Good News: ಕೊರೊನಾವೈರಸ್ ರೂಪಾಂತರಗಳ ಪತ್ತೆಗೆ ಹೊಸ RT-PCR ಕಿಟ್!
ನವದೆಹಲಿ, ಮೇ 20: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯನ್ನು ಎದುರಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಕೊವಿಡ್-19 ಸೋಂಕು ಪತ್ತೆಗಾಗಿ ಹೊಸ RT-PCR ಕಿಟ್ ಅನ್ನು ಸಿದ್ಧಪಡಿಸಿದೆ.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವ್ಯಾಪ್ತಿಯಲ್ಲಿ ಬರುವ ಇನ್ಸ್ ಟಿಟ್ಯೂಟ್ ಆಫ್ ನ್ಯಾಷನಲ್ ಟೆಕ್ನಾಲಜಿ ಹಾಗೂ ಶ್ರೀ ಚಿತ್ರಾ ತಿರುನಲ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ ಕಂಪನಿಗಳು ಈ RT-PCR ಕಿಟ್ ಅನ್ನು ಅಭಿವೃದ್ಧಿಪಡಿಸಿವೆ.
ದೇಶದಲ್ಲಿ ಕೊರೊನಾವೈರಸ್ ಸೋಂಕಿನ ರೂಪಾಂತರ ತಳಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆ ಸಾರ್ಸ್-ಕೊವಿಡ್-2 ರೂಪಾಂತರವನ್ನು ಗುರುತಿಸಲು ಹೊಸ RT-PCR ಕಿಟ್ ತಯಾರಿಸಲಾಗಿದ್ದು, ವಿಭಿನ್ನ ರೂಪಾಂತರ ವೈರಸ್ ಪತ್ತೆ ಮಾಡುವುದಕ್ಕೆ ಸಹಕಾರಿ ಆಗಲಿದೆ. ಹೊಸ RT-PCR ಕಿಟ್ ಬಳಕೆ ಹೇಗೆ, ಈ ಕಿಟ್ ಮೂಲಕ ರೂಪಾಂತರ ವೈರಸ್ ಪತ್ತೆ ಮಾಡುವುದು ಹೇಗೆ ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ಓದಿ.

ರೂಪಾಂತರ ಕೊರೊನಾವೈರಸ್ ಸೋಂಕಿನ ಪತ್ತೆ
ಭಾರತದಲ್ಲಿ ಸಾರ್ಸ್-ಕೊವಿಡ್-2 ರೂಪಾಂತರ ತಳಿಯ ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಡಬೇಕಿದೆ. ಕೊವಿಡ್-19 ಸೋಂಕನ್ನು ಪತ್ತೆ ಮಾಡುವುದರಲ್ಲಿ ಹೊಸ RT-PCR ಕಿಟ್ ಪ್ರಮುಖ ಅಸ್ತ್ರವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಕಂಪನಿ ಕಾರ್ಯದರ್ಶಿ ಆಶುತೋಶ್ ಶರ್ಮಾ ತಿಳಿಸಿದ್ದಾರೆ.

ಕೊರೊನಾವೈರಸ್ ರೂಪಾಂತರಗಳ ಪತ್ತೆ ಹೇಗೆ ಸಾಧ್ಯ?
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ಹೊಸ RT-PCR ಕಿಟ್ ನೇರವಾಗಿ ಸಾರ್ಸ್-ಕೊವಿಡ್-2 ರೂಪಾಂತರ ತಳಿಗಳನ್ನು ಗುರುತಿಸುತ್ತದೆ. ಕೊರೊನಾವೈರಸ್ ಸೋಂಕಿನ RnRp ಮತ್ತು ORFb-nsp14 ಎಂಬ ಅನುವಂಶಿಕ ಧಾತು ಹಾಗೂ ಮನುಷ್ಯನ ದೇಹದಲ್ಲಿ ಆಂತರಿಕ ನಿಯಂತ್ರಣವನ್ನು ಹೊಂದಿರುವ RNAse P ಎಂಬ ಅನುವಂಶೀಯ ಧಾತುವಿನ ಮೂಲಕ ರೂಪಾಂತರ ತಳಿಯನ್ನು ಪತ್ತೆ ಮಾಡುತ್ತದೆ.

