Grumpy Frog: ಕಪ್ಪೆಗಳಂತೆ ಜಿಗಿಯಲ್ಲ, ಸದಾ ಸಿಟ್ಟಿನ ಮುಖ! ಈ ವಿಚಿತ್ರ 'ಗ್ರಂಪಿ ಫ್ರಾಗ್' ಕಥೆಯೇನು?
ಮಳೆಗಾಲದಲ್ಲಿ ಎಲ್ಲಿ ನೋಡಿದರೂ ಕಪ್ಪೆಗಳು ಕಾಣಸಿಕೊಳ್ಳುತ್ತವೆ. ಒಂದು ಮಳೆ ಬಿದ್ದರೆ ಸಾಕು ಮಾರನೇ ದಿನವೇ ಕಪ್ಪೆಗಳ ಸದ್ದು, ಜಿಗಿತ ಸಾಮಾನ್ಯ. ಕಪ್ಪೆಗಳಲ್ಲಿಯೂ ಬೇರೆ ಬೇರೆ ಜಾತಿಗೆ ಸೇರಿದ ಕಪ್ಪೆಗಳಿರುತ್ತವೆ. ಬೇರೆ ಬೇರೆ ಬಣ್ಣದ ಕಪ್ಪೆಗಳಿರುತ್ತವೆ. ಅವುಗಳಲ್ಲಿ ಬಲು ವಿಚಿತ್ರವಾದ ಕಪ್ಪೆಯೊಂದಿದೆ. ಅದು ನೋಡುವುದಕ್ಕೆ ಯಾವಾಗಲೂ ಸಿಟ್ಟಿನಿಂದಲೇ ಕೂಡಿರುತ್ತದೆ. ಮುಖ ಊದಿಸಿಕೊಂಡೇ ಇರುವ ಕಪ್ಪೆ ಇದು.
ಹೌದು, ಈ ಕಪ್ಪೆಯನ್ನು ನೋಡಿದಾಗ, ಅದು ಯಾವುದೋ ವಿಚಾರವಾಗಿ ಸಿಟ್ಟು ಮಾಡಿಕೊಂಡು ಅಸಮಾಧಾನಗೊಂಡಂತೆ ಕಾಣುತ್ತದೆ. ಊದಿಸಿಕೊಂಡಿರುವ ಮುಖ, ಸಣ್ಣ ಮೂಗು ಮತ್ತು ಹೊರ ಚಾಚಿಕೊಂಡಿರುವ ನಾಲಗೆ. ಯಾವಾಗ ಈ ಕಪ್ಪೆಯನ್ನು ನೋಡಿದರೂ ಕೋಪದಿಂದ ಸಿಡಿಸಿಡಿಗೊಂಡಂತೆ ಇರುತ್ತದೆ. ಇದೀಗ ಈ ಕಪ್ಪೆಯ ಫೋಟೋಗಳನ್ನು ಇಂಟರ್ನೆಟ್‌ನಲ್ಲಿ ಮೀಮ್ಸ್ ಮತ್ತು ತಮಾಷೆಯ ಪೋಸ್ಟ್‌ಗಳಲ್ಲಿ ಬಳಸಲಾಗ್ತಾ ಇದೆ.

ಸದಾ ಕೋಪದಲ್ಲಿಯೇ ಇರುವುದ್ಯಾಕೆ ಈ ಕಪ್ಪೆ?
