"ನೀನು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತ": ಊಟ ಬಡಿಸುತ್ತಿದ್ದ ಮುಸ್ಲಿಂ ಯುವಕನಿಗೆ ಹಿಂದೂ ತಾಯಿಯ ಆಶೀರ್ವಾದ!
ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ರಾಷ್ಟ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಪ್ರೀತಿ, ವಿಶ್ವಾಸ ಮತ್ತು ಮಾನವೀಯತೆಗೆ ಯಾವುದೇ ಧರ್ಮ ಅಥವಾ ಜಾತಿಯ ಹಂಗಿಲ್ಲ ಎಂಬುದನ್ನು ಆಗಾಗ ಕೆಲವು ಘಟನೆಗಳು ಆಗಾಗ ನೆನಪಿಸುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ದ್ವೇಷ ಹಾಗೂ ಸಂಘರ್ಷದ ಸುದ್ದಿಗಳೇ ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ , ದೆಹಲಿಯ ಜಂತರ್ ಮಂತರ್‌ನಿಂದ ಹೊರಬಂದಿರುವ ಈ ಅಪರೂಪದ ದೃಶ್ಯವೊಂದು ಕೋಟ್ಯಂತರ ಭಾರತೀಯರ ಹೃದಯವನ್ನು ತಂಪಾಗಿಸಿದೆ.
ಹೌದು, ಉತ್ತರ ಪ್ರದೇಶದ ಹಿಂದೂ ತಾಯಿಯೊಬ್ಬರು, ದೆಹಲಿಯಲ್ಲಿ ಪ್ರತಿಭಟನಾಕಾರರಿಗೆ ಉಚಿತವಾಗಿ ಊಟ ಬಡಿಸುತ್ತಿದ್ದ ಮುಸ್ಲಿಂ ಯುವಕನನ್ನು ಹುಡುಕಿಕೊಂಡು ಬಂದು ಆಶೀರ್ವದಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನಿಜವಾದ ಹಿಂದೂ-ಮುಸ್ಲಿಂ ಭಾವೈಕ್ಯತೆ ಹೇಗಿರುತ್ತದೆ ಎಂಬುದನ್ನು ಇಡೀ ಜಗತ್ತಿಗೆ ಸಾರಿದೆ.

ದೆಹಲಿಯ ಜಂತರ್ ಮಂತರ್ ಎಂದರೆ ಅದು ಸದಾ ಪ್ರತಿಭಟನೆ, ಹೋರಾಟಗಳ ಕೇಂದ್ರ. ಇತ್ತೀಚೆಗೆ ಇಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ನೂರಾರು ಜನರು ಸೇರಿದ್ದಾರೆ. ಈ ಪ್ರತಿಭಟನಾಕಾರರ ಹಸಿವು ನೀಗಿಸುವ ಜವಾಬ್ದಾರಿಯನ್ನು ಹೊತ್ತುಕೊಂಡವರು ಮೊಹಮ್ಮದ್ ಜುನೈದ್ ಎಂಬ ಯುವಕ. ಯಾವುದೇ ಫಲಾಪೇಕ್ಷೆ ಇಲ್ಲದೆ, ಜುನೈದ್ ಅವರು ಪ್ರತಿಭಟನಾಕಾರರಿಗೆ ಸ್ವಯಂಪ್ರೇರಿತರಾಗಿ ಊಟ ಬಡಿಸುತ್ತಿದ್ದಾರೆ. ಬಿಸಿಲಿನಲ್ಲಿ ನಿಂತು, ಧರ್ಮ, ಜಾತಿ, ಭಾಷೆ ಯಾವುದನ್ನೂ ನೋಡದೆ ಎಲ್ಲರಿಗೂ ಸಮಾನವಾಗಿ ಅನ್ನದಾಸೋಹ ಮಾಡುತ್ತಿರುವ ಈ ಮುಸ್ಲಿಂ ಯುವಕನ ವಿಡಿಯೋಗಳು ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಉತ್ತರ ಪ್ರದೇಶದಿಂದ ಬಂದ ಹಿಂದೂ ತಾಯಿ
ಜುನೈದ್ ಅವರ ಈ ನಿಸ್ವಾರ್ಥ ಸೇವೆಯ ವಿಡಿಯೋವನ್ನು ಉತ್ತರ ಪ್ರದೇಶದ ಸಹರಾನ್‌ಪುರದ ನಿವಾಸಿ ಸುನೀತಾ ಅರೋರಾ ಅವರು ನೋಡಿದ್ದರು. ಯುವಕನ ಮಾನವೀಯ ಕೆಲಸ ಕಂಡು ಭಾವುಕರಾದ ಅವರು, ಆತನನ್ನು ಖುದ್ದಾಗಿ ಭೇಟಿಯಾಗಲೇಬೇಕು ಎಂದು ನಿರ್ಧರಿಸಿದರು. ಕೇವಲ ಆತನನ್ನು ಅಭಿನಂದಿಸುವುದಕ್ಕಾಗಿ ಸುನೀತಾ ಅರೋರಾ ಅವರು ಸಹರಾನ್‌ಪುರದಿಂದ ದೆಹಲಿಯ ಜಂತರ್ ಮಂತರ್‌ಗೆ ಪ್ರಯಾಣ ಬೆಳೆಸಿದರು.
