್ಲಿನ ಅಬ್ಬಿ ಜಲಪಾತ, ಮಂದಾಲಪಟ್ಟಿ ಮುಂತಾದ ಪ್ರವಾಸಿ ತಾಣಗಳು ತುಂಬಿ ಹರಿಯುತ್ತವೆ. ಈ ಹಸಿರು ಕಾಡುಗಳ ತಂಪಾದ ಹವಾಮಾನವು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಆನಂದಿಸಲು ಸೂಕ್ತವಾಗಿದೆ.

2. ಅರಬ್ಬಿ ಕಡಲ ಕಡೆಗೆ ಪ್ರಯಾಣ: ಮುಂಬೈ - ಗೋವಾ ಹೆದ್ದಾರಿ
ಮುಂಬೈಯಿಂದ ಗೋವಾಕ್ಕೆ ಹೋಗುವ ರಸ್ತೆ ಮಾರ್ಗವು ಮಳೆಗಾಲದಲ್ಲಿ ಅತ್ಯಂತ ಸುಂದರವಾಗಿ ಕಾಣಿಸುತ್ತದೆ. ಪಶ್ಚಿಮ ಘಟ್ಟಗಳ ನಡುವೆ ಸಾಗುವ ಈ ಮಾರ್ಗದಲ್ಲಿ ಹಚ್ಚಹಸಿರು ಬೆಟ್ಟಗಳು, ಜಲಪಾತಗಳು ಮತ್ತು ಸಮುದ್ರದ ನೋಟ ಮನಸೂರೆಗೊಳ್ಳುತ್ತದೆ. ಪ್ರಕೃತಿ ಪ್ರಿಯರಿಗೆ ಈ ಪ್ರಯಾಣ ಉತ್ತಮ ಆಯ್ಕೆಯಾಗಿದೆ.
3. ವಿಶಾಲ ಈಶಾನ್ಯದ ಮಂಜಿನ ಲೋಕ: ಗುವಾಹಟಿ - ಶಿಲ್ಲಾಂಗ್ ಮಾರ್ಗ
ಭಾರತದ ಈಶಾನ್ಯ ಭಾಗವಾದ ಮೇಘಾಲಯದತ್ತ ಸಾಗುವ ಈ ರಸ್ತೆ ಮಾರ್ಗವು ಮಳೆಗಾಲದಲ್ಲಿ ಬೇಟಿ ನೀಡುವುದೇ ಒಂದು ಅದ್ಬುತವಾದ ಅನುಭವ. ಆಸ್ಸಾಂನ ಗುವಾಹಟಿ ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಮಾರ್ಗ ಮಧ್ಯೆ ಸಿಗುವ ಉಮಿಯಾಂ ಸರೋವರ, ಮಂಜಿನಿಂದ ಆವರಿಸಿದ ಬೆಟ್ಟಗಳು ಹಾಗೂ ಹಸಿರು ದೃಶ್ಯಗಳು ಪ್ರಯಾಣವನ್ನು ಮತ್ತಷ್ಟು ಆಕರ್ಷಕವಾಗಿಸುತ್ತವೆ.
4. ಹಿಮಾಲಯದ ಸಾಹಸಮಯ ದಾರಿ: ಮನಾಲಿ - ಲೇಹ್ ಹೆದ್ದಾರಿ
ಸಾಹಸ ಮತ್ತು ಸವಾಲುಗಳನ್ನು ಇಷ್ಟಪಡುವ ಜೀವಿಗಳಿಗೆ ಹಿಮಾಚಲ ಪ್ರದೇಶದ ಮನಾಲಿಯಿಂದ ಲೇಹ್‌ಗೆ ಹೋಗುವ ರಸ್ತೆ ಪ್ರಯಾಣವು ಜೀವಮಾನದ ಸಾಧನೆಯಂತೆ ಭಾಸವಾಗುತ್ತದೆ. ಎತ್ತರದ ಪರ್ವತಗಳು, ಆಳವಾದ ಕಣಿವೆಗಳು ಮತ್ತು ಬದಲಾಗುವ ಹವಾಮಾನ ಈ ಪ್ರಯಾಣವನ್ನು ರೋಚಕವಾಗಿಸುತ್ತದೆ. ಆದರೆ ಮಳೆಗಾಲದಲ್ಲಿ ಹೊರಡುವ ಮೊದಲು ಹವಾಮಾನ ಹಾಗೂ ರಸ್ತೆ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಅಗತ್ಯ.
5. ಸಮುದ್ರ ತೀರದ ರಮಣೀಯ ಪಥ: ಚೆನ್ನೈ - ಪುದುಚೇರಿ ಈಸ್ಟ್ ಕೋಸ್ಟ್ ರಸ್ತೆ
ಸಮುದ್ರದ ಅಲೆಗಳ ಸದ್ದಿನೊಂದಿಗೆ ಮಳೆಹನಿಗಳನ್ನು ಆಸ್ವಾದಿಸಲು ಇಷ್ಟಪಡುವವರಿಗೆ ಚೆನ್ನೈನಿಂದ ಪುದುಚೇರಿಗೆ ಸಂಪರ್ಕ ಕಲ್ಪಿಸುವ ಈಸ್ಟ್ ಕೋಸ್ಟ್ ರಸ್ತೆ ಅತ್ಯಂತ ಸೂಕ್ತವಾದುದು. ಮಳೆಗಾಲದಲ್ಲಿ ಬಂಗಾಳ ಕೊಲ್ಲಿಯ ಸುಂದರ ನೋಟ, ತಂಪಾದ ವಾತಾವರಣ ಮತ್ತು ಮಾರ್ಗ ಮಧ್ಯೆ ಸಿಗುವ ಬೀಚ್‌ಗಳು ಹಾಗೂ ಕ್ಯಾಫೆಗಳು ಪ್ರಯಾಣದ ಅನುಭವವನ್ನು ಮತ್ತಷ್ಟು ವಿಶೇಷಗೊಳಿಸುತ್ತವೆ.
ಪ್ರಯಾಣಕ್ಕೂ ಮುನ್ನ ಗಮನಿಸಬೇಕಾದ ವಿಷಯಗಳು
ಮಳೆಗಾಲದಲ್ಲಿ ರಸ್ತೆ ಪ್ರಯಾಣಕ್ಕೆ ಹೊರಡುವ ಮೊದಲು ವಾಹನದ ಬ್ರೇಕ್, ಟೈರ್, ವೈಪರ್ ಹಾಗೂ ಲೈಟ್‌ಗಳನ್ನು ಪರಿಶೀಲಿಸಬೇಕು. ಹವಾಮಾನ ಮುನ್ಸೂಚನೆ ತಿಳಿದುಕೊಂಡು ಪ್ರಯಾಣ ಆರಂಭಿಸಿದರೆ ಸುರಕ್ಷಿತವಾಗಿ ಪ್ರವಾಸವನ್ನು ಆನಂದಿಸಬಹುದು. ಹಸಿರು ಪ್ರಕೃತಿ, ಜಲಪಾತಗಳು ಮತ್ತು ತಂಪಾದ ವಾತಾವರಣದ ನಡುವೆ ಮಳೆಗಾಲದಲ್ಲಿ ಈ ಐದು ರಸ್ತೆ ಮಾರ್ಗಗಳಲ್ಲಿ ಒಮ್ಮೆಯಾದರೂ ಪ್ರಯಾಣಿಸಿದರೆ ಮರೆಯಲಾಗದ ಅನುಭವ ನಿಮ್ಮದಾಗುತ್ತದೆ.














Click it and Unblock the Notifications