ಗುಜರಾತ್‌ನ 182 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ದಿನಾಂಕ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ
ನವದೆಹಲಿ, ನವೆಂಬರ್ 03: ಗುಜರಾತ್ ವಿಧಾನಸಭೆಯ 182 ಕ್ಷೇತ್ರಗಳಿಗೆ ಚುನಾವಣೆ ನಡೆಸುವುದಕ್ಕೆ ಕೇಂದ್ರ ಚುನಾವಣಾ ಆಯೋಗವು ದಿನಾಂಕವನ್ನು ಘೋಷಿಸಿದೆ. ಎರಡು ಹಂತಗಳಲ್ಲಿ ಚುನಾವಣೆ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಮುಖ್ಯಸ್ಥ ರಾಜೀವ್ ಕುಮಾರ್ ಪ್ರಕಟಿಸಿದ್ದಾರೆ.
ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಡಿಸೆಂಬರ್ 5ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಮತಎಣಿಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮತದಾನಕ್ಕಾಗಿ 1274 ಮತಗಟ್ಟೆಗಳನ್ನು ಸಂಪೂರ್ಣವಾಗಿ ಮಹಿಳಾ ಮತ್ತು ಭದ್ರತಾ ಸಿಬ್ಬಂದಿ ನಿರ್ವಹಿಸುತ್ತಾರೆ. 182 ಮತಗಟ್ಟೆಗಳಿದ್ದು, ಒಂದನ್ನು ಪಿಡಬ್ಲ್ಯೂಡಿ ಸ್ವಾಗತಿಸುತ್ತದೆ. ಮೊದಲ ಬಾರಿಗೆ, 33 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಮತ್ತು ಲಭ್ಯವಿರುವ ಕಿರಿಯ ಮತದಾನ ಸಿಬ್ಬಂದಿಯಿಂದ ನಿರ್ವಹಿಸಲಾಗುತ್ತದೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.

ಮೊದಲ ಹಂತದ ಚುನಾವಣೆ ಬಗ್ಗೆ ವಿವರಣೆ
ಗುಜರಾತ್‌ನ 89 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಸಲಾಗುತ್ತದೆ. ಡಿಸೆಂಬರ್ 1ರಂದು ಮತದಾನ ನಡೆಯಲಿದೆ. ಈ ಸಂಬಂಧ ನವೆಂಬರ್ 5ರಂದು ಅಧಿಸೂಚನೆ ಹೊರಡಿಸಲಾಗಿದೆ. ನಾಮಪತ್ರ ಸಲ್ಲಿಕೆ, ನಾಮಪತ್ರ ವಾಪಸ್ಸಾತಿ, ಮತದಾನ ಮತ್ತು ಮತಎಣಿಕೆ ದಿನಾಂಕ ಈ ರೀತಿಯಾಗಿದೆ.
* ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: ನವೆಂಬರ್ 14, 2022
* ನಾಮಪತ್ರ ಪರಿಶೀಲನೆ: ನವೆಂಬರ್ 15, 2022
* ನಾಮಪತ್ರ ವಾಪಸ್ ಪಡೆಯಲು ಕೊನೆ ದಿನಾಂಕ: ನವೆಂಬರ್ 17, 2022
* ಮತದಾನ ದಿನಾಂಕ: ಡಿಸೆಂಬರ್ 1, 2022
* ಮತಎಣಿಕೆ: ಡಿಸೆಂಬರ್ 8, 2022

ಎರಡನೇ ಹಂತದ ಚುನಾವಣೆ ಬಗ್ಗೆ ವಿವರಣೆ
ಗುಜರಾತ್‌ನ 93 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಸಲಾಗುತ್ತದೆ. ಡಿಸೆಂಬರ್ 5ರಂದು ಮತದಾನ ನಡೆಯಲಿದೆ. ಈ ಸಂಬಂಧ ನವೆಂಬರ್ 10ರಂದು ಅಧಿಸೂಚನೆ ಹೊರಡಿಸಲಾಗಿದೆ. ನಾಮಪತ್ರ ಸಲ್ಲಿಕೆ, ನಾಮಪತ್ರ ವಾಪಸ್ಸಾತಿ, ಮತದಾನ ಮತ್ತು ಮತಎಣಿಕೆ ದಿನಾಂಕ ಈ ರೀತಿಯಾಗಿದೆ.
* ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: ನವೆಂಬರ್ 17, 2022
* ನಾಮಪತ್ರ ಪರಿಶೀಲನೆ: ನವೆಂಬರ್ 18, 2022
* ನಾಮಪತ್ರ ವಾಪಸ್ ಪಡೆಯಲು ಕೊನೆ ದಿನಾಂಕ: ನವೆಂಬರ್ 21, 2022
* ಮತದಾನ ದಿನಾಂಕ: ಡಿಸೆಂಬರ್ 5, 2022
* ಮತಎಣಿಕೆ: ಡಿಸೆಂಬರ್ 8, 2022

ಗುಜರಾತ್ ಸರ್ಕಾರದ ಅವಧಿ 2023ರ ಫೆಬ್ರವರಿಯಲ್ಲಿ ಮುಕ್ತಾಯ
ಗುಜರಾತ್‌ನಲ್ಲಿ ಜಾರಿಯಲ್ಲಿರುವ ಸರ್ಕಾರದ ಅವಧಿಯು 2023ರ ಫೆಬ್ರವರಿ 23ರಂದು ಅಂತ್ಯಗೊಳ್ಳುತ್ತದೆ. ಈ ಹಿನ್ನೆಲೆ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸುವುದಕ್ಕೆ ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಕೆಲವು ತಾಂತ್ರಿಕ ತೊಂದರೆಗಳ ಹಿನ್ನೆಲೆ ಒಂದು ತಿಂಗಳ ಅಂತರದಲ್ಲಿ ಎರಡು ರಾಜ್ಯಗಳ ಚುನಾವಣೆ ನಡೆಸುವುದಕ್ಕೆ ಕೇಂದ್ರ ಆಯೋಗವು ನಿರ್ಧರಿಸಿತ್ತು.

ಕಳೆದ ಬಾರಿಯೂ ಎರಡು ಹಂತಗಳಲ್ಲಿ ಮತದಾನ
ಕಳೆದ 2017ರಲ್ಲಿ ಗುಜರಾತ್‌ನ 182 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆಯನ್ನು ನಡೆಸಲಾಗಿತ್ತು. 2017ರ ಡಿಸೆಂಬರ್ 9ರಂದು ಮೊದಲ ಹಂತ ಮತ್ತು ಡಿಸೆಂಬರ್ 14ರಂದು ಎರಡನೇ ಹಂತದಲ್ಲಿ ಚುನಾವಣೆಯನ್ನು ನಡೆಸಲಾಗಿತ್ತು. ರಾಜ್ಯದ ಒಟ್ಟು 182 ಕ್ಷೇತ್ರಗಳಲ್ಲಿ 13 ಸ್ಥಾನಗಳು ಪರಿಶಿಷ್ಟ ಜಾತಿಗೆ ಹಾಗೂ 27 ಸ್ಥಾನಗಳನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲು ಇರಿಸಲಾಗಿದೆ.












Click it and Unblock the Notifications