ಮಳೆ ಕಪ್ಪೆ ಅಥವಾ ರೈನ್ ಫ್ರಾಗ್ ಈ ರೀತಿ ಕಾಣಿಸುವುದಕ್ಕೆ ಅದರ ದೇಹ ರಚನೆಯೇ ಕಾರಣ. ಬ್ರೆವಿಸೆಪ್ಸ್ ಗುಂಪಿಗೆ ಸೇರಿದ ಈ ಕಪ್ಪೆಗಳು ಸಣ್ಣ ಮತ್ತು ದುಂಡಗಿನ ದೇಹವನ್ನು ಹೊಂದಿವೆ. ಅವುಗಳ ಮೂಗು ಚಿಕ್ಕದಾಗಿದ್ದು, ಬಾಯಿ ಕೆಳಮುಖವಾಗಿ ಇರುವಂತೆ ಕಾಣಿಸಿತ್ತದೆ. ಹೀಗಾಗಿ ಈ ಕಪ್ಪೆ ಯಾವಾಗಲೂ ಕೋಪದಲ್ಲಿಯೇ ಇರುತ್ತವೆ ಎನ್ನುವಂತೆ ಅನ್ನಿಸುತ್ತದೆ. ಆದರೆ, ಇದು ಕೇವಲ ಮಾನವ ಗ್ರಹಿಕೆ. ಕಪ್ಪೆಯು ಯಾವಾಗಲೂ ಮನುಷ್ಯರಂತೆ ಕೋಪ, ಸಂತೋಷ, ಬೇಸರ ಇಂಥಹ ಭಾವನೆಗಳನ್ನು ತೋರಿಸುವುದಿಲ್ಲ. ಅದರ ಮುಖವು ಅದರ ನೈಸರ್ಗಿಕ ರಚನೆಯ ಭಾಗವಾಗಿದೆ. ನಮಗೆ ಮಳೆ ಕಪ್ಪೆಯ ಮುಖ ಕೋಪದಲ್ಲಿ ಇರುವಂತೆ ಕಾಣಿಸಬಹುದು, ಆದರೆ ಅದು ಹಾಗಲ್ಲ ಅವುಗಳ ಮುಖ ಇರುವುದೇ ಹಾಗೆ.
ಮಣ್ಣಿನ ಅಡಿಯಲ್ಲಿಯೇ ಕಾಲ ಕಳೆಯುವ ಜೀವಿ
ಈ ಪುಟ್ಟ ಕಪ್ಪೆಯ ಜೀವನವು ಸಾಮಾನ್ಯ ಕಪ್ಪೆಗಳಿಗಿಂತ ಸ್ವಲ್ಪ ಭಿನ್ನವಾಗಿದೆ. ಇದು ನೆಲದಡಿಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತದೆ. ವಿಶೇಷವಾಗಿ ಶುಷ್ಕ ಋತುಗಳಲ್ಲಿ, ಇದು ಮಣ್ಣಿನ ಅಡಿಯಲ್ಲಿ ಅಡಗಿಕೊಂಡಿರುತ್ತವೆ. ಹೊರಗಿನ ಶಾಖ ಅಥವಾ ಬರದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ.
ಮಳೆಯ ನಂತರ ಅದರ ಪ್ರಪಂಚ ಸಂಪೂರ್ಣವಾಗಿ ಬದಲಾಗುತ್ತದೆ. ಆರ್ದ್ರತೆ ಹೆಚ್ಚಾದಾಗ ಮತ್ತು ಹವಾಮಾನವು ಅನುಕೂಲಕರವಾದಾಗ, ಅದು ನೆಲದಿಂದ ಹೊರಕ್ಕೆ ಬರುತ್ತದೆ. ಆಹಾರವನ್ನು ಹುಡುಕುವುದು, ಸಂಗಾತಿಯನ್ನು ಹುಡುಕುವುದು ಮತ್ತು ಸಂತಾನೋತ್ಪತ್ತಿಯಂತಹ ಚಟುವಟಿಕೆಗಳು ಪ್ರಾರಂಭವಾಗುವ ಸಮಯ ಇದು. ಅದಕ್ಕಾಗಿಯೇ ಮಳೆ ಮತ್ತು ಮಳೆ ಕಪ್ಪೆಯ ನಡುವಿನ ಸಂಪರ್ಕ ತುಂಬಾ ವಿಶೇಷವಾಗಿದೆ. ಮಳೆ ಎನ್ನುವುದು ಈ ಕಪ್ಪೆಗಳಿಗೆ ಹವಾಮಾನ ಬದಲಾವಣೆಯ ಸಂಕೇತವಲ್ಲ, ಚಟುವಟಿಕೆಯ ಸಂಕೇತವಾಗಿದೆ.