ಅಲ್ಲಿ ಊಟ ಬಡಿಸುತ್ತಿದ್ದ ಜುನೈದ್ ಅವರ ಬಳಿ ತೆರಳಿ, "ನಿನ್ನ ತಾಯಿ ಇಲ್ಲಿದ್ದಾಳೆ" ಎಂದು ಅಕ್ಕರೆಯಿಂದ ತಬ್ಬಿಕೊಂಡರು. ಒಬ್ಬ ಅಪರಿಚಿತ ಹಿಂದೂ ಮಹಿಳೆ ದೂರದ ಊರಿನಿಂದ ಬಂದು ತನ್ನನ್ನು ಮಗನಂತೆ ಅಪ್ಪಿಕೊಂಡಾಗ ಜುನೈದ್ ಅವರಿಗೆ ಆಶ್ಚರ್ಯ ಮತ್ತು ಆನಂದ ಒಟ್ಟಿಗೇ ಆಯಿತು.
ಸುನೀತಾ ಅರೋರಾ ಅವರು ಜುನೈದ್ ಅವರನ್ನು ತಬ್ಬಿಕೊಂಡು, "ನೀನು ಹಿಂದೂ-ಮುಸ್ಲಿಂ ಭಾವೈಕ್ಯತೆಯ ನಿಜವಾದ ಸಂಕೇತ" ಎಂದು ಹೇಳಿದಾಗ, ಆ ಯುವಕನ ಕಣ್ಣುಗಳಿಂದ ಧಾರಾಕಾರವಾಗಿ ಕಣ್ಣೀರು ಹರಿಯಲಾರಂಭಿಸಿತು. ಆನಂದಭಾಷ್ಪ ಸುರಿಸುತ್ತಲೇ ಯುವಕ ಆ ತಾಯಿಯ ಪ್ರೀತಿಗೆ ತಲೆಬಾಗಿದ. ಈ ಭಾವುಕ ಕ್ಷಣವನ್ನು ಅಲ್ಲಿದ್ದವರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಈ ವಿಡಿಯೋ, ಸಮಾಜದಲ್ಲಿ ಇಂದಿಗೂ ಪ್ರೀತಿ ಮತ್ತು ಐಕ್ಯತೆ ಜೀವಂತವಾಗಿದೆ ಎನ್ನುವುದನ್ನಾಈ ಘಟನೆ ಎತ್ತಿ ತೋರಿಸಿದೆ.
ನಿಜಕ್ಕೂ, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಲು ಎಷ್ಟೇ ಪ್ರಯತ್ನಗಳು ನಡೆದರೂ, ಸುನೀತಾ ಅರೋರಾ ಮತ್ತು ಮೊಹಮ್ಮದ್ ಜುನೈದ್ ಅವರಂತಹ ವ್ಯಕ್ತಿಗಳು ಇರುವವರೆಗೂ ಭಾರತದ ಜಾತ್ಯತೀತತೆ ಮತ್ತು ಸಹಬಾಳ್ವೆಯನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ದ್ವೇಷದ ನಡುವೆ ಪ್ರೀತಿಯ ಬೀಜ ಬಿತ್ತುತ್ತಿರುವ ಇಂತಹ ಕಾರ್ಯಗಳು ಸಮಾಜಕ್ಕೆ ಅತ್ಯಗತ್ಯವಾಗಿವೆ.












Click it and Unblock the Notifications