Hindenburg Research: ಹಿಂಡೆನ್ ಬರ್ಗ್ ವರದಿ, ಮಾಧವಿ ಪುರಿ ಬುಚ್ ಯಾರು?
ಮುಂಬೈ, ಆಗಸ್ಟ್ 13: ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡೆನ್ ಬರ್ಗ್ ಭಾರತದಲ್ಲಿ ಮತ್ತೆ ಚರ್ಚೆಯನ್ನು ಹುಟ್ಟು ಹಾಕಿದೆ. ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮುಖ್ಯಸ್ಥೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅದಾನಿ ಗ್ರೂಪ್ ಷೇರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಹಿಂಡೆನ್ ಬರ್ಗ್ ವರದಿ ಆರೋಪ ಮಾಡಿತ್ತು.
ಹಿಂಡೆನ್ ಬರ್ಗ್ ವರದಿ ಬಳಿಕ ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ನ 10 ಕಂಪನಿಗಳ ಪೈಕಿ 8 ಕಂಪನಿಗಳ ಷೇರು ಕುಸಿತಗೊಂಡಿತ್ತು. ಅದಾನಿ ಗ್ರೂಪ್‌ನ ಸಾಗರೋತ್ತರ ಹೂಡಿಕೆಯಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಪಾಲುದಾರಿಕೆ ಹೊಂದಿದ್ದಾರೆ ಎಂಬುದು ಆರೋಪವಾಗಿದೆ.

58 ವರ್ಷದ ಮಾಧವಿ ಪುರಿ ಬುಚ್ 2022ರಲ್ಲಿ ಅಜಯ್ ತ್ಯಾಗಿ ಅವರ ಬಳಿಕ ಸೆಬಿ ಅಧ್ಯಕ್ಷರಾಗಿ ನೇಮಕಗೊಂಡರು. ಸೆಬಿ ಮೊದಲ ಮಹಿಳಾ ಮುಖ್ಯಸ್ಥರಾಗಿ ನೇಮಕಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಮಾಧವಿ ಬುಚ್ ಅವರದ್ದು. ಮೂರು ವರ್ಷಗಳ ಅವಧಿಗೆ ಅವರು ಸೆಬಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.
ಐಎಎಸ್ ಅಧಿಕಾರೇತರ ಮುಖ್ಯಸ್ಥೆ: ಮಾಧವಿ ಪುರಿ ಬುಚ್ ಖಾಸಗಿ ವಲಯದಿಂದ ಸೆಬಿ ಮುಖ್ಯಸ್ಥರಾಗಿ ನೇಮಕಗೊಂಡ ಮೊದಲಿಗರು. 1984ನೇ ಬ್ಯಾಚ್ ಐಎಎಸ್ ಅಧಿಕಾರಿ ಅಜಯ್ ತ್ಯಾಗಿ ಬಳಿಕ ಮಾಧವಿ ಸೆಬಿ ಮುಖ್ಯಸ್ಥರಾದರು. ಮೊದಲ ಬಾರಿಗೆ ಐಎಎಸ್ ಅಧಿಕಾರಿಯನ್ನು ಬಿಟ್ಟು ಮಾಧವಿ ಅವರನ್ನು ಮುಖ್ಯಸ್ಥರನ್ನಾಗಿ ಮಾಡಲಾಯಿತು.
ದೆಹಲಿಯ ಪ್ರತಿಷ್ಠಿತ ಸ್ಟೀಫನ್ಸ್ ಕಾಲೇಜಿನ ವಿದ್ಯಾರ್ಥಿಯಾದ ಮಾಧವಿ ಪುರಿ ಬುಚ್, ಐಐಎಂ-ಅಹಮದಾಬಾದ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ. ಐಸಿಐಸಿಐ ಬ್ಯಾಂಕ್ ಮೂಲಕ ಅವರು ವೃತ್ತಿ ಜೀವನ ಆರಂಭಿಸಿದರು. ಹಣಕಾಸು ಮಾರುಕಟ್ಟೆಯಲ್ಲಿ ಮೂರು ದಶಕಗಳ ಕಾಲದ ಅನುಭವ ಹೊಂದಿದ್ದಾರೆ.
ಮಾಧವಿ ಪುರಿ ಬುಚ್ ಅಗೋರಾ ಅಡ್ವೈಸರಿ ಪ್ರೈ. ಲಿ. ಸಂಸ್ಥಾಪಕ ನಿರ್ದೇಶಕಿ. ಅಲ್ಲದೇ ಅವರು ಶಾಂಘೈನಲ್ಲಿ ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ನಲ್ಲಿ ಮೂರು ವರ್ಷ ಕೆಲಸ ಮಾಡಿದ್ದರು. 2009-11ರ ತನಕ ಐಸಿಐಸಿಐ ಸೆಕ್ಯುರಿಟೀಸ್‌ನ ಸಿಇಒ ಆಗಿದ್ದರು.
ಝೆನ್ಸಾರ್ ಟೆಕ್ನಾಲಜೀಸ್, ಇನ್ನೋವೆನ್ ಕ್ಯಾಪಿಟಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಐಡಿಯಾ ಸೆಲ್ಯುಲರ್ ಲಿಮಿಟೆಡ್, ಮ್ಯಾಕ್ಸ್ ಹೆಲ್ತ್‌ಕೇರ್ ಮತ್ತು ಗೇಬಲ್ ಹಾರ್ನ್ ಇನ್ವೆಸ್ಟ್‌ಮೆಂಟ್‌ನಲ್ಲೂ ಸಹ ಮಾಧವಿ ಪುರಿ ಬುಚ್ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಕೇಂದ್ರ ಹಣಕಾಸು ಸಚಿವಾಲಯ ಸೆಬಿ ಮುಖ್ಯಸ್ಥರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಸಂಪುಟ ಕಾರ್ಯದರ್ಶಿ ನೇತೃತ್ವದ ಹಣಕಾಸು ವಲಯದ ನಿಯಂತ್ರಕಗಳ ನೇಮಕಾತಿ ಸಮಿತಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತದೆ.
ಈಗಾಗಲೇ ಹಿಂಡೆನ್ ಬರ್ಗ್ ಮಾಡಿರುವ ಆರೋಪಗಳನ್ನು ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ತಳ್ಳಿ ಹಾಕಿದ್ದಾರೆ. ಹಿಂಡೆನ್ ಬರ್ಗ್ ಮಾಡಿರುವ ಆರೋಪಗಳು ಆಧಾರರಹಿತ. ಮಾಧವಿ ಬುಚ್ ಮತ್ತು ಧವಲ್ ಬುಚ್ ಹಣಕಾಸು ವ್ಯವಹಾರಗಳು ತೆರೆದ ಪುಸ್ತಕ ಇದ್ದಂತೆ ಎಂದು ಸ್ಪಷ್ಟಪಡಿಸಿದ್ದಾರೆ.











Click it and Unblock the Notifications