Chief Election Commissioner: ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕ
ಜ್ಞಾನೇಶ್ ಕುಮಾರ್ ಅವರನ್ನು ಹೊಸ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ ಎಂದು ಕೇಂದ್ರ ಕಾನೂನು ಸಚಿವಾಲಯ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನೊಳಗೊಂಡ ಚುನಾವಣಾ ಸಮಿತಿಯ ಸಭೆಯ ನಂತರ ಸರ್ಕಾರ ನೂತನ ಮುಖ್ಯ ಚುನಾವಣಾ ಆಯುಕ್ತರ ಹೆಸರನ್ನು ಘೋಷಣೆ ಮಾಡಿದೆ.
ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಅವಧಿ ಮುಕ್ತಾಯವಾದ ಬಳಿಕ ಹಿರಿಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅಧಿಕಾರ ಸ್ವೀಕರಿಸಲಿದ್ದಾರೆ. ರಾಜೀವ್ ಕುಮಾರ್ 65 ವರ್ಷ ತುಂಬಿದ ಬಳಿಕ ಅಂದರೆ ಮಂಗಳವಾರ ಅಧಿಕಾರದಿಂದ ನಿವೃತ್ತರಾಗಲಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರು ಆರು ವರ್ಷಗಳ ಕಾಲ ಅಥವಾ 65 ವರ್ಷ ತುಂಬುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೂ ಅಧಿಕಾರದಲ್ಲಿರುತ್ತಾರೆ. ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಪಟ್ಟಂತೆ ಜಾರಿಯಾಗಿರುವ ಹೊಸ ಕಾನೂನಿನ ಪ್ರಕಾರ ನೇಮಕವಾದ ಮೊದಲ ಮುಖ್ಯ ಚುನಾವಣಾ ಆಯುಕ್ತರು ಎನ್ನುವ ಹೆಗ್ಗಳಿಕೆಗೆ ಜ್ಞಾನೇಶ್ ಕುಮಾರ್ ಪಾತ್ರರಾಗಿದ್ದಾರೆ.
ಆಯ್ಕೆ ಸಮಿತಿಯು ಸೋಮವಾರ ಸಂಜೆ ದೆಹಲಿಯ ಸೌತ್ ಬ್ಲಾಕ್‌ನಲ್ಲಿರುವ ಪ್ರಧಾನಿ ಕಚೇರಿಯಲ್ಲಿ ಸಭೆ ಸೇರಿತು. ಶೋಧನಾ ಸಮಿತಿಯಿಂದ ಆಯ್ಕೆ ಮಾಡಲಾದ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಿತು.
ಫೆಬ್ರವರಿ 19ರಂದು ಸುಪ್ರೀಂ ಕೋರ್ಟ್ ಆಯ್ಕೆ ಸಮಿತಿಯ ರಚನೆಯ ಕುರಿತ ಅರ್ಜಿಯನ್ನು ವಿಚಾರಣೆ ನಡೆಸುವವರೆಗೆ ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲು ನಡೆಸುವ ಸಭೆಯನ್ನು ಸರ್ಕಾರ ಮುಂದೂಡಬೇಕು ಎಂದು ಕಾಂಗ್ರೆಸ್ ಒತ್ತಾಯ ಮಾಡಿತ್ತು.
ಸಬೆಯ ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ, ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಆಯ್ಕೆ ಸಮಿತಿಯಿಂದ ತೆಗೆದುಹಾಕುವ ಮೂಲಕ, ಸರ್ಕಾರವು ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಕಾಪಾಡುವ ಬದಲು ನಿಯಂತ್ರಣ ಹೇರಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.











Click it and Unblock the Notifications