ಪ್ರೇಮಿಗಳ ದಿನವನ್ನು ವಿರೋಧಿಸಿ ನಾಯಿಗಳ ಮದುವೆ ಮಾಡಿದ ಹಿಂದೂ ಸಂಘಟನೆ!
ಇಂದು ಎಲ್ಲೆಡೆ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದೆ. ಆದರೆ ಕೆಲವೆಡೆ ಪ್ರೇಮಿಗಳ ದಿನಾಚರಣೆಗೆ ವಿರೋಧ ವ್ಯಕ್ತವಾಗಿದೆ.
ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸಿ ಹಿಂದೂ ಸಂಘಟನೆಯೊಂದು ತಮಿಳುನಾಡಿನ ಶಿವಗಂಗಾದಲ್ಲಿ ನಾಯಿಗಳ ನಡುವೆ ಅಣಕು ವಿವಾಹ ಸಮಾರಂಭಗಳನ್ನು ನಡೆಸಿತು.
ಹಿಂದೂ ಮುನ್ನಾನಿ ಪ್ರೇಮಿಗಳ ದಿನವನ್ನು ವಿರೋಧಿಸಿದ್ದು, ಇದು ಭಾರತದ ಸಂಸ್ಕೃತಿಗೆ ವಿರುದ್ಧವಾದ ಆಚರಣೆ ಎಂದು ಕರೆದಿದೆ. ಬಲಪಂಥೀಯ ಸಂಘಟನೆಯ ಸದಸ್ಯರು ಪ್ರತಿ ವರ್ಷ ಪ್ರೇಮಿಗಳ ದಿನಾಚರಣೆಯ ವಿರುದ್ಧ ವಿವಿಧ ರೂಪಗಳಲ್ಲಿ ಪ್ರತಿಭಟನೆ ನಡೆಸುತ್ತಲೇ ಇರುತ್ತಾರೆ.
ಸೋಮವಾರ ಹಿಂದೂ ಮುನ್ನಾನಿ ಪದಾಧಿಕಾರಿಗಳು ಎರಡು ನಾಯಿಗಳನ್ನು ಕರೆತಂದು ವಸ್ತ್ರ, ಹಾರಗಳನ್ನು ಹೊದಿಸಿದರು. ನಂತರ, ನಾಯಿಗಳಿಗೆ ಮದುವೆಯಾಗಿದೆ ಎಂದು ತೋರಿಸಲು ಸಿಬ್ಬಂದಿಯೊಬ್ಬರು ಸಾಂಕೇತಿಕವಾಗಿ ತಾಳಿ ಕಟ್ಟಿದರು. ಪ್ರೇಮಿಗಳ ದಿನದಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ಅನುಚಿತವಾಗಿ ವರ್ತಿಸುತ್ತಾರೆ ಮತ್ತು ಇದನ್ನು ವಿರೋಧಿಸಿ ಅವರು ನಾಯಿಗಳ ಮದುವೆಯನ್ನು ನಡೆಸಿದರು ಎಂದು ಹಿಂದೂ ಮುನ್ನಾನಿ ಕಾರ್ಯಕರ್ತರು ಹೇಳಿದ್ದಾರೆ.

ಮಂಗಳೂರು: ಪ್ರೇಮಿಗಳ ದಿನಾಚರಣೆಗೆ ವಿರೋಧ
ಮಂಗಳೂರಿನಲ್ಲಿ ಪ್ರೇಮಿಗಳ ದಿನಾಚರಣೆಗೆ ಬಜರಂಗ ದಳ ವಿರೋಧ ವ್ಯಕ್ತಪಡಿಸಿದ್ದು ಪ್ರೇಮಿಗಳ ದಿನಾಚರಣೆ ಪ್ರೇರೇಪಿಸುವ ವಸ್ತುಗಳನ್ನು ಮಾರಾಟ ಮಾಡಬಾರದು ಎಂದು ಅಂಗಡಿಯವರಿಗೆ ಮನವಿ ಮಾಡಿದೆ. ಭಾರತ ದೇಶವು ಪುಣ್ಯ ಭೂಮಿ ವೈಶಿಷ್ಟ್ಯವಾದ ಸಂಸ್ಕೃತಿ ಸಂಸ್ಕಾರವನ್ನು ನಮ್ಮ ದೇಶ ಹೊಂದಿದೆ ಅಲ್ಲದೆ ನಮ್ಮ ಸಂಸ್ಕೃತಿ ಆಚರಣೆಗಳಿಗೆ ಅದರದೇ ಆದ ಮಹತ್ವವಿದ್ದು ಶತಮಾನಗಳ ಇತಿಹಾಸವನ್ನು ಹೊಂದಿದೆ. ಆದಾಗಿಯೂ ಭಾರತೀಯ ಸಂಸ್ಕೃತಿಗೆ ಸಡ್ಡು ಹೊಡೆಯುತ್ತಾ ಪಾಶ್ಚಿಮಾತ್ಯ ಸಂಸ್ಕೃತಿಗಳು ದಾಳಿ ಮಾಡುತ್ತಿವೆ. ಯುವ ಸಮುದಾಯವನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿವೆ. ನಮ್ಮ ಅಮೂಲ್ಯವಾದ ಸಂಸ್ಕೃತಿ ಆಚರಣೆ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.
ಪ್ರೇಮಿಗಳ ದಿನದಂದು 'ಹಸು ಅಪ್ಪುವ ದಿನ'
ಇತ್ತೀಚೆಗೆ ಜಾನುವಾರಗಳ ಮೇಲಿನ ಪ್ರೀತಿ ನಗರ ಪ್ರದೇಶದಲ್ಲಿ ಕಡಿಮೆಯಾಗುತ್ತಿದೆ. ಹೀಗಾಗಿ ಕೇಂದ್ರ ಪ್ರಾಣಿ ಕಲ್ಯಾಣ ಮಂಡಳಿಯು ಫೆಬ್ರವರಿ 14 ರಂದು 'ಕೌ ಹಗ್ ಡೇ' ಆಚರಿಸಲು ಜನರಿಗೆ ಕರೆ ನೀಡಿದೆ. ಇದು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯಲ್ಲಿ ಹಸುಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದು ಮಂಡಳಿ ಹೇಳಿತ್ತು. ಹಸು ಅಪ್ಪಿಕೊ ದಿನಾಚರಣೆ ಮಾಡಲು ಮಂಡಳಿ ನೀಡಿದ್ದ ಮನವಿಯು ಅಪಹಾಸ್ಯಕ್ಕೆ ಈಡಾಗಿತ್ತು. ಹೀಗಾಗಿ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ನೀಡಿದ ನಿರ್ದೇಶನದ ಆಧಾರದ ಮೇಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮಂಡಳಿ ತಿಳಿಸಿದೆ.












Click it and Unblock the Notifications