Honda Story : ಟೊಯೊಟಾದಿಂದ ತಿರಸ್ಕೃತನಾದ ಮೆಕ್ಯಾನಿಕ್, ಇಂದು ಜಗತ್ತಿನ ಹೋಂಡಾ ಸಾಮ್ರಾಜ್ಯದ ಹಿಂದಿನ ವ್ಯಕ್ತಿ
ಜಪಾನ್ ನ ಒಬ್ಬ ಯುವ ಮೆಕ್ಯಾನಿಕ್ ಒಂದು ಹೊಸ ವಿನ್ಯಾಸದೊಂದಿಗೆ ದೊಡ್ಡ ಕಂಪನಿಯ ಬಾಗಿಲು ತಟ್ಟಿದ. ಆತ ತಯಾರಿಸಿದ್ದ ಪಿಸ್ಟನ್ ರಿಂಗ್ ವಿನ್ಯಾಸವನ್ನು ಟೊಯೋಟಾಗೆ ತೋರಿಸಿದ. ಆದರೆ ಉತ್ತರ ನಿರಾಶಾದಾಯಕವಾಗಿತ್ತು. ʼನಿಮ್ಮ ವಿನ್ಯಾಸ ನಮ್ಮ ಗುಣಮಟ್ಟಕ್ಕೆ ತಕ್ಕದ್ದಲ್ಲʼ ಎಂದಿತು ಟೊಯೊಟಾ.
ಸಾಮಾನ್ಯ ವ್ಯಕ್ತಿಯಾಗಿದ್ದರೆ ಬಹುಶಃ ಅಲ್ಲಿಯೇ ತನ್ನ ಕನಸಿಗೆ ತೆರೆ ಎಳೆದಿರುತ್ತಿದ್ದ. ಆದರೆ ಸೋಯಿಚಿರೊ ಹೋಂಡಾ ಹಾಗೆ ಮಾಡಲಿಲ್ಲ. ಆ ಒಂದು ತಿರಸ್ಕಾರವೇ ಮುಂದೆ ಜಗತ್ತಿನ ಅತ್ಯಂತ ಪ್ರಸಿದ್ಧ ವಾಹನ ಬ್ರ್ಯಾಂಡ್‌ಗಳಲ್ಲಿ ಒಂದಾದ ಹೋಂಡಾದ ಜನನಕ್ಕೆ ಆರಂಭವಾಯಿತು.

1937ರಲ್ಲಿ ಸೋಯಿಚಿರೊ ಹೋಂಡಾ ಪಿಸ್ಟನ್ ರಿಂಗ್ ತಯಾರಿಸುವ ಕೆಲಸ ಆರಂಭಿಸಿದ್ದರು. ಅವರ ಗುರಿ ಟೊಯೋಟಾದಂತಹ ದೊಡ್ಡ ಕಂಪನಿಗೆ ಅವುಗಳನ್ನು ಪೂರೈಸುವುದಾಗಿತ್ತು. ಆದರೆ ಅವರ ಮೊದಲ ಪ್ರಯತ್ನ ಯಶಸ್ವಿಯಾಗಲಿಲ್ಲ. ವಿನ್ಯಾಸದಲ್ಲಿ ಗುಣಮಟ್ಟದ ಕೊರತೆಯಿದೆ ಎಂಬ ಕಾರಣಕ್ಕೆ ಅದನ್ನು ತಿರಸ್ಕರಿಸಲಾಯಿತು.
ಮುಂದೆ ಹೋಂಡಾ ಮಾಡಿದ ಕೆಲಸ ಅವರ ಜೀವನದ ಮಹತ್ವದ ತಿರುವಿಗೆ ಕಾರಣ ಆಯಿತು. ಅವರು ಟೊಯೋಟಾವನ್ನು ದೂಷಿಸಲಿಲ್ಲ. ಜಗತ್ತನ್ನು ದೂಷಿಸಲಿಲ್ಲ. ಅದೃಷ್ಟವನ್ನು ಶಪಿಸಲಿಲ್ಲ. ತಮಗೆ ಏನು ಗೊತ್ತಿಲ್ಲ ಎಂಬುದನ್ನು ಅರಿತುಕೊಳ್ಳಲು ಮುಂದಾದರು. ಇನ್ನಷ್ಟು ಕಲಿತರು. ಎಂಜಿನಿಯರಿಂಗ್ ಮತ್ತು ಮೆಟಾಲಿಕ್ಸ್ ಬಗ್ಗೆ ಅಧ್ಯಯನ ಮಾಡಿದರು. ತಮ್ಮ ವಿನ್ಯಾಸವನ್ನು ಮತ್ತೆ ಮತ್ತೆ ಬದಲಿಸಿದರು.
