Gujarat Election Result 2022 : ಅಪ್ಪ, ಸಹೋದರಿ ಕಾಂಗ್ರೆಸ್ ಪರ : ಪತ್ನಿಯನ್ನು ಬಿಜೆಪಿ ಪರವಾಗಿ ನಿಲ್ಲಿಸಿ ಗೆಲ್ಲಿಸಿದ ಜಡೇಜಾ
ಗಾಂಧಿನಗರ, ಡಿಸೆಂಬರ್ 8: ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಯಾಗಿ ಜಾಮ್‌ನಗರ ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಭರ್ಜರಿ ಜಯ ಸಾಧಿಸಿದ್ದಾರೆ.
ಸ್ವಾರಸ್ಯದ ವಿಚಾರ ಎಂದರೆ, ರವೀಂದ್ರ ಜಡೇಜಾ ಅನಿರುಧ್‌ಸಿನ್ಹ್ ಮತ್ತು ಸಹೋದರಿ ನೈನಾ ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಿದ್ದರು. ರಾಜಕೀಯದ ಕಾರಣವಾಗಿ ಜಡೇಯಾ ಕುಟುಂಬದಲ್ಲಿ ಬಿರುಕು ಮೂಡುತ್ತದೆ ಎಂದು ಹೇಳಲಾಗಿತ್ತು.
ಆದರೆ, ಜಡೇಜಾ ಕುಟುಂಬಸ್ಥರು ಮಾತ್ರ ಇದಕ್ಕೆ ಹೆಚ್ಚಿನ ಗಮನ ಕೊಡಲಿಲ್ಲ. ಪ್ರಚಾರದ ವೇಳೆ ಅವರು ಒಬ್ಬರ ಮೇಲೊಬ್ಬರು ಕೆಸರೆರಚಾಟ ಮಾಡಲಿಲ್ಲ. ತಮ್ಮ ಕೆಲಸದ ಕಡೆ ಮಾತ್ರ ಗಮನಕೊಟ್ಟರು. ಅಂತಿಮವಾಗಿ ರವೀಂದ್ರ ಜಡೇಜಾ ತಮ್ಮ ಪತ್ನಿಯನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಿವಾಬಾ ಜಡೇಜಾ 84336 ಮತಗಳನ್ನು ಪಡೆಯುವ ಮೂಲಕ ವಿಜಯಶಾಲಿಯಾದರು. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ (ಎಎಪಿ) ಕರ್ಸನ್ ಕಾರ್ಮೂರ್ ಅವರನ್ನು 50,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು.
ಗೆಲುವಿನ ನಂತರ ಮಾತನಾಡಿದ ರಿವಾಬಾ ಜಡೇಜಾ, "ನನ್ನನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಸಂತೋಷದಿಂದ ಸ್ವೀಕರಿಸಿದವರು. ನನ್ನ ಗೆಲುವಿಗಾಗಿ ಕೆಲಸ ಮಾಡಿದವರು, ಎಲ್ಲರಿಗೂ ಧನ್ಯವಾದಗಳು. ಇದು ನನ್ನ ಗೆಲುವು ಮಾತ್ರವಲ್ಲ ನಮ್ಮೆಲ್ಲರ ಗೆಲುವು" ಎಂದು ಹೇಳಿದರು.
"ಗುಜರಾತ್ ರಾಜ್ಯದ ಜನತೆ ಬಿಜೆಪಿಯೊಂದಿಗೆ ಇದ್ದಾರೆ, ಬಿಜೆಪಿ ಜೊತೆಯಲ್ಲಿಯೇ ಮುಂದೆಯೂ ಇರುತ್ತಾರೆ. ಕಳೆದ 27 ವರ್ಷಗಳಿಂದ ಗುಜರಾತ್‌ನಲ್ಲಿ ಬಿಜೆಪಿ ಮಾಡಿದ ಅಭಿವೃದ್ಧಿ ಈ ಗೆಲುವಿಗೆ ಕಾರಣ. ಮತ್ತಷ್ಟು ಅಭಿವೃದ್ಧಿಯನ್ನು ಸಾಧಿಸಲು ಜನ ಬಿಜೆಪಿಗೆ ಅವಕಾಶ ನೀಡಿದ್ದಾರೆ." ಎಂದು ರಿವಾಬಾ ಹೇಳಿದ್ದಾರೆ.

ನಮ್ಮ ನಡುವೆ ಬಿರುಕು ಇಲ್ಲ ಎಂದ ನೈನಾ ಜಡೇಜಾ
"ಜಾಮ್‌ನಗರದ ಹಲವಾರು ಕುಟುಂಬಗಳು ವಿವಿಧ ಪಕ್ಷಗಳಲ್ಲಿ ಕೆಲಸ ಮಾಡುವ ಸದಸ್ಯರನ್ನು ಹೊಂದಿವೆ. ನಿಮ್ಮ ಸಿದ್ಧಾಂತದಲ್ಲಿ ನಂಬಿಕೆ ಇಡಬೇಕು. ನಿಮ್ಮ ಶಕ್ತಿಮೀರಿ ಶ್ರಮ ಹಾಕಬೇಕು. ಉತ್ತಮವಾದರು ಗೆಲ್ಲುತ್ತಾರೆ" ಎಂದು ರವೀಂದ್ರ ಜಡೇಜಾ ಸಹೋದರಿ ನೈನಾ ಜಡೇಜಾ ಹೇಳಿದ್ದು, ರಾಜಕೀಯ ಕಾರಣಕ್ಕಾಗಿ ಕುಟುಂಬದಲ್ಲಿ ಬಿರುಕು ಇಲ್ಲ ಎಂದು ಹೇಳಿದ್ದಾರೆ.
"ನನ್ನ ಸಹೋದರ ಮೇಲೆ ಇರುವ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ. ನನ್ನ ಅತ್ತಿಗೆ ಬಿಜೆಪಿ ಅಭ್ಯರ್ಥಿ, ಅತ್ತಿಗೆಯಾಗಿ ಅವರು ನನಗೆ ಒಳ್ಳೆಯವರು" ಎಂದು ನೈನಾ ಜಡೇಜಾ ಹೇಳಿದ್ದಾರೆ.












Click it and Unblock the Notifications