ಪ್ರತಿಭಟನೆ ನೆಪದಲ್ಲಿ ಭಾರತವನ್ನ ಬಾಂಗ್ಲಾದೇಶ ಮಾಡಲು ಹೊರಟಿವೆ ಬಾಹ್ಯ ಶಕ್ತಿಗಳು: ಹರೀಶ್ ಸಾಲ್ವೆ ಗಂಭೀರ ಆರೋಪ
ನವದೆಹಲಿ: ಪ್ರತಿಭಟನೆಯ ಹಕ್ಕಿನ ಹೆಸರಿನಲ್ಲಿ ಭಾರತದಲ್ಲಿಯೂ ನೆರೆಯ ನೇಪಾಳ ಮತ್ತು ಬಾಂಗ್ಲಾದೇಶದಂತಹ ಪರಿಸ್ಥಿತಿಯನ್ನ ನಿರ್ಮಾಣ ಮಾಡಲು ಕೆಲವು ಶಕ್ತಿಗಳು ಯತ್ನಿಸುತ್ತಿವೆ ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಹಾಗೂ ಭಾರತದ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಲ್ವೆ ಗಂಭೀರ ಆರೋಪ ಮಾಡಿದ್ದಾರೆ.
ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೆಲವು ಪ್ರತಿಭಟನೆಗಳ ಹಿಂದೆ ವಿದೇಶಿ ಫಂಡಿಂಗ್ ಮತ್ತು ಬಾಹ್ಯ ಶಕ್ತಿಗಳ ಕೈವಾಡ ಇರುವ ಬಲವಾದ ಶಂಕೆ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಸ್ವರೂಪ ಮತ್ತು ಅದಕ್ಕೆ ಹರಿದುಬರುತ್ತಿರುವ ಹಣದ ಮೂಲದ ಬಗ್ಗೆ ಮಹತ್ವದ ಪ್ರಶ್ನೆಗಳನ್ನ ಎತ್ತಿದ್ದಾರೆ. ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯುಂಟು ಮಾಡುವ ಉದ್ದೇಶದಿಂದಲೇ ಕೆಲವು ಗುಂಪುಗಳು ಉದ್ದೇಶಪೂರ್ವಕವಾಗಿ ಇಂತಹ ಪ್ರತಿಬಟನೆಗಳನ್ನ ಆಯೋಜಿಸುತ್ತಿವೆ ಎಂದು ಅವರು ದೂರಿದ್ದಾರೆ.
ಪ್ರತಿಭಟನೆಗಳ ಹಿಂದೆ ವಿದೇಶಗಳ ಫಂಡಿಂಗ್?
"ದೇಶದಲ್ಲಿ ನಡೆಯುತ್ತಿರುವ ಕೆಲವು ನಿರ್ದಿಷ್ಟ ಪ್ರತಿಭಟನೆಗಳಿಗೆ ವಿದೇಶಗಳು ಫಂಡಿಂಗ್ ಮಾಡುತ್ತಿದ್ದಾವೆ ಎಂಬುದು ನನ್ನ ಬಲವಾದ ನಂಬಿಕೆ. ಪ್ರತಿಭಟನೆಗಳನ್ನ ಆಯೋಜಿಸಲು ಮತ್ತು ಜನರನ್ನ ಸೇರಿಸಲು ಸಾಕಷ್ಟು ಹಣದ ಅಗತ್ಯವಿದೆ. ಆದರೆ, ದಿಢೀರನೆ ಹುಟ್ಟಿಕೊಳ್ಳುವ ಇಂತಹ ಹೋರಾಟಗಳಿಗೆ ಹಣ ಎಲ್ಲಿಂದ ಬರುತ್ತಿದೆ? ಡಿಪ್ಕೆ, ಸೌರವ್ ದಾಸ್ ಹಾಗೂ ಕೆಲವು ಯೂಟ್ಯೂಬರ್‌ಗಳು ಸೇರಿದಂತೆ ಕೆಲವರು ಏಕಾಏಕಿ ಪ್ರತಿಭಟನೆಗಳ ನಾಯಕರಾಗಿ ಹೊರಹೊಮ್ಮಿದ್ದಾರೆ.
ಜರ್ಮನಿ ಮತ್ತು ಇತರ ದೇಶಗಳಲ್ಲಿ ವಾಸಿಸುವ ಕೆಲವರು ಇದ್ದಕ್ಕಿದ್ದಂತೆ ಇಲ್ಲಿಗೆ ಬಂದು ನಾಯಕರಾಗುತ್ತಿದ್ದಾರೆ. ಈ ಚಟುವಟಿಕೆಗಳಿಗೆ ಹಣ ಯಾರು ನೀಡುತ್ತಿದ್ದಾರೆ?" ಎಂದು ಹರೀಶ್ ಸಾಲ್ವೆ ಪ್ರಶ್ನಿಸಿದ್ದಾರೆ.
ಬಾಹ್ಯ ಶಕ್ತಿಗಳ ಕೈವಾಡದ ಶಂಕೆ
ನೆರೆಯ ದೇಶಗಳಾದ ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಪಲ್ಲಟಗಳು ಮತ್ತು ಆಂತರಿಕ ದಂಗೆಗಳನ್ನ ಉಲ್ಲೇಖಿಸಿದ ಅವರು, ಆ ಘಟನೆಗಳ ಹಿಂದೆಯೂ ಬಾಹ್ಯ ಶಕ್ತಿಗಳೇ ಕೆಲಸ ಮಾಡಿವೆ ಎಂದು ಪ್ರತಿಪಾದಿಸಿದರು.
"ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರನ್ನ ಅಧಿಕಾರದಿಂದ ಕೆಳಗಿಳಿಸಿದ್ದು ಯಾರು? ಅಲ್ಲಿ ಹೊಸ ಪ್ರಧಾನಿಯನ್ನ ತಂದವರು ಯಾರು? ಇವುಗಳ ಹಿಂದೆ ಬಾಹ್ಯ ಶಕ್ತಿಗಳ ಕೈವಾಡವಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇದೇ ರೀತಿಯ ತಂತ್ರವನ್ನ ಇದೀಗ ಭಾರತದಲ್ಲೂ ಪ್ರಯೋಗಿಸಲು ಯತ್ನಿಸಲಾಗುತ್ತಿದೆ" ಎಂದು ಸಾಲ್ವೆ ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಅಭಿವೃದ್ಧಿ ತಡೆಯುವ ಹುನ್ನಾರ
ಕಳೆದ ಆರು ಎಂಟು ತಿಂಗಳುಗಳಿಂದ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನ ಗಮನಿಸಿದರೆ, ಸರ್ಕಾರದ ಕೆಲಸಗಳಿಗೆ ಅಡ್ಡಿಪಡಿಸುತ್ತಿರುವ ಸ್ಪಷ್ಟ ಮಾದರಿಯೊಂದು ಗೋಚರಿಸುತ್ತಿದೆ ಎಂದು ಅವರು ಹೇಳಿದ್ದಾರೆ. "ಒಂದೆಡೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಆರ್ಥಿಕ ಅಭಿವೃದ್ಧಿ, ತಾಂತ್ರಿಕ ಪ್ರಗತಿ, ಉಪಗ್ರಹ ಸಾಮರ್ಥ್ಯಗಳ ವಿಸ್ತರಣೆ ಹಾಗೂ ಹಾರ್ಮುಜ್ ಜಲಸಂಧಿ ಬಿಕ್ಕಟ್ಟಿನಂತಹ ಅಂತಾರಾಷ್ಟ್ರೀಯ ವಿಚಾರಗಳತ್ತ ಗಮನಹರಿಸಿ ದೇಶವನ್ನ ಮುನ್ನಡೆಸುತ್ತಿದೆ. ಆದರೆ, ಈ ಪ್ರತಿಭಟನಾ ಗುಂಪುಗಳು ಸರ್ಕಾರವನ್ನ ತಡೆಯುವ ಏಕೈಕ ಉದ್ದೇಶದಿಂದ ಕೆಲಸ ಮಾಡುತ್ತಿವೆ" ಎಂದು ಸಾಲ್ವೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೊಂದು ನಿಜವಾದ ಜನಾಂದೋಲನವಲ್ಲ
"ಇದೊಂದು ನಿಜವಾದ ಜನಾಂದೋಲನ ಎಂದು ನಾನು ಭಾವಿಸುವುದಿಲ್ಲ. ಭಾರತದಲ್ಲಿ ಸಾರ್ವಜನಿಕರ ದಂಗೆ ಅಥವಾ ಜನಾಕ್ರೋಶದ ಯಾವುದೇ ಲಕ್ಷಣಗಳಿಲ್ಲ. ಯೂಟ್ಯೂಬ್ ವಿಡಿಯೋಗಳು, ಶಾರ್ಟ್ ರೀಲ್ಸ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸುಳ್ಳು ಮತ್ತು ದಾರಿತಪ್ಪಿಸುವ ನ್ಯರೇಟಿವ್ ಅನ್ನಾ ಕಟ್ಟಿಕೊಡಲಾಗುತ್ತಿದೆ" ಎಂದು ಅವರು ಎಚ್ಚರಿಸಿದ್ದಾರೆ.
ವಿದೇಶಿ ಫಂಡಿಂಗ್ ಮತ್ತು ಅಸ್ಥಿರಗೊಳಿಸುವ ಯತ್ನಗಳ ಆರೋಪದ ಕುರಿತು ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹರೀಶ್ ಸಾಲ್ವೆ ಒತ್ತಾಯಿಸಿದ್ದಾರೆ. ದೇಶದ ವ್ಯವಸ್ಥೆಯನ್ನ ಬುಡಮೇಲು ಮಾಡಲು ಯತ್ನಿಸುವ ಇಂತಹ ಚಳುವಳಿಗಳನ್ನ ನಿಭಾಯಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಜನಬೆಂಬಲವಿಲ್ಲದ ಕಾರಣ ಇಂತಹ ಹೋರಾಟಗಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications
