2014ರಿಂದ ಹರಿಯಾಣದಲ್ಲಿನ ಬಿಜೆಪಿ ಆಡಳಿತ ಈ ಬಾರಿ ಬದಲಾಗುತ್ತದೆಯೇ?
ಬೆಂಗಳೂರು, ಸೆಪ್ಟಂಬರ್ 18: ಹರಿಯಾಣ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇಲ್ಲಿ 2014ರಿಂದಲೇ ಭಾರತೀಯ ಜನತಾ ಪಕ್ಷ (ಬಿಜೆಪಿ) ಆಡಳಿತ ನಡೆಸಿಕೊಂಡು ಬರುತ್ತಿದೆ. ಅಂದಿನಿಂದಲೇ ಪ್ರತಿ ಪಕ್ಷ ಕಾಂಗ್ರೆಸ್ ಪ್ರಬಲ ಸ್ಪರ್ಧೆ ಒಡ್ಡುತ್ತಲೇ ಬಂದಿದೆ. ಇದೀಗ 'ಕೈ' ಪಡೆಗೆ ಒಂದಷ್ಟು ಬಲ ಬಂದಂತಿದೆ. ಕಾರಣ ಬಿಜೆಪಿಗೆ ತುಸು ಹಿನ್ನಡೆ ಎದುರಾಗುವ ಸಾಧ್ಯತೆ ಇದೆ.
ಬಿಜೆಪಿಯು 2014, 2019 ಮತ್ತು 2024ರಲ್ಲಿ ನಡೆದ ಲೋಕಸಭೆ ಚುನಾವಣೆಗಳಲ್ಲಿ, ವಿಧಾನಸಭೆ ಕ್ಷೇತ್ರಗಳಲ್ಲಿನ ಸ್ಪರ್ಧೆಗಳು ಹೆಚ್ಚಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಉಂಟು ಮಾಡಿದೆ. ಹರಿಯಾಣದಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಶೇಕಡಾ 58.2ರಷ್ಟು ಜನಪ್ರಿಯತೆ ಗಳಿಸಿತ್ತು. ಅದಕ್ಕೆ ಅಂದು ಬಂದ ಮತಗಳು ಸಾಕ್ಷಿ. 90 ಸೀಟುಗಳ ಪೈಕಿ 79 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ, ಕಾಂಗ್ರೆಸ್‌ಗೆ ಠಕ್ಕರ್ ನೀಡಿದೆ.

ಹರಿಯಾಣದಲ್ಲಿ ಬಿಜೆಪಿ ಈಗಲೂ ಸ್ಥಿರವಾಗಿದೆಯೆ
ಕೆಲವು ವರ್ಷಗಳ ಹಿಂದೆ ಕೇಸರಿ ಪಾಳಯದ ಬಿಗಿ ಹಿಡಿತದಲ್ಲಿದ್ದ ಹರಿಯಾಣದಲ್ಲಿ, ಬಿಜೆಪಿಯ ಹಿಡಿತ ಸಂಪೂರ್ಣ ಕಡಿಮೆ ಆಗುತ್ತಿದೆ. ಬಿಜೆಪಿ ಕಳೆದ ಕೆಲವು ಚುನಾವಣೆಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಇದರ ನೇರ ಪರಿಣಾಮ, ಅಲ್ಲಿನ ಸ್ಥಳೀಯ ಪಕ್ಷಗಳ ಮೇಲೆ ಬಿದ್ದಿದೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಇಲ್ಲಿ ಜನರ ಮನವನ್ನು ಹೆಚ್ಚಾಗಿ ಗೆಲ್ಲುವಲ್ಲಿ ವಿಫಲವಾಗಿದೆ.
ಈ ಬಾರಿ ಕಾಂಗ್ರೆಸ್ ಸ್ಟಾರ್ ಅಥ್ಲೀಟ್‌ಗಳನ್ನು ಅಖಾಡಕ್ಕೆ ಇಳಿಸುವ ಮೂಲಕ ವೋಟ್ ಶೇರಿಂಗ್ ಮಾರ್ಜಿನ್ ಹೆಚ್ಚಿಸಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿದೆ.
ಹರಿಯಾಣದಲ್ಲಿ 1989ರ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್‌ಗೆ ಶೇಕಡಾ 43.7ರಷ್ಟು ಮತಗಳು ಬಂದವು. ಅದೇ 2005ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಶೇಕಡಾ 42.5ರಷ್ಟು ಮತ ಪಡೆದು ಅತ್ಯುತ್ತಮ ಪ್ರದರ್ಶನ ನೀಡಿತ್ತು. ನಂತರ ಇದು 2014ರಿಂದ ಮತ ಗಳಿಕೆ ಕಾಂಗ್ರೆಸ್‌ಗೆ ಇಳಿ ಮುಖವಾಯಿತು.
ಮೀಸಲಾತಿ ಕ್ಷೇತ್ರದಲ್ಲಿ 'ಕೈ' ಮುನ್ನಡೆ
ದಲಿತರಿಗೆ ಮೀಸಲಾದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಗಮನಾರ್ಹ ಮತಗಳು (51.7%) ಬಂದು, ಅತ್ಯಧಿಕ ಸ್ಥಾನ ಗಳಿಸಿತ್ತು. 2014ರ ನಂತರ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಕೆಲವೊಂದಿಷ್ಟು ಸ್ಥಳೀಯ ಪಕ್ಷಗಳು ಮೈತ್ರಿ ಮೂಲಕ ಮುಂಬರಲಿರುವ ಚುನಾವಣೆ ಎದುರಿಸಲು ಸಜ್ಜಾಗಿವೆ.
ಹೆಚ್ಚಿನ ಸೀಟುಗಳಿಗಾಗಿ ಬಿಜೆಪಿಯು ಮುಖ್ಯಮಂತ್ರಿಗಳ ಆಯ್ಕೆಯಲ್ಲಿಮನೋಹರ್ ಲಾಲ್ ಖಟ್ಟರ್ ಮತ್ತು ನಯಾಬ್ ಸಿಂಗ್ ಸೈನಿ ಮೂಲಕ ಇತರ ಹಿಂದುಳಿದವರ ಮತ ಸೆಳೆಯಲು ಪ್ಲಾನ್ ಮಾಡಿತ್ತು. ಅದೇ ರೀತಿ ಕಾಂಗ್ರೆಸ್, ಭೂಪೇಂದರ್ ಹೂಡಾ ನೇತೃತ್ವದಲ್ಲಿ ಹೆಚ್ಚಿನ ಸೀಟು ಗೆಲ್ಲಲು ತಂತ್ರ ರೂಪಿಸಿತ್ತು. ಹಿಂದಿನಿಂದಲೂ ತಂತ್ರ, ಪ್ರತಿ ತಂತ್ರ ರೂಪಿಸುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ..












Click it and Unblock the Notifications