Tourist Vehicle Rules: ಪ್ರವಾಸಿ ವಾಹನ ಸವಾರರೇ ಗಮನಿಸಿ: ಹೊರ ರಾಜ್ಯಗಳಲ್ಲಿ ತಂಗುವ ಅವಧಿ 60 ದಿನಗಳಿಗೆ ಕಡಿತ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಖಿಲ ಭಾರತ ಪ್ರವಾಸಿ ಪರವಾನಗಿ (ಎಐಟಿಪಿ) ನಿಯಮಗಳಲ್ಲಿ ಮಹತ್ವದ ತಿದ್ದುಪಡಿಗಳನ್ನು ತಂದಿದ್ದು, ಇವು ಏಪ್ರಿಲ್ 1ರಿಂದಲೇ ಜಾರಿಗೆ ಬಂದಿವೆ. ಪ್ರವಾಸಿ ವಾಹನಗಳ ಸಂಚಾರದಲ್ಲಿ ಪಾರದರ್ಶಕತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹೊಸ ನಿಯಮದಲ್ಲಿ ಪ್ರಮುಖವಾಗಿ ಹೊರ ರಾಜ್ಯಗಳಲ್ಲಿ ಪ್ರವಾಸಿ ವಾಹನಗಳು ತಂಗುವ ಗರಿಷ್ಠ ಅವಧಿಯನ್ನು ಕಡಿತಗೊಳಿಸಲಾಗಿದೆ.
ಸಂಚಾರ ಅವಧಿಯಲ್ಲಿ ಕಡಿತ
ಹೊಸ ತಿದ್ದುಪಡಿಯ ಪ್ರಕಾರ, ಹೊರ ರಾಜ್ಯಗಳಲ್ಲಿ ಪ್ರವಾಸಿ ವಾಹನಗಳು ತಂಗುವ ಗರಿಷ್ಠ ಅವಧಿಯನ್ನು 90 ದಿನಗಳಿಂದ 60 ದಿನಗಳಿಗೆ ಕಡಿತಗೊಳಿಸಲಾಗಿದೆ. ಪ್ರತಿ ಪ್ರವಾಸವು ವಾಹನ ನೋಂದಣಿಯಾದ ಸ್ವಂತ ರಾಜ್ಯದಿಂದಲೇ ಆರಂಭವಾಗಬೇಕು ಮತ್ತು ಅಲ್ಲಿಯೇ ಕೊನೆಗೊಳ್ಳಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ.

ಟ್ರ್ಯಾಕಿಂಗ್ ಅಳವಡಿಕೆ
ವಾಹನಗಳ ಚಲನವಲನದ ಮೇಲೆ ನಿಗಾ ಇಡಲು ಜಿಪಿಎಸ್ (GPS) ಮತ್ತು ಟ್ರ್ಯಾಕಿಂಗ್ ಸಾಧನಗಳನ್ನು ಅಳವಡಿಸುವುದು ಇನ್ನು ಮುಂದೆ ಕಡ್ಡಾಯ. ಇದರಿಂದ ವಾಹನಗಳು ನಿಗದಿತ ಮಾರ್ಗದಲ್ಲಿ ಸಂಚರಿಸುತ್ತಿವೆಯೇ ಎಂಬುದನ್ನು ಅಧಿಕಾರಿಗಳು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ. ಪರವಾನಗಿ (Permit) ಪಡೆಯುವ ಮೊದಲು ವಾಹನ ಮಾಲೀಕರು ತಮ್ಮ ಹೆಸರಿನಲ್ಲಿರುವ ಎಲ್ಲಾ ಬಾಕಿ ಟೋಲ್ ಶುಲ್ಕಗಳನ್ನು ಪಾವತಿಸಿರಬೇಕು. ಬಾಕಿ ಉಳಿಸಿಕೊಂಡಿದ್ದರೆ ಅಂತಹ ವಾಹನಗಳಿಗೆ ಹೊಸ ಪರವಾನಗಿ ನೀಡಲಾಗುವುದಿಲ್ಲ ಎಂದು ಎಚ್ಚರಿಸಲಾಗಿದೆ.