ಕೊನೆಗೆ ಉತ್ತಮ ಗುಣಮಟ್ಟದ ಪಿಸ್ಟನ್ ರಿಂಗ್ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾದರು. ಟೊಯೊಟಾದ ತಿರಸ್ಕಾರ ಅವರ ಕನಸನ್ನು ಕೊಲ್ಲಲಿಲ್ಲ. ಬದಲಾಗಿ, ಅದನ್ನು ಇನ್ನಷ್ಟು ಗಟ್ಟಿಗೊಳಿಸಿತು.
ಆದರೆ ಕನಸು ನೆರವೇರುತ್ತಿದೆ ಎಂದುಕೊಂಡ ಕ್ಷಣದಲ್ಲೂ ಹೋಂಡಾಗೆ ಸಮಸ್ಯೆಗಳು ಮುಗಿಯಲಿಲ್ಲ. ಪಿಸ್ಟನ್ ರಿಂಗ್ ತಯಾರಿಸಲು ಕಾರ್ಖಾನೆ ನಿರ್ಮಿಸಬೇಕಿತ್ತು. ಆದರೆ ಆಗ ಜಪಾನ್‌ನಲ್ಲಿ ಸಂಪನ್ಮೂಲಗಳ ಕೊರತೆ ಇತ್ತು. ಸಿಮೆಂಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ಪಡೆಯುವುದು ಕಷ್ಟವಾಯಿತು.
ಆದರೆ ಹೋಂಡಾ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಇದ್ದ ಪರಿಸ್ಥಿತಿಯಲ್ಲೇ ಪರಿಹಾರ ಹುಡುಕಲು ಆರಂಭಿಸಿದರು. ತಮ್ಮದೇ ವಿಧಾನಗಳನ್ನು ಪ್ರಯೋಗಿಸಿದರು. ಅಗತ್ಯ ವಸ್ತುಗಳನ್ನು ಪಡೆಯಲು ಹೊಸ ಮಾರ್ಗಗಳನ್ನು ಕಂಡುಕೊಂಡರು. ಸಮಸ್ಯೆ ಬಂದಾಗ ಅದಕ್ಕೆ ಉತ್ತರ ಪಡೆಯಲು ನನ್ನ ಬಳಿ ಏನಿದೆ ಎಂದು ಕೇಳಿಕೊಳ್ಳುತ್ತಾ ಮುಂದುವರಿದರು. ಈ ಮನೋಭಾವವೇ ನಂತರ ಹೋಂಡಾದ ಯಶಸ್ಸಿನ ದೊಡ್ಡ ಶಕ್ತಿಯಾಯಿತು.
ಯುದ್ಧ ಎಲ್ಲವನ್ನೂ ನಾಶಮಾಡಿತು
ಅಷ್ಟರಲ್ಲಿ ಎರಡನೇ ಮಹಾಯುದ್ಧ ಸಮಯ ಬಂತು. ಯುದ್ಧದ ಬಾಂಬ್ ದಾಳಿಗಳಿಂದ ಅವರ ಕಾರ್ಖಾನೆ ಭಾರೀ ಹಾನಿಗೊಳಗಾಯಿತು. ಒಂದು ಸಲವಲ್ಲ, ಮತ್ತೆ ಮತ್ತೆ ಸಂಕಷ್ಟ ಎದುರಾಯಿತು. ವರ್ಷಗಳ ಪರಿಶ್ರಮದಿಂದ ಕಟ್ಟಿದ ಕೆಲಸ ಕ್ಷಣಗಳಲ್ಲಿ ನಾಶವಾಗುವುದನ್ನು ಅವರು ನೋಡಬೇಕಾಯಿತು.
ಆದರೆ ಸೋಯಿಚಿರೊ ಹೋಂಡಾ ಜೀವನದಲ್ಲಿ ಸೋಲು ಎಂದರೆ ಅಂತಿಮ ಅಧ್ಯಾಯ ಎಂದುಕೊಂಡಿರಲಿಲ್ಲ. ಅದು ಮುಂದಿನ ಅಧ್ಯಾಯದ ಮೊದಲ ಪುಟವಾಗಿತ್ತು. ಯುದ್ಧದ ನಂತರ ಜಪಾನ್‌ನಲ್ಲಿ ಮತ್ತೊಂದು ದೊಡ್ಡ ಸಮಸ್ಯೆ ಎದುರಾಯಿತು. ಅದು ಇಂಧನದ ಕೊರತೆ. ಪೆಟ್ರೋಲ್ ಸಿಗುತ್ತಿರಲಿಲ್ಲ. ಜನರಿಗೆ ಪ್ರಯಾಣ ಮಾಡುವುದು ಕಷ್ಟವಾಯಿತು. ಅಲ್ಲಿಯೇ ಹೋಂಡಾ ಮತ್ತೊಂದು ಅವಕಾಶವನ್ನು ಕಂಡುಕೊಂಡರು.
