ಕೈಲಾಸ ಯಾತ್ರೆ 2026: ಭಕ್ತರಿಗೆ ಕೇಂದ್ರ ಸರ್ಕಾರ ಹೊರಡಿಸಿದ ಪ್ರಮುಖ ಪ್ರಯಾಣ ಮಾರ್ಗಸೂಚಿ
ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಲು ಸಿದ್ಧರಾಗಿರುವ ಭಕ್ತರಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ. ವಿದೇಶಗಳಲ್ಲಿ ಸಿಲುಕಿ ತೊಂದರೆ ಅನುಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೊಸ ಟ್ರಾವೆಲ್ ಅಡ್ವೈಸರಿ ಪ್ರಕಟಿಸಿದೆ. ಸೂಕ್ತ ಚೀನಾ ವೀಸಾ ಮತ್ತು ಪ್ರವೇಶ ಅನುಮತಿ ಪತ್ರ (ಎಂಟ್ರಿ ಪರ್ಮಿಟ್) ಇಲ್ಲದೆ ಯಾವುದೇ ಭಕ್ತರು ಗಡಿ ದಾಟಬಾರದು ಎಂದು ಸಚಿವಾಲಯ ಕಟ್ಟುನಿಟ್ಟಾಗಿ ತಿಳಿಸಿದೆ.
ಖಾಸಗಿ ಪ್ರವಾಸ ಸಂಸ್ಥೆಗಳ ಮೂಲಕ ಯಾತ್ರೆ ಕೈಗೊಳ್ಳುವವರು ಚೀನಾ ಸೇರಿದಂತೆ ಮಾರ್ಗ ಮಧ್ಯೆ ಅಗತ್ಯವಿರುವ ಎಲ್ಲಾ ದೇಶಗಳ ಮಾನ್ಯ ವೀಸಾ ಹಾಗೂ ಅಧಿಕೃತ ಪ್ರವೇಶ ಅನುಮತಿ ಪತ್ರಗಳನ್ನು (Entry Permit) ಮುಂಚಿತವಾಗಿಯೇ ಪಡೆದುಕೊಂಡ ನಂತರವೇ ಪ್ರಯಾಣ ಆರಂಭಿಸಬೇಕು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ನೇಪಾಳದ ಕಠ್ಮಂಡುವಿನಲ್ಲಿ ಸಿಲುಕಿದ 52 ಭಾರತೀಯ ಯಾತ್ರಿಕರು
ಇತ್ತೀಚೆಗೆ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಚೀನಾ ಪ್ರವೇಶ ಪರವಾನಗಿ ಹಾಗೂ ಮಾನ್ಯ ವೀಸಾ ಇಲ್ಲದ ಕಾರಣ ಸುಮಾರು 52 ಮಂದಿ ಭಾರತೀಯ ಯಾತ್ರಿಕರು ಸಿಲುಕಿಕೊಂಡಿದ್ದರು. ಕೈಲಾಸ ಮಾನಸ ಸರೋವರ ದರ್ಶನ ಪಡೆಯಲು ಖಾಸಗಿ ಆಪರೇಟರ್‌ಗಳ ಮೂಲಕ ತೆರಳಿದ್ದ ಈ ತಂಡವು ಅರ್ಧ ಹಾದಿಯಲ್ಲೇ ಅಸಹಾಯಕ ಸ್ಥಿತಿಗೆ ತಲುಪಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತುರ್ತು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಅಧಿಕೃತ ದಾಖಲೆಗಳು ಸಂಪೂರ್ಣವಾಗಿ ಕೈಗೆ ಸಿಗುವವರೆಗೆ ಯಾತ್ರೆ ಆರಂಭಿಸಬಾರದು. ಅಗತ್ಯ ಅನುಮತಿ ಪತ್ರಗಳಿಲ್ಲದೆ ಪ್ರಯಾಣಿಸಿದರೆ ಕಾನೂನು ಸಂಬಂಧಿತ ಸಮಸ್ಯೆಗಳು ಎದುರಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಈ ಯಾತ್ರಿಕರ ರಕ್ಷಣೆಗಾಗಿ ಮತ್ತು ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಂಸದೆ ಸುಪ್ರಿಯಾ ಸುಳೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಕಠ್ಮಂಡುವಿನಲ್ಲಿ ಕಾಯುತ್ತಿರುವ ಭಕ್ತರಿಗೆ ತಕ್ಷಣವೇ ಸುರಕ್ಷಿತ ವಸತಿ, ಆಹಾರ ಮತ್ತು ರಾಜತಾಂತ್ರಿಕ ನೆರವನ್ನು ಒದಗಿಸುವಂತೆ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರದ ಮೂಲಕ ವಿಶೇಷ ಮನವಿ ಸಲ್ಲಿಸಿದ್ದಾರೆ.
ಖಾಸಗಿ ಟೂರ್ ಆಪರೇಟರ್ ಆಯ್ಕೆ ಮಾಡುವಾಗ ಎಚ್ಚರಿಕೆ
ಯಾತ್ರಿಕರು ಖಾಸಗಿ ಟ್ರಾವೆಲ್ ಏಜೆನ್ಸಿಗಳ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗಲು ಯೋಜಿಸುತ್ತಿದ್ದರೆ, ಆ ಸಂಸ್ಥೆಗಳಿಗೆ ಸರ್ಕಾರದ ಅಧಿಕೃತ ನೋಂದಣಿ ಇದೆಯೇ ಎಂಬುದನ್ನು ಮೊದಲು ಸೂಕ್ಷ್ಮವಾಗಿ ಪರಿಶೀಲಿಸುವುದು ಅಗತ್ಯ. ಭಾರತೀಯ ಪ್ರವಾಸೋದ್ಯಮ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರಗಳ ಇಲಾಖೆಯಿಂದ ಮಾನ್ಯತೆ ಪಡೆದಿರುವ ಸಂಸ್ಥೆಗಳನ್ನು ಮಾತ್ರ ಯಾತ್ರೆಗೆ ಆಯ್ದುಕೊಳ್ಳಬೇಕು.
ಅನುಮತಿ ಇಲ್ಲದ ಪ್ರವಾಸ ಸಂಸ್ಥೆಗಳ ಸೇವೆ ಬಳಸಿದರೆ ವಿದೇಶಗಳಲ್ಲಿ ಆರ್ಥಿಕ ನಷ್ಟ, ಕಾನೂನು ಸಮಸ್ಯೆಗಳು ಹಾಗೂ ಮಾನಸಿಕ ತೊಂದರೆಗಳನ್ನು ಎದುರಿಸಬೇಕಾಗಬಹುದು ಎಂದು ಸಚಿವಾಲಯ ತಿಳಿಸಿದೆ.
ಮೊದಲ ತಂಡ ಈಗಾಗಲೇ ಚೀನಾಕ್ಕೆ ಪ್ರವೇಶ
ಈ ವರ್ಷದ ಕೈಲಾಸ ಮಾನಸ ಸರೋವರ ಯಾತ್ರೆಯ ಮೊದಲ ತಂಡ ಜೂನ್ 20ರಂದು ಭಾರತ-ಚೀನಾ ಗಡಿಯ ನಾಥುಲಾ ಪಾಸ್ ಮೂಲಕ ಚೀನಾಕ್ಕೆ ಪ್ರವೇಶಿಸಿದೆ. ಸರ್ಕಾರದ ಅಧಿಕೃತ ವ್ಯವಸ್ಥೆಯಡಿ ನಡೆಯುತ್ತಿರುವ ಯಾತ್ರೆಗಳು ಸುಗಮವಾಗಿ ಸಾಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕೆಲವು ಖಾಸಗಿ ಟೂರ್ ಆಪರೇಟರ್‌ಗಳ ನಿರ್ಲಕ್ಷ್ಯದಿಂದ ಸಾಮಾನ್ಯ ಯಾತ್ರಿಕರು ಗಡಿಯಲ್ಲಿ ಸಿಲುಕುವ ಘಟನೆಗಳು ನಡೆಯುತ್ತಿರುವುದಾಗಿ ವಿದೇಶಾಂಗ ಇಲಾಖೆ ತಿಳಿಸಿದೆ.
ಯಾತ್ರಿಕರಿಗೆ ನೆರವು ನೀಡುವಂತೆ ಮನವಿ
ನೇಪಾಳದಲ್ಲಿ ಭಾರತದ 52 ಯಾತ್ರಿಕರು ಸಿಲುಕಿರುವ ಸುದ್ದಿ ಈಗ ಮುಂಚೂಣಿಗೆ ಬಂದಿದ್ದು, ಅವರ ಸುರಕ್ಷತೆಯ ಬಗ್ಗೆ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಕಳವಳ ವ್ಯಕ್ತಪಡಿಸಿದ್ದಾರೆ. ತೊಂದರೆಯಲ್ಲಿರುವ ನಮ್ಮ ದೇಶದ ಯಾತ್ರಿಕರಿಗೆ ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೂಲಕ ತಕ್ಷಣವೇ ರಕ್ಷಣೆ ಮತ್ತು ಆಡಳಿತಾತ್ಮಕ ನೆರವು ಒದಗಿಸಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕಠ್ಮಂಡುವಿನಲ್ಲಿ ಸಿಲುಕಿರುವ ಭಕ್ತರಿಗೆ ತಕ್ಷಣ ವಸತಿ, ಅಗತ್ಯ ನೆರವು ಹಾಗೂ ದೌತ್ಯ ಸಹಾಯ ಒದಗಿಸುವಂತೆ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ಕಠ್ಮಂಡು ಮತ್ತು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ಮೂಲಕ ಯಾತ್ರಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.














Click it and Unblock the Notifications