ದೆಹಲಿಯ ಮೋದಿ ಮನೆಯಲ್ಲೇ ತಾಯಿ ಹೀರಾಬೆನ್ ವಾಸಿಸೋಲ್ಲ ಯಾಕೆ?
ನವದೆಹಲಿ, ಏಪ್ರಿಲ್ 24: 98 ವರ್ಷ ವಯಸ್ಸಾದರೂ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರು ದೆಹಲಿಯಲ್ಲಿರುವ ನರೇಂದ್ರ ಮೋದಿ ಅವರ ಸುಸಜ್ಜಿತ ಬಂಗಲೆಯಲ್ಲಿ ವಾಸಿಸದೆ, ಗುಜರಾತಿನ ಗಾಂಧಿನಗರದ ಪುಟ್ಟ ಮನೆಯಲ್ಲೇ ವಾಸಿಸುತ್ತಿರುವುದು ಏಕೆ?
ಈ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಉತ್ತರಿಸಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ತಾಯಿ ತಮ್ಮೊಂದಿಗೆ ಯಾಕೆ ವಾಸಿಸುತ್ತಿಲ್ಲ ಎಂಬ ಸತ್ಯವನ್ನು ಬಿಚ್ಚಿಟ್ಟರು.
ಮೋದಿಯವರು ಪ್ರಧಾನಿಯಾದ ನಂತರ ಎರಡು ದಿನ ಹೀರಾಬೆನ್ ಅವರು ದೆಹಲಿಯ ಪ್ರಧಾನಿ ನಿವಾಸದಲ್ಲಿ ವಾಸವಿದ್ದರು. ಆದರೆ ಮೋದಿಯವರು ಕೆಲಸ ಮುಗಿಸಿ ಮನೆಗೆ ಬರುವುದೇ ರಾತ್ರಿ 12 ಗಂಟೆಯ ಮೇಲಾಗಿರುತ್ತಿತ್ತು. ಮಾತನಾಡುವುದಕ್ಕೂ ಅವರೊಂದಿಗೆ ಯಾರೂ ಇರುತ್ತಿರಲಿಲ್ಲ. ಆದ್ದರಿಂದ ತಾವು ವಾಪಸ್ ಗುಜರಾತಿಗೇ ಹೋಗುವುದಾಗಿ ಅವರು ದುಂಬಾಲು ಬಿದ್ದರು.

"ಮತ್ತೆ ತಮ್ಮ ಹಳ್ಳಿಗೆ ತೆರಳಿ ಅಲ್ಲಿಯೇ ವಾಸವಿದ್ದಾರೆ. ನಾನೇ ಆಗಾಗ ಅವರ ಭೇಟಿಗೆ ಹೋಗುತ್ತಿರುತ್ತೇನೆ" ಎಂದು ಪ್ರಧಾನಿ ಮೋದಿ ಸಂದರ್ಶನದಲ್ಲಿ ಹೇಳಿದರು. ಏಪ್ರಿಲ್ 23 ರಂದು ನಡೆದ ಲೋಕಸಭೆ ಚುನಾವಣೆಯ ಮೂರನೇ ಹಂತದಲ್ಲಿ ಅಹ್ಮದಾಬಾದಿನಿಂದ ನರೇಂದ್ರ ಮೋದಿ ಅವರು ಮತ ಚಲಾಯಿಸಿದರು. ಈ ಸಂದರ್ಭದಲ್ಲಿ ಅವರು ತಾಯಿ ಹೀರಾಬೆನ್ ಅವರ ಆಶೀರ್ವಾದ ಪಡೆದು, ಕೆಲಕಾಲ ಅವರೊಂದಿಗೆ ಕಳೆದು ಬಂದರು.












Click it and Unblock the Notifications