ಯುದ್ಧದ ನಂತರ ಜನರಿಗೆ ಅಗ್ಗದ ಸಾರಿಗೆ ಬೇಕಿತ್ತು. ಹೋಂಡಾ ಸೈಕಲ್‌ಗೆ ಸಣ್ಣ ಎಂಜಿನ್ ಜೋಡಿಸುವ ಆಲೋಚನೆ ಮಾಡಿದರು. ಇದು ಸರಳ ಆಲೋಚನೆಯಂತೆ ಕಾಣಬಹುದು. ಆದರೆ ಅದೇ ಆಲೋಚನೆ ಲಕ್ಷಾಂತರ ಜನರ ಜೀವನವನ್ನು ಸುಲಭಗೊಳಿಸಿತು. ಸಣ್ಣ ಎಂಜಿನ್ ಹೊಂದಿದ ಸೈಕಲ್‌ಗಳಿಂದ ಆರಂಭವಾದ ಪ್ರಯಾಣ ಕ್ರಮೇಣ ಮೋಟಾರ್‌ಸೈಕಲ್‌ಗಳತ್ತ ಸಾಗಿತು.
ಮುಂದೆ 1948ರಲ್ಲಿ ಹೋಂಡಾ ಮೋಟಾರ್ ಕಂಪನಿ ಸ್ಥಾಪನೆಯಾಯಿತು. ನಂತರ ಬಂದ ದಶಕಗಳಲ್ಲಿ ಹೋಂಡಾ ಕೇವಲ ಮೋಟಾರ್‌ಸೈಕಲ್ ಕಂಪನಿಯಾಗಿ ಉಳಿಯಲಿಲ್ಲ. ಕಾರುಗಳು, ಮೋಟಾರ್‌ಸೈಕಲ್‌ಗಳು, ಎಂಜಿನ್‌ಗಳು ಮತ್ತು ವಿವಿಧ ವಿದ್ಯುತ್ ಉಪಕರಣಗಳ ಜಗತ್ತಿನ ಪ್ರಮುಖ ತಯಾರಕರಲ್ಲಿ ಒಂದಾಗಿ ಬೆಳೆಯಿತು.
ಒಮ್ಮೆ ಟೊಯೋಟಾದ ಬಾಗಿಲಿನಿಂದ ತಿರಸ್ಕೃತನಾಗಿ ಹಿಂದಿರುಗಿದ್ದ ವ್ಯಕ್ತಿಯ ಹೆಸರೇ ಮುಂದೆ ಜಾಗತಿಕ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಗೌರವದಿಂದ ಕೇಳಿಸತೊಡಗಿತು.
ಹೋಂಡಾ ಯಶಸ್ಸಿನ ಹಿಂದಿನ ಪಾಠಗಳು
1. ತಿರಸ್ಕಾರ ಎಂದರೆ ಅಂತ್ಯವಲ್ಲ. ಟೊಯೋಟಾ ಅವರ ಮೊದಲ ವಿನ್ಯಾಸವನ್ನು ತಿರಸ್ಕರಿಸಿದರೂ ಹೋಂಡಾ ಅದನ್ನು ತಮ್ಮ ಸಾಮರ್ಥ್ಯದ ಅಂತಿಮ ತೀರ್ಪು ಎಂದು ಭಾವಿಸಲಿಲ್ಲ. ಏನು ತಪ್ಪಾಗಿದೆ ಎಂದು ತಿಳಿದುಕೊಂಡು ಅದನ್ನು ಸರಿಪಡಿಸಿದರು. ಇಂದು ನಮಗೂ ಇದೇ ಪಾಠ ಅನ್ವಯಿಸುತ್ತದೆ. ಉದ್ಯೋಗ ಸಿಗಲಿಲ್ಲ ಎಂದರೆ ಜೀವನ ಮುಗಿಯಿತೆಂದಲ್ಲ. ವ್ಯವಹಾರ ವಿಫಲವಾಯಿತು ಎಂದರೆ ಮತ್ತೆ ಆರಂಭಿಸಲು ಸಾಧ್ಯವಿಲ್ಲ ಎಂದಲ್ಲ. ನಮ್ಮ ಕೆಲಸವನ್ನು ಯಾರಾದರೂ ತಿರಸ್ಕರಿಸಿದರೆ, ಅದು ಕೆಲವೊಮ್ಮೆ ನಮ್ಮನ್ನು ಇನ್ನಷ್ಟು ಉತ್ತಮವಾಗಲು ಒತ್ತಾಯಿಸುವ ಸೂಚನೆಯಾಗಿರಬಹುದು.
