ಮಣಿಪುರಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿ: ಮತ್ತೆ ಹಿಂಸಾಚಾರ, ಪೊಲೀಸ್ ಸಿಬ್ಬಂದಿ ಸೇರಿ ಐವರ ಸಾವು
ಗುವಾಹಟಿ, ಮೇ. 29: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರಕ್ಕೆ ಬಂದಿಳಿಯುವ ಕೆಲವೇ ಗಂಟೆಗಳ ಮೊದಲು, ರಾಜ್ಯದಲ್ಲಿ ಭಾನುವಾರ ಮತ್ತೆ ಹಿಂಸಾಚಾರ ಮುಂದುವರೆದಿದ್ದು, ಐದು ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಗುಂಡಿನ ದಾಳಿ ಮತ್ತು ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಣಿಪುರದಲ್ಲಿ ನಿನ್ನೆ ಹೊಸ ಹಿಂಸಾಚಾರ ಭುಗಿಲೆದ್ದಿದ್ದು, ಕಳೆದ ತಿಂಗಳಲ್ಲಿ ಜನಾಂಗೀಯ ಹಿಂಸಾಚಾರದಲ್ಲಿ ಕನಿಷ್ಠ 80 ಮಂದಿ ಸಾವನ್ನಪ್ಪಿದ್ದಾರೆ. ಭಾನುವಾರ ರಾತ್ರಿ ಓರ್ವ ಪೊಲೀಸ್ ಸೇರಿದಂತೆ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆ. ಹಿಂಸಾಚಾರ ಪೀಡಿತ ರಾಜ್ಯಕ್ಕೆ ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೆ ಕೆಲವೇ ಗಂಟೆಗಳ ಮೊದಲು ಈ ದುರಂತಗಳು ಸಂಭವಿಸಿವೆ.

ಭಾನುವಾರದಂದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು "40 ಭಯೋತ್ಪಾದಕರನ್ನು" ಗುಂಡಿಕ್ಕಿ ಕೊಂದಿರುವ ವರದಿಗಳು ಸಿಕ್ಕಿವೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. "ಭಯೋತ್ಪಾದಕರು ನಾಗರಿಕರ ವಿರುದ್ಧ M-16 ಮತ್ತು AK-47 ಅಸಾಲ್ಟ್ ರೈಫಲ್‌ಗಳು ಮತ್ತು ಸ್ನೈಪರ್ ಗನ್‌ಗಳನ್ನು ಬಳಸುತ್ತಿದ್ದಾರೆ. ಮನೆಗಳನ್ನು ಸುಡಲು ಅನೇಕ ಹಳ್ಳಿಗಳನ್ನು ಸುತ್ತುತ್ತಿದ್ದಾರೆ. ಹೀಗಾಗಿ ಸೇನೆ ಮತ್ತು ಇತರ ಭದ್ರತಾ ಪಡೆಗಳ ಸಹಾಯದಿಂದ ಅವರ ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸಿದ್ದೇವೆ. ಸುಮಾರು 40 ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿರುವ ವರದಿಗಳು ನಮಗೆ ಸಿಕ್ಕಿವೆ" ಎಂದು ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದ್ದರು.
ಕಳೆದ ಎರಡು ದಿನಗಳಲ್ಲಿ ಇಂಫಾಲ್ ಕಣಿವೆಯ ಹೊರವಲಯದಲ್ಲಿ ನಾಗರಿಕರ ಮೇಲೆ ಹಿಂಸಾತ್ಮಕ ದಾಳಿಗಳು ನಡೆದಿರುವುದು ಯೋಜಿತ ಕೆಲಸವಾಗಿ ಕಾಣಿಸುತ್ತಿದೆ. ಇದು ಖಂಡನೀಯ ಎಂದು ಹೇಳಿದ್ದರು. ಇನ್ನು, ಹಿಂಸಾಚಾರ ಪೀಡಿತ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಅವರು ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ರಾಜ್ಯವನ್ನು ಸಹಜ ಸ್ಥಿತಿಗೆ ತರಲು ಕೆಲಸ ಮಾಡಲು ಮೈತೇಯಿ ಮತ್ತು ಕುಕಿಗಳಿಗೆ ಮನವಿ ಮಾಡಿದ್ದಾರೆ.

ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಕೂಡ ಶನಿವಾರ ಮಣಿಪುರಕ್ಕೆ ತೆರಳಿ ಕಾನೂನು ಸುವ್ಯವಸ್ಥೆಯನ್ನು ಪರಿಶೀಲಿಸಿದ್ದರು. ಹಿಂಸಾಚಾರ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯಲು ಸರ್ಕಾರವು ಹಲವಾರು ಪ್ರದೇಶಗಳಲ್ಲಿ ಕರ್ಫ್ಯೂ ಮತ್ತು ಇಂಟರ್ನೆಟ್ ನಿಷೇಧವನ್ನು ವಿಧಿಸಿದೆ.












Click it and Unblock the Notifications