ಕೊರೊನಾವೈರಸ್ ಎರಡನೇ ಅಲೆಯ ಪತ್ತೆ ವಿಧಾನ
ಭಾರತದಲ್ಲಿ ನಡೆಸಿರುವ ಹಲವು ಅಧ್ಯಯನಗಳ ಪ್ರಕಾರ, ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯ ರೂಪಾಂತರ ತಳಿಗಳನ್ನು ಗುರುತಿಸಲು ಅನುವಂಶೀಯ ವಿಧಾನ ಬಳಸಲಾಗುತ್ತಿದೆ. RdRp ಮತ್ತುORDlb-nspl4 ಎಂಬ ಅನುವಂಶಿಕ ಧಾತುಗಳು ತೀರಾ ಸೂಕ್ಷ್ಮವಾಗಿವಾಗಿದ್ದು, ಕೊವಿಡ್-19 ಸೋಂಕಿನ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಕೊರೊನಾ 2ನೇ ಅಲೆಯಲ್ಲಿ ಹರಡುತ್ತಿರುವ ರೂಪಾಂತರ ತಳಿಗಳನ್ನು ಇದೇ RdRp ಮತ್ತುORDlb-nspl4 ಅನುವಂಶೀಯ ಧಾತುಗಳ ಸಹಕಾರದಿಂದ ಗುರುತಿಸಲಾಗುತ್ತಿದೆ. ORFb-nspl4 ಎಂಬುದು ಕೊರೊನಾವೈರಸ್ ಸೋಂಕಿನ ಒಂದು ಸೂಕ್ಷ್ಮ ಅನುವಂಶಿಕ ಧಾತುವಾಗಿದೆ. ಈ ಧಾತುವನ್ನು ಗುರುತಿಸುವ ಸಾಮರ್ಥ್ಯವುಳ್ಳ ಯಾವುದೇ ಕಿಟ್ ಮಾರುಕಟ್ಟೆಯಲ್ಲಿ ಇಲ್ಲ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮಾಹಿತಿ ನೀಡಿದೆ.

ಮೂರು ಧಾತುಗಳ ಮೇಲೆ ಏಕಕಾಲದಲ್ಲೇ ಪರೀಕ್ಷೆ
ಹೊಸ RT-PCR ಕಿಟ್ ಏಕಕಾಲದಲ್ಲಿ ಕೊರೊನಾವೈರಸ್ ಸೋಂಕಿನ ಮೂರು ಅನುವಂಶೀಯ ಧಾತುಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ನಾಸೊಫಾರ್ಂಜಿಯಲ್ ಸ್ವ್ಯಾಬ್ ಮಾದರಿ ಸೇರಿದಂತೆ ಎರಡು ದೃಢೀಕೃತ ಧಾತುಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತೆ. ಈ ಧಾತುಗಳಿಂದ ಕೊರೊನಾವೈರಸ್ ಸೋಂಕಿನ ರೂಪಾಂತರ ತಳಿಗಳನ್ನು ಪತ್ತೆ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಕೂಡ ಈ RT-PCR ಕಿಟ್ ಅನ್ನು ಅನುಮೋದಿಸಿದೆ. ಪುಣೆಯ ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರದ ಸಂಸ್ಥೆ ಕೂಡ ಕೊರೊನಾವೈರಸ್ ಸೋಂಕು ಪತ್ತೆಯಲ್ಲಿ ಈ ಕಿಟ್ ಶೇ.97.30ರಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಿದೆ.

ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಅಂಕಿ-ಸಂಖ್ಯೆ
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,76,070 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 3,69,077 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದು ದಿನದಲ್ಲಿ ಮಹಾಮಾರಿಗೆ 3,874 ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿ ಒಟ್ಟು 2,57,72,400 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,23,55,440 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 2,87,122 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 31,29,878 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.

ದೇಶದಲ್ಲಿ ಕೊರೊನಾವೈರಸ್ ಸೋಂಕಿನ ಪರೀಕ್ಷೆ
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪತ್ತೆಗೆ ತಪಾಸಣೆ ವೇಗವನ್ನು ಹೆಚ್ಚಿಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 20,55,010 ಜನರ ಮಾದರಿಯನ್ನು ತಪಾಸಣೆಗೊಳಪಡಿಸಲಾಗಿದೆ. ದೇಶದಲ್ಲಿ ಈವರೆಗೂ 32,23,56,187 ಜನರಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.












Click it and Unblock the Notifications