2. ಇರುವ ಸಂಪನ್ಮೂಲದಲ್ಲೇ ಪರಿಹಾರ ಹುಡುಕಿದರು. ಸಂಪನ್ಮೂಲಗಳ ಕೊರತೆ ಹೋಂಡಾಗೆ ಹೊಸದೇನೂ ಅಲ್ಲ. ಕಾರ್ಖಾನೆ ಕಟ್ಟಲು ಸಮಸ್ಯೆ, ಯುದ್ಧದಿಂದ ನಾಶವಾದ ಉದ್ಯಮ, ಇಂಧನದ ಕೊರತೆ, ಹೀಗೆ ಪ್ರತಿ ಹಂತದಲ್ಲೂ ಒಂದು ಸಮಸ್ಯೆ ಎದುರಿಸಿದರು. ಆದರೆ ಅವರು ಸಮಸ್ಯೆಯ ಗಾತ್ರವನ್ನು ನೋಡಿಕೊಂಡು ನಿಲ್ಲಲಿಲ್ಲ. ಇರುವ ಸಂಪನ್ಮೂಲವನ್ನು ಬಳಸಿಕೊಂಡು ಹೊಸ ಪರಿಹಾರ ಹುಡುಕಿದರು. ಸೈಕಲ್‌ಗೆ ಎಂಜಿನ್ ಜೋಡಿಸುವ ಆಲೋಚನೆಯೂ ಅಂತಹ ಸಂದರ್ಭದಲ್ಲೇ ಹುಟ್ಟಿದ್ದು. ಕೆಲವೊಮ್ಮೆ ನಮ್ಮ ಬಳಿ ಎಲ್ಲವೂ ಇದ್ದಾಗ ಸೃಜನಶೀಲತೆ ಹುಟ್ಟುವುದಿಲ್ಲ. ಆದರೆ ಏನೂ ಇಲ್ಲದಿದ್ದಾಗ ಹೊಸ ದಾರಿಯನ್ನು ಹುಡುಕಲೇಬೇಕಾಗುತ್ತದೆ. ಸಂಕಷ್ಟವೇ ಕೆಲವೊಮ್ಮೆ ನಮ್ಮ ದೊಡ್ಡ ಗುರುವಾಗಬಹುದು.
3. ತಮ್ಮ ಜೀವನಕ್ಕಿಂತ ದೊಡ್ಡ ಕನಸು, ದೊಡ್ಡ ಸಂಸ್ಥೆಯ ಕನಸು ಅವರದಾಗಿತ್ತು. ಅನೇಕರು ವ್ಯವಹಾರ ಆರಂಭಿಸುವುದು ತಮ್ಮ ಆದಾಯಕ್ಕಾಗಿ. ಆದರೆ ಸೋಯಿಚಿರೊ ಹೋಂಡಾ ನಿರ್ಮಿಸಿದ್ದು ಕೇವಲ ತಮ್ಮ ಹೆಸರಿನ ವ್ಯವಹಾರವಾಗಿಯಲ್ಲ. ಅದು ಅವರ ನಂತರವೂ ಲಕ್ಷಾಂತರ ಮಂದಿಗೆ ಬದುಕು ನೀಡಿದ ಸಂಸ್ಥೆಯಾಯಿತು. ಇಂದು ಹೋಂಡಾ ಎಂಬ ಹೆಸರು ವಿಶ್ವದ ಅನೇಕ ದೇಶಗಳಲ್ಲಿ ಕಾರು, ಬೈಕ್ ಮತ್ತು ಎಂಜಿನಿಯರಿಂಗ್‌ನೊಂದಿಗೆ ಗುರುತಿಸಿಕೊಂಡಿದೆ. ಒಬ್ಬ ವ್ಯಕ್ತಿ ಇಲ್ಲದಿದ್ದರೂ ಒಂದು ಉತ್ತಮ ಆಲೋಚನೆ, ಉತ್ತಮ ಸಂಸ್ಥೆ ಮತ್ತು ಉತ್ತಮ ಸಂಸ್ಕೃತಿ ಮುಂದುವರಿಯಬಹುದು.


Click it and Unblock the Notifications
