Haryana Assembly Election 2024 Results: ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಹಾರ, ಬಿಜೆಪಿ ಭಾರ- ಕಾರ್ಯಕರ್ತರ ಸಂಭ್ರಮ!
ದೇಶದಲ್ಲಿ ಹರಿಯಾಣ ಹಾಗೂ ಜಮ್ಮು ಕಾಶ್ಮೀರ ಫಲಿತಾಂಶ ಭಾರೀ ಕುತೂಹಲವನ್ನು ಕೆರಳಿಸಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ಬಿಜೆಪಿ ಅತ್ಯಂತ ಕಡಿಮೆ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹೀಗಾಗಿ ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಜಯ ಸಿಗುವ ಲಕ್ಷಣಗಳು ಕಾಣಿಸುತ್ತಿದ್ದು, ಈಗಾಗಲೇ ಹಲವೆಡೆ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿಗೆ ಬಿಜೆಪಿ ಸವಾಲು ಒಡ್ಡಿದೆ. ಜಮ್ಮು ಕಾಶ್ಮೀರ ಅಧಿಕಾರ ಹಿಡಿಯಲು 46 ಸೀಟು ಪಡೆಯಬೇಕಿದೆ. 90 ಸದಸ್ಯ ಬಲದ ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಶುರುವಾಗಿದೆ. ಕಾಂಗ್ರೆಸ್ ಈವರೆಗೆ 45 ಸೀಟುಗಳಲ್ಲಿ ಮುನ್ನಡೆ ಸಾಧಿಸಿದರೆ, ಬಿಜೆಪಿ ಕೇವಲ 31 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಪಿಡಿಪಿ ಮೂರು ಕ್ಷೇತ್ರ ಹಾಗೂ ಇತರ ಪಕ್ಷಗಳು ಒಂದು ಸೀಟು ಪಡೆದುಕೊಳ್ಳುವ ಸಾಧ್ಯತೆ ಇದೆ. ಮತ ಎಣಿಕೆ ಮುಂದುವರಿದಿದ್ದು, ಅಧಿಕಾರದ ಗದ್ದುಗೆಯನ್ನು ಯಾರು ಹಿಡಿಯಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಹರಿಯಾಣದಲ್ಲಿ ಈ ಬಾರಿ ಯಾರ ಸರ್ಕಾರ ರಚನೆಯಾಗಲಿದೆ ಎಂಬುದು ಇಂದು ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗಲಿದೆ. ಮತ ಎಣಿಕೆ ಈಗಾಗಲೇ ಆರಂಭವಾಗಿದ್ದು, ಮೊದಲು ಅಂಚೆ ಮತಗಳ ಎಣಿಕೆ ಪೂರ್ಣಗೊಂಡಿದೆ. ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ ನೋಡುವುದಾದರೆ ಕಾಂಗ್ರೆಸ್ 10 ವರ್ಷಗಳ ನಂತರ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ. ಮತ ಎಣಿಕೆಗೂ ಮುನ್ನ ಸಿಎಂ ನಯಾಬ್ ಸೈನಿ ಮತ್ತೆ ಸರ್ಕಾರ ರಚಿಸುವುದಾಗಿ ಹೇಳಿಕೊಂಡಿದ್ದಾರೆ.
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷವು 56 ಸ್ಥಾನಗಳಲ್ಲಿ ಮುನ್ನಡೆಯೊಂದಿಗೆ ಮ್ಯಾಜಿಕ್ ನಂಬರ್ ದಾಟಿದೆ. ಹಾಲಿ ಬಿಜೆಪಿ 21 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ಕಾಂಗ್ರೆಸ್ 56 ಸ್ಥಾನಗಳಲ್ಲಿ ಮುಂದಿದೆ. ಹೀಗಾಗಿ ಹರಿಯಾಣದಲ್ಲಿ ಸತತ ಹತ್ತು ವರ್ಷಗಳ ಆಡಳಿತ ನಡೆಸಿದ್ದ ಬಿಜೆಪಿಗೆ ಭಾರೀ ಮುಖಭಂಗವಾಗುವ ಸಾಧ್ಯತೆ ಇದ್ದು, ಸಂಜೆ ಸಂಪೂರ್ಣ ಫಲಿತಾಂಶ ಪ್ರಕಟವಾಗಲಿದೆ.
ಹರಿಯಾಣ ಮತ್ತು ಜೆ & ಕೆ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷವು ಗೆಲುವಿನತ್ತ ಸಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಮುನ್ನಡೆಯುತ್ತಿದೆ. ಹೀಗಾಗಿ ದೆಹಲಿಯಲ್ಲಿ ಕಾರ್ಯಕರ್ತರು ಸಂಭ್ರಮ ಮುಗಿಲು ಮುಟ್ಟಿದೆ. ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಿಸುತ್ತಿರುವ ದೃಶ್ಯ ಕಂಡು ಬಂದಿವೆ.
ಆದರೆ ಚುನಾವಣಾ ಆಯೋಗದ ಪ್ರಕಾರ ಬೇರೆಯದ್ದೇ ಅಂಕಿ-ಅಂಶ ನೀಡಿದೆ. ಆಯೋಗದ ಪ್ರಕಾರ ಹರಿಯಾಣದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದರೆ ಕಾಂಗ್ರೆಸ್ ಭಾರೀ ಪೈಪೋಟಿಗಿಳಿದಿದೆ.












Click it and Unblock the Notifications