ಲೋಕಸಭಾ ಚುನಾವಣಾ ಫಲಿತಾಂಶ ನೋಡುವುದು ಹೇಗೆ?
ಬೆಂಗಳೂರು, ಜೂನ್. 03: ಲೋಕಸಭೆ ಚುನಾವಣೆ 2024 ಏಳು ಹಂತಗಳಲ್ಲಿ ನಡೆದಿದೆ. 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎಲ್ಲಾ 543 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಜೂನ್ 1 ರಂದು ಶನಿವಾರ ಕೊನೆಯ ಹಂತದ ಮತದಾನ ನಡೆದಿದ್ದು, ಜೂನ್ 4 ರಂದು ಮಂಗಳವಾರ ಫಲಿತಾಂಶಗಳನ್ನು ಪ್ರಕಟಿಸಲಾಗುವುದು.
ಏಪ್ರಿಲ್ 19 ರಂದು ಹಂತ 1, ಏಪ್ರಿಲ್ 26 ರಂದು ಹಂತ 2, ಮೇ 7 ರಂದು ಹಂತ 3, ಮೇ 13 ರಂದು ಹಂತ 4, ಮೇ 20 ರಂದು ಹಂತ 5, ಮೇ 25 ರಂದು ಹಂತ 6 ಮತ್ತು ಜೂನ್ 1 ಕೊನೆಯ ಹಂತಗಳ ಮತದಾನ ನಡೆದಿದೆ. ಈಗಾಗಲೇ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್‌ಗಳು ಬಿಜೆಪಿಯ ಗೆಲುವು ಪಕ್ಕಾ ಎಂದಿವೆ.

ಜೂನ್ 1 ರಂದು, ಸಾರ್ವತ್ರಿಕ ಚುನಾವಣೆಯ ಮತದಾನದ ಮುಕ್ತಾಯದ ನಂತರ, ಭಾರತೀಯ ಚುನಾವಣಾ ಆಯೋಗವು (ಇಸಿಐ) "2024 ರ ಸಾರ್ವತ್ರಿಕ ಚುನಾವಣೆಯ ಎಣಿಕೆಯ ದಿನಕ್ಕಾಗಿ ವ್ಯವಸ್ಥೆಗಳು" ಎಂಬ ಶೀರ್ಷಿಕೆಯೊಂದಿಗೆ ಪತ್ರಿಕಾ ಟಿಪ್ಪಣಿಯನ್ನು ಪೋಸ್ಟ್ ಮಾಡಿದೆ. ಇದರಲ್ಲಿ ಹಲವು ಮಾಹಿತಿಗಳನ್ನು ಹಂಚಿಕೊಂಡಿದೆ.
ಎಣಿಕೆ ಯಾವಾಗ ಪ್ರಾರಂಭವಾಗುತ್ತದೆ?
2024 ರ ಲೋಕಸಭಾ ಚುನಾವಣೆಯ ಮತ ಎಣಿಕೆ, ಆಂಧ್ರಪ್ರದೇಶ ಮತ್ತು ಒಡಿಶಾದ ರಾಜ್ಯ ವಿಧಾನಸಭೆಗಳು ಮತ್ತು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆದಿವೆ. ಈ ಎಲ್ಲಾ ಚುನಾವಣೆಯ ಮತ ಏಣಿಕೆ ಮಂಗಳವಾರ, ಜೂನ್ 4 ರಂದು ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆಯನ್ನು ಭಾನುವಾರ, ಜೂನ್ 2 ರಂದು ನಡೆಸಲಾಗಿದೆ. ಸಿಕ್ಕಿಂನಲ್ಲಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) 32 ರಲ್ಲಿ 31 ರ ಸ್ಥಾನಗಳನ್ನು ಜಯಗಳಿಸುವ ಮೂಲಕ ಪ್ರಬಲ ಗೆಲುವು ಸಾಧಿಸಿದೆ. ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 60 ಸ್ಥಾನಗಳಲ್ಲಿ 46 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಲಿದೆ
ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರು (ಇಸಿ) ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರು ಎಲ್ಲಾ ಮುಖ್ಯ ಚುನಾವಣಾ ಅಧಿಕಾರಿಗಳು ಮತ್ತು ಚುನಾವಣಾಧಿಕಾರಿಗಳೊಂದಿಗೆ ಮತ ಎಣಿಕೆ ದಿನದ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ಚುನಾವಣಾ ಫಲಿತಾಂಶಗಳನ್ನು ಪರಿಶೀಲಿಸುವುದು ಹೇಗೆ?
ವಿಧಾನಸಭಾ ಕ್ಷೇತ್ರ/ಸಂಸತ್ತಿನ ಕ್ಷೇತ್ರಕ್ಕಾಗಿ ಚುನಾವಣಾಧಿಕಾರಿ/ಸಹಾಯಕ ಚುನಾವಣಾಧಿಕಾರಿಗಳು ನಮೂದಿಸಿದ ಡೇಟಾದ ಪ್ರಕಾರ ಎಣಿಕೆಯ ಮಾಹಿತಿಗಳು ಮತ್ತು ಫಲಿತಾಂಶಗಳು ಇಸಿಐ ವೆಬ್‌ಸೈಟ್‌ನಲ್ಲಿ https://results.eci.gov.in/ URL ನಲ್ಲಿ ಲಭ್ಯವಿರುತ್ತವೆ. ಮತದಾರರ ಸಹಾಯವಾಣಿ ಅಪ್ಲಿಕೇಶನ್‌ನಲ್ಲಿ, iOS ಮತ್ತು Android ಮೊಬೈಲ್ ಅಪ್ಲಿಕೇಶನ್‌ಗಳಲ್ಲಿಯೂ ಫಲಿತಾಂಶ ನೋಡಬಹುದು.
ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ "ರಿಟರ್ನಿಂಗ್ ಆಫೀಸರ್‌ಗಳು ಮತ್ತು ಎಣಿಕೆ ಏಜೆಂಟ್‌ಗಳಿಗಾಗಿ ಕೈಪಿಡಿ" ಅನ್ನು ನೋಡಬಹುದು ಎಂದು ಮತಗಟ್ಟೆ ಸಂಸ್ಥೆ ತಿಳಿಸಿದೆ.
ಮತದಾರರ ಸಹಾಯವಾಣಿ ಅಪ್ಲಿಕೇಶನ್
ಮತದಾರರ ಸಹಾಯವಾಣಿ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಗೆಲುವು, ಮುನ್ನಡೆ, ಅಥವಾ ಹಿಂದುಳಿದ ಅಭ್ಯರ್ಥಿಗಳ ವಿವರಗಳನ್ನು ಮತ್ತು ಕ್ಷೇತ್ರವಾರು ಅಥವಾ ರಾಜ್ಯವಾರು ಫಲಿತಾಂಶಗಳನ್ನು ವೀಕ್ಷಿಸಲು ಲಭ್ಯವಿರುವ ಫಿಲ್ಟರ್‌ಗಳನ್ನು ಬಳಕೆದಾರರು ಬಳಸಬಹುದು.












Click it and Unblock the Notifications