Haryana Election: ಬಿಜೆಪಿ ಅಭ್ಯರ್ಥಿಯಿಂದ ನಾಮಪತ್ರ ವಾಪಾಸ್, ಕೇಸರಿಪಡೆ ಪ್ಲಾನ್ ಏನು?
ನವದೆಹಲಿ, ಸೆಪ್ಟಂಬರ್ 16: ಹರಿಯಾಣ, ಮಹಾರಾಷ್ಟ್ರ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ಕಣ ರಂಗೇರಿದೆ. ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿವೆ. ಈ ಮಧ್ಯೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ರೋಹ್ತಾಶ್ ಜಂಗ್ರಾ ಅವರು ಈಗಾಗಲೇ ಸಲ್ಲಿಸಿದ್ದ ಉಮೇದುವಾರಿಕೆಯನ್ನು ವಾಪಾಸ್ಸು ಪಡೆದಿದ್ದಾರೆ.
ಹೌದು, ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ರೋಹ್ತಾಶ್ ಜಂಗ್ರಾ ಅವರು ಹರಿಯಾಣದ ಸಿರ್ಸಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. ಅದರಂತೆ ಅವರು ಚುನಾವಣೆ ಆಯೋಗಕ್ಕೆ ನಾಮಪತ್ರ ಸಲ್ಲಿಸಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಪಕ್ಷದ ಹಿತದೃಷ್ಠಿಯಿಂದ ಹಿರಿಯ ನಾಯಕರ ಮಾತಿಗೆ ಮನ್ನಣೆ ಕೊಟ್ಟು ಉಮೇದುವಾರಿಕೆಯನ್ನು ಸೋಮವಾರ ಹಿಂಪಡೆದರು ಎಂದು ಎಎನ್‌ಐ ವರದಿ ಮಾಡಿದೆ.

ಪಕ್ಷದ ಸೂಚನೆ ಮೇರೆಗೆ ಸಿರ್ಸಾ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಹಿಂಪಡೆದಿದ್ದೇನೆ ಎಂದು ಖುದ್ದು ಅವರೇ ತಿಳಿಸಿದ್ದಾರೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿಯ ಅಶೋಕ್ ತನ್ವಾರ್ ಅವರು, ಇದು ಪಕ್ಷದ ನಿರ್ಧಾರವಾಗಿದ್ದರಿಂದ ಅವರು ನಾಮಪತ್ರ ಹಿಂಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಅಧಿಕಾರದಿಂದ ಕಾಂಗ್ರೆಸ್ ದೂರ ಇಡಲು ಬಿಜೆಪಿ ಪ್ಲಾನ್
ಬರೀ ಸುಳ್ಳು ಹೇಳುವ, ಜನರಿಗೆ ವಂಚಿಸುವ ಕಾಂಗ್ರೆಸ್‌ನಂತಹ ಪಕ್ಷವನ್ನು ಅಧಿಕಾರದಿಂದ, ರಾಜಕೀಯದಿಂದ ದೂರ ಇಡುವುದು ನಮ್ಮ ಗುರಿಯಾಗಿದೆ. ಜಾಂಗ್ರಾ ಅವರ ಕುಟುಂಬವು ಕಳೆದ ನಾಲ್ಕೂವರೆ ದಶಕಗಳಿಂದ ರಾಷ್ಟ್ರ ಮತ್ತು ಬಿಜೆಪಿಯ ಸೇವೆ ನೀಡಿದೆ. ಕೆಲವು ರಾಜಕೀಯ ಕಾರಣದಿಂದ ಪೂರ್ವಾಪರ ನೋಡಿಕೊಂಡು ನಾಮಪತ್ರ ಹಿಂಪಡೆಯುವಂತೆ ಸೂಚನೆ ನೀಡಲಾಗಿತ್ತು. ಮುಂದಿನ ತೀರ್ಮಾನವನ್ನು ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ ಎಂದು ತನ್ವಾರ್ ತಿಳಿಸಿದರು.
ರೋಹ್ತಾಸ್ ಜಾಂಗ್ರಾ ಅವರು ಸಿರ್ಸಾ ವಿಧಾನಸಭಾ ಕ್ಷೇತ್ರದಿಂದ ಲೋಖಿತ್ ಪಕ್ಷದ ಅಭ್ಯರ್ಥಿ ಗೋಪಾಲ್ ಗೋಯಲ್ ಕಾಂಡ ಮತ್ತು ಕಾಂಗ್ರೆಸ್ ನಾಯಕ ಗೋಕುಲ್ ಸೇಟಿಯಾ ವಿರುದ್ಧ ಕಣಕ್ಕಿಳಿದಿದ್ದರು. ಆದರೆ ಕಳೆದ (2019) ವಿಧಾನಸಭಾ ಚುನಾವಣೆಯಲ್ಲಿ ಗೋಪಾಲ್ ಗೋಯಲ್ ಕಾಂಡ ವಿಕ್ಟರಿ ಭಾರಿಸಿದ್ದರು.
ಹರಿಯಾಣ ಚುನಾವಣೆ, ಫಲಿತಾಂಶ ಪ್ರಕಟ
ಇನ್ನೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೆಟಿಯಾ ಅವರು ರನ್ನರ್ ಅಪ್ ಆದರು. ಅಂದು ಅವರು ಕೇವಲ 600 ಮತಗಳಿಂದ ಸೋಲೊಪ್ಪಿಕೊಂಡಿದ್ದರು. ಇದೀಗ ಮತ್ತು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹರಿಯಾಣದಲ್ಲಿ ಅಕ್ಟೋಬರ್ 5 ರಂದು ಚುನಾವಣೆ ನಡೆದರೆ, ಅಕ್ಟೋಬರ್ 8 ರಂದು ಚುನಾವಣೆ ಫಲಿತಾಂಶ ಬಿತ್ತರಗೊಳ್ಳಲಿದೆ.
ಇತ್ತೀಚೆಗೆ ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದಾರೆ. ಹರಿಯಾಣದಲ್ಲಿ ಬಿಜೆಪಿ ಸಂಸದರ ತಾಯಿ 72 ವರ್ಷದ ಇವರು ಪಕ್ಷೇತರ ಮೂಲಕ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ. ಅವರು ಈ ಹಿಂದೆ ಎರಡು ಸಲ ಶಾಸಕರಾಗಿ ಆಯ್ಕೆ ಆಗಿದ್ದು, ಇದೀಗ ಮೂರನೇ ಭಾರಿ ಮತ್ತು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.












Click it and Unblock the Notifications