House Rent Allowance: ಬೆಂಗಳೂರು ಸೇರಿ ಈ ನಗರಗಳಲ್ಲಿ ಮನೆ ಬಾಡಿಗೆ ಭತ್ಯೆಗೆ ತೆರಿಗೆ ವಿನಾಯಿತಿ: ಕೇಂದ್ರದಿಂದ ಪ್ರಸ್ತಾವನೆ
ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ ವಾಸಿಸುವ ಸಂಬಳದ ಉದ್ಯೋಗಿಗಳಿಗೆ ಭಾರೀ ತೆರಿಗೆ ರಿಯಾಯಿತಿ ಸಿಗುವ ಸಾಧ್ಯತೆ ಇದೆ. ಹಳೆಯ ತೆರಿಗೆ ವ್ಯವಸ್ಥೆಯಡಿ ಮನೆ ಬಾಡಿಗೆ ಭತ್ಯೆ (House Rent Allowance) ಮೇಲಿನ ತೆರಿಗೆ ವಿನಾಯಿತಿ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಹತ್ವದ ಬದಲಾವಣೆಗಳನ್ನು ಪ್ರಸ್ತಾವಿಸಿದೆ. ಈಗಿರುವ ವ್ಯವಸ್ಥೆಯಂತೆ ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಚೆನ್ನೈ ನಗರಗಳಲ್ಲಿ ವಾಸಿಸುವ ಸಂಬಳದ ಉದ್ಯೋಗಿಗಳಿಗೆ ಸಂಬಳದ ಶೇ 50ರವರೆಗೆ ಮನೆ ಬಾಡಿಗೆ ಭತ್ಯೆ ತೆರಿಗೆ ವಿನಾಯಿತಿ ಲಭ್ಯವಿದೆ. ಇತರ ನಗರಗಳಲ್ಲಿ ವಾಸಿಸುವವರಿಗೆ ಈ ವಿನಾಯಿತಿ ಶೇ 40ರಷ್ಟು ಸೀಮಿತವಾಗಿದೆ.
ಆದರೆ ಇದೀಗ ಕೇಂದ್ರ ಸರ್ಕಾರದ ಪ್ರಸ್ತಾವನೆಯಂತೆ, ಈ ಶೇ 50ರಷ್ಟು ಮನೆ ಬಾಡಿಗೆ ಭತ್ಯೆ ವಿನಾಯಿತಿಯ ಪಟ್ಟಿಗೆ ಇನ್ನೂ ನಾಲ್ಕು ಪ್ರಮುಖ ನಗರಗಳನ್ನು ಸೇರಿಸಲು ಚಿಂತನೆ ನಡೆಸಲಾಗುತ್ತಿದೆ. ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಅಹಮದಾಬಾದ್ ನಗರಗಳನ್ನೂ ಮೆಟ್ರೋ ನಗರಗಳಂತೆ ಪರಿಗಣಿಸಿ, ಇಲ್ಲಿ ವಾಸಿಸುವ ಉದ್ಯೋಗಿಗಳಿಗೆ ಸಂಬಳದ ಶೇ 50ರವರೆಗೆ ಮನೆ ಬಾಡಿಗೆ ಭತ್ಯೆಗೆ ತೆರಿಗೆ ರಿಯಾಯಿತಿ ನೀಡುವ ಸಾಧ್ಯತೆ ಇದೆ.

ಪ್ರಸ್ತಾವಿತ ಹೊಸ ವಿನಾಯಿತಿ ಹೀಗಿರಲಿದೆ
ಮುಂಬೈ, ದೆಹಲಿ, ಕೊಲ್ಕತ್ತಾ, ಚೆನ್ನೈ, ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಅಹಮದಾಬಾದ್ ನಗರಗಳಲ್ಲಿ ವಾಸಿಸುವವರಿಗೆ ಸಂಬಳದ ಶೇ 50ರಷ್ಟು ಭತ್ಯೆಯಲ್ಲಿ ವಿನಾಯಿತಿ ಸಿಗಲಿದ್ದು, ಇತರೆ ಎಲ್ಲ ನಗರಗಳಲ್ಲಿ ವಾಸಿಸುವವರಿಗೆ ಸಂಬಳದ ಶೇ 40ರಷ್ಟು ಮನೆ ಬಾಡಿಗೆ ಭತ್ಯೆ ವಿನಾಯಿತಿ ಸಿಗಬಹುದು. ಈ ಪ್ರಸ್ತಾವನೆಯ ಹಿಂದೆ ದೇಶದ ನಗರೀಕರಣದಲ್ಲಿ ಉಂಟಾದ ಬದಲಾವಣೆಗಳು ಮತ್ತು ಪ್ರಮುಖ ಉದ್ಯೋಗ ಕೇಂದ್ರಗಳಲ್ಲಿ ವೇಗವಾಗಿ ಏರುತ್ತಿರುವ ಮನೆ ಬಾಡಿಗೆ ದರಗಳೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ವಿಶೇಷವಾಗಿ ಬೆಂಗಳೂರು, ಹೈದರಾಬಾದ್ ಮತ್ತು ಪುಣೆ ನಗರಗಳು ಕಳೆದ ಒಂದು ದಶಕದಲ್ಲಿ ಐಟಿ, ತಂತ್ರಜ್ಞಾನ, ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳ ಪ್ರಮುಖ ಕೇಂದ್ರಗಳಾಗಿ ಬೆಳೆದಿದ್ದು, ಇದರ ಪರಿಣಾಮವಾಗಿ ವಸತಿ ವೆಚ್ಚವೂ ಗಣನೀಯವಾಗಿ ಹೆಚ್ಚಾಗಿದೆ. ಈ ಬದಲಾವಣೆ ಜಾರಿಗೆ ಬಂದರೆ, ಹಳೆಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡಿರುವ ಸಂಬಳದ ಉದ್ಯೋಗಿಗಳಿಗೆ ದೊಡ್ಡ ಲಾಭವಾಗಲಿದೆ.
ಏಕೆಂದರೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಮನೆ ಬಾಡಿಗೆ ಭತ್ಯೆ ಸೇರಿದಂತೆ ಬಹುತೇಕ ತೆರಿಗೆ ವಿನಾಯಿತಿಗಳು ಲಭ್ಯವಿಲ್ಲ. ಆದರೆ ಸರ್ಕಾರದ ಈ ಪ್ರಸ್ತಾವನೆ ಇನ್ನೂ ಅಂತಿಮಗೊಂಡಿಲ್ಲ. ಆದರೆ ಅನುಮೋದನೆ ದೊರೆತಿದ್ದೇ ಆದಲ್ಲಿ, ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳ ಉದ್ಯೋಗಿಗಳಿಗೆ ತೆರಿಗೆ ಭಾರ ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.












Click it and Unblock the Notifications