ಪ್ರವಾಸಿ ವಾಹನಗಳು ಕೇವಲ ಪ್ರವಾಸಿ ಉದ್ದೇಶಕ್ಕೆ ಮಾತ್ರ ಬಳಕೆಯಾಗಬೇಕು. ಈ ವಾಹನಗಳನ್ನು 'ಸ್ಟೇಜ್ ಕ್ಯಾರೇಜ್' (ನಿಗದಿತ ನಿಲುಗಡೆ ಇರುವ ಸಾರಿಗೆ ಬಸ್‌ಗಳಂತೆ) ಬಳಸುವಂತಿಲ್ಲ. ಅಲ್ಲದೆ, ಪ್ರಯಾಣಿಕರ ಪಟ್ಟಿಯಲ್ಲಿ ಹೆಸರಿಲ್ಲದ ವ್ಯಕ್ತಿಗಳನ್ನು ಕರೆದೊಯ್ಯುವಂತಿಲ್ಲ. ಚಾಲಕರು ಅಥವಾ ಆಪರೇಟರ್‌ಗಳು ಪ್ರಯಾಣದ ಸಂಪೂರ್ಣ ವಿವರಗಳನ್ನು ಯಾವಾಗಲೂ ತಮ್ಮೊಂದಿಗೆ ಇಟ್ಟುಕೊಂಡಿರಬೇಕು. ಪ್ರಸ್ತುತ ಚಾಲ್ತಿಯಲ್ಲಿರುವ ಇತರ ಪರವಾನಗಿ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಚಿವಾಲಯವು ಸ್ಪಷ್ಟಪಡಿಸಿದೆ. ಈ ಹೊಸ ನಿಯಮಗಳಿಂದಾಗಿ ಅಕ್ರಮ ಸಂಚಾರಕ್ಕೆ ಕಡಿವಾಣ ಬೀಳಲಿದ್ದು, ಪ್ರವಾಸಿಗರ ಸುರಕ್ಷತೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ವಾಹನಗಳ ಟ್ರ್ಯಾಕಿಂಗ್ ಮತ್ತು ಪ್ರಯಾಣಿಕರ ಸುರಕ್ಷತೆಗೆ ಈ ನಿಯಮಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತಿ ಎಐಟಿಪಿ ಹೊಂದಿರುವ ವಾಹನದಲ್ಲಿ ಟ್ರ್ಯಾಕಿಂಗ್ ಸಾಧನವನ್ನು ಅಳವಡಿಸುವುದು ಕಡ್ಡಾಯವಾಗಿದ್ದು, ಇದನ್ನು ಕೇಂದ್ರೀಯ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಮೂಲಕ ಗಮನಿಸಲಾಗುತ್ತದೆ. ಪ್ರವಾಸಿ ಪರವಾನಗಿಯ ದುರುಪಯೋಗವನ್ನು ತಡೆಗಟ್ಟುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ. ಅಲ್ಲದೆ, ಪಾವತಿಸದ ಟೋಲ್ ಶುಲ್ಕಗಳನ್ನು ಇನ್ನು ಮುಂದೆ 'ಬಳಕೆದಾರರ ಶುಲ್ಕ' ಎಂದು ಪರಿಗಣಿಸಲಾಗುವುದು. ಯಾವುದೇ ವಾಹನಕ್ಕೆ ಹೊಸದಾಗಿ ಪರವಾನಗಿ ನೀಡುವ ಮೊದಲು ಆ ವಾಹನದ ಹೆಸರಿನಲ್ಲಿರುವ ಎಲ್ಲ ಟೋಲ್ ಬಾಕಿ ಪಾವತಿಸಿರುವುದನ್ನು ಖಚಿತಪಡಿಸಿಕೊಳ್ಳಲಾಗುವುದು.
ಈ ದಾಖಲೆ ಕಡ್ಡಾಯ
ಪ್ರಯಾಣದ ದಾಖಲೆಗಳ ನಿರ್ವಹಣೆಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ವಾಹನ ನಿರ್ವಾಹಕರು ಪ್ರಯಾಣದ ಆರಂಭದ ಸ್ಥಳ, ತಲುಪುವ ಸ್ಥಳ ಮತ್ತು ಮಾರ್ಗದಲ್ಲಿ ಹಾದುಹೋಗುವ ರಾಜ್ಯಗಳ ವಿವರಗಳನ್ನು ಒಳಗೊಂಡ ಡಿಜಿಟಲ್ ಅಥವಾ ಭೌತಿಕ ದಾಖಲೆಗಳನ್ನು ಹೊಂದಿರಬೇಕು. ಸಾರಿಗೆ ತಪಾಸಣೆ ಸಮಯದಲ್ಲಿ ಈ ದಾಖಲೆಗಳನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ. ಪ್ರಮುಖವಾಗಿ, ಪ್ರವಾಸಿ ವಾಹನಗಳನ್ನು ನಿಯಮಿತ ಸಾರಿಗೆ ಬಸ್‌ಗಳಂತೆ ಬಳಸಲು ಅಥವಾ ಪಟ್ಟಿಯಲ್ಲಿಲ್ಲದ ಪ್ರಯಾಣಿಕರನ್ನು ಹತ್ತಿಸಲು ಮತ್ತು ಇಳಿಸಲು ಅವಕಾಶವಿರುವುದಿಲ್ಲ.
ಇನ್ನು ಕೆಲವು ಹಳೆಯ ನಿಯಮಗಳು ಮುಂದುವರಿಯಲಿದ್ದು, ಪರವಾನಗಿಯನ್ನು ವಾಹನ ನೋಂದಣಿಯಾದ ರಾಜ್ಯದ ಸಾರಿಗೆ ಪ್ರಾಧಿಕಾರದಿಂದಲೇ ಪಡೆಯಬೇಕಾಗುತ್ತದೆ. ಈ ಪರವಾನಗಿಯು ತ್ರೈಮಾಸಿಕ ಅಥವಾ ವಾರ್ಷಿಕ ಮಾನ್ಯತೆ ಹೊಂದಿದ್ದು, ಗರಿಷ್ಠ 5 ವರ್ಷಗಳ ಅವಧಿಯದ್ದಾಗಿರುತ್ತದೆ. ವಾಹನದ ಮೇಲೆ ಯಾವುದೇ ರೀತಿಯ ಬಾಕಿ ಚಲನ್ ಇರಬಾರದು ಮತ್ತು ಎಲ್ಲ ದಾಖಲೆಗಳು ಚಾಲ್ತಿಯಲ್ಲಿರುವುದು ಅತ್ಯಗತ್ಯ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಶಿಸ್ತು ಮತ್ತು ಪಾರದರ್ಶಕತೆ ತರಲು ಸಾರಿಗೆ ಇಲಾಖೆ ಮುಂದಾಗಿದೆ.












Click it and Unblock the Notifications