ದೂರ ಜಿಗಿಯುವುದಲ್ಲ ಮಣ್ಣನ್ನು ಆಳಕ್ಕೆ ಅಗೆಯುವುದರಲ್ಲಿ ನೈಪುಣ್ಯ
ಸಾಮಾನ್ಯವಾಗಿ ಕಪ್ಪೆ ಎಂದ ಕೂಡಲೇ ತಕ್ಷಣಕ್ಕೆ ಕಣ್ಣ ಮುಂದೆ ಬರುವುದು ಅವುಗಳ ಜಿಗಿತ. ಆದರೆ, ಮೊದಲೇ ಹೇಳಿದ ಹಾಗೆ ಈ ಕಪ್ಪೆ ಬೇರೆ ಕಪ್ಪೆಗಳ ಹಾಗಲ್ಲ. ಇದು ಜಿಗಿಯುವುದಿಲ್ಲ ಬದಲಿಗೆ ಮಣ್ಣನ್ನು ಅಗೆದು ಮಣ್ಣೊಳಗೆ ಅಡಗುವುದರಲ್ಲಿ ಈ ಕಪ್ಪೆ ನೈಪುಣ್ಯ ಪಡೆದಿದೆ. ತನ್ನನ್ನು ತಾನು ಶತ್ರುಗಳಿಂದ ಮತ್ತು ಕಠಿಣ ಹವಾಮಾನದಿಂದ ರಕ್ಷಿಸಲು ಈ ಟ್ರಿಕ್ ಬಳಸುತ್ತದೆ. ದುಂಡುಮುಖವನ್ನು ಇಟ್ಟುಕೊಂಡು ಸೋಮಾರಿಯಂತೆ ಕಾಣುವ ಈ ಕಪ್ಪೆ ಪರಿಸರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.
ಅಪಾಯ ಎದುರಾದಾಗ ಬಲೂನಿನಂತೆ ಊದಿಕೊಳ್ಳುವುದು
ಮಳೆ ಕಪ್ಪೆಯ ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ ಅದರ ರಕ್ಷಣಾ ಕಾರ್ಯವಿಧಾನ. ತನಗೆ ಅಪಾಯ ಎದುರಾಗಿದೆ ಎಂದು ಗೊತ್ತಾಗುತ್ತಿದ್ದ ಹಾಗೆಯೇ ಅದು ತನ್ನ ದೇಹಕ್ಕೆ ಗಾಳಿ ತುಂಬಿಸಿಕೊಳ್ಳುವ ಮೂಲಕ ಊದಿಕೊಳ್ಳುತ್ತದೆ. ಇದು ಅದರ ದೇಹವನ್ನು ಇನ್ನಷ್ಟು ದುಂಡಾಗಿ ಮತ್ತು ದೊಡ್ಡದಾಗಿ ಕಾಣುವಂತೆ ಮಾಡುತ್ತದೆ. ಇದರಿಂದ ಬೇರೆ ಪ್ರಾಣಿಗಳು ಇದನ್ನು ನುಂಗುವುದಕ್ಕೆ ಸ್ವಲ್ಪ ಹೆದರಿಕೊಳ್ಳುತ್ತದೆ.
ಮೊಟ್ಟೆಯಿಂದ ಕಪ್ಪೆಯೇ ಹೊರಬರುವುದು
ಈ ಕಪ್ಪೆಯ ಜೀವನದ ಅತ್ಯಂತ ಆಸಕ್ತಿದಾಯಕ ಅಂಶವೆಂದರೆ ಅದರ ಮರಿಗಳ ಜನನ. ಸಾಮಾನ್ಯವಾಗಿ, ಮೊಟ್ಟೆಯಿಂದ ಟ್ಯಾಡ್ಪೋಲ್ ಹೊರಬರುತ್ತವೆ. ಇವು ನೋಡುವುದಕ್ಕೆ ಮೀನಿನಂತೆ ಕಾಣಿಸುತ್ತದೆ. ನಂತರ ಕ್ರಮೇಣ ಅವುಗಳ ದೇಹದಲ್ಲಿ ಬದಲಾವಣೆಗಳಾಗುತ್ತವೆ. ಅಂತಿಮವಾಗಿ ಸಣ್ಣ ಕಪ್