Gujarat Election Result 2022 : ಗುಜರಾತ್ ಕಾಂಗ್ರೆಸ್ ಉಸ್ತುವಾರಿ ರಘು ಶರ್ಮಾ ರಾಜೀನಾಮೆ
ಅಹಮದಾಬಾದ್, ಡಿಸೆಂಬರ್ 8: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನಂತರ ಕಾಂಗ್ರೆಸ್ ನಾಯಕ ರಘು ಶರ್ಮಾ ಎಐಸಿಸಿ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗುಜರಾತ್‌ನಲ್ಲಿ ಇದುವರೆಗೆ 7 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, 4.30 ರವೇಳೆಗೆ 9 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
2022 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಚೊಚ್ಚಲ ಬಾರಿಗೆ ಸ್ಪರ್ಧೆ ಮಾಡಿದ್ದ ಆಮ್ ಆದ್ಮಿ ಪಕ್ಷವು (ಎಎಪಿ) ಸುಮಾರು 13 ಪ್ರತಿಶತ ಮತಗಳನ್ನು ಪಡೆದಿದ್ದರಿಂದ ಕಾಂಗ್ರೆಸ್ ಪಕ್ಷದ ಮತಗಳ ಪ್ರಮಾಣವು ಕೇವಲ 24 ಪ್ರತಿಶತಕ್ಕೆ ಕುಸಿದಿದೆ.
ಮತ ಎಣಿಕೆ ಆರಂಭದಿಂದಲೇ ಬಿಜೆಪಿ ಮುನ್ನಡೆ ಸಾಧಿಸಿದರು. ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಲಿದೆ ಎಂದು ಮತ ಎಣಿಕೆ ಆರಂಭವಾದ ನಂತರ ರಘುಶರ್ಮಾ ಭರವಸೆ ವ್ಯಕ್ತಪಡಿಸಿದ್ದರು.

"ಆಶ್ಚರ್ಯಕರ ಫಲಿತಾಂಶಗಳು ಕಾಂಗ್ರೆಸ್ ಪಕ್ಷದ ಪರವಾಗಿ ಬರಲಿವೆ. ಬಿಜೆಪಿಯನ್ನು ವಾಸ್ತವದಲ್ಲಿ ನೋಡಲಾಗುವುದಿಲ್ಲ. ಅಂತಿಮ ಫಲಿತಾಂಶಕ್ಕಾಗಿ ಕಾಯಿರಿ" ಎಂದು ಶರ್ಮಾ ಹೇಳಿದ್ದರು. ಆದರೆ, ಅವರ ಲೆಕ್ಕಾಚಾರ ಸಂಪೂರ್ಣವಾಗಿ ತಲೆಕೆಳಗಾಗಿದೆ.
ಸೋಲಿಗೆ ಕಾರಣ ಹುಡುಕಲು ಸಭೆ
ಆದರೆ 182 ಸ್ಥಾನಗಳ ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ 20 ಸ್ಥಾನಗಳಲ್ಲಿ ಕೂಡ ಗೆಲುವು ಸಾಧಿಸುವುದು ಕಷ್ಟವಾಗಿದೆ. ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಜಗದೀಶ್ ಠಾಕೂರ್ ಪ್ರತಿಕ್ರಿಯೆ ನೀಡಿ, ಪಕ್ಷದ ನ್ಯೂನತೆಗಳನ್ನು ವಿಶ್ಲೇಷಿಸಲು ಶೀಘ್ರದಲ್ಲೇ ಸಭೆ ನಡೆಸಲಾಗುವುದು ಎಂದು ಹೇಳಿದ್ದಾರೆ.
"ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಕಡಿಮೆಯಾಗಲು ಆಪ್ ಮತ್ತು ಅಸಾದುದ್ದೀನ್ ಓವೈಸಿ ಕಾರಣ ಎಂದು ಅವರು ಹೇಳಿದ್ದಾರೆ. ಎಲ್ಲಿ ತಪ್ಪಾಗಿದೆ ಎನ್ನುವುದನ್ನು ವಿಶ್ಲೇಷಣೆ ಮಾಡಲು ನಾವು ಶೀಘ್ರದಲ್ಲೇ ಸಭೆ ನಡೆಸುತ್ತೇವೆ. ಮುಂದಿನ ಸರ್ಕಾರ ಭರವಸೆಗಳನ್ನು ಈಡೇರಿಸುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಠಾಕೂರ್ ಹೇಳಿದರು.

ಗುಜರಾತ್ ಚುನಾವಣೆಯನ್ನು ಗೆಲ್ಲಬೇಕೆನ್ನುವ ಹಂಬಲ ಕಾಂಗ್ರೆಸ್‌ಗೆ ಮೊದಲಿನಿಂದಲೂ ಇದ್ದಂತಿರಲಿಲ್ಲ. ಪಕ್ಷದ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯಲ್ಲಿ ಮಗ್ನರಾಗಿದ್ದರು. ಗುಜರಾತ್‌ನಲ್ಲಿ ಬಿಜೆಪಿ ಅಬ್ಬರದ ಪ್ರಚಾರ ನಡೆಸುತ್ತಿದ್ದರೆ, ಮತ್ತೊಂದೆಡೆ ಆಮ್ ಆದ್ಮಿ ಪಕ್ಷ ಕೂಡ ಸಾಕಷ್ಟು ಪ್ರಚಾರ ಮಾಡಿತು. ಆದರೆ, ಕಾಂಗ್ರೆಸ್ ಮಾತ್ರ ಮೌನಕ್ಕೆ ಜಾರಿತ್ತು.












Click it and Unblock the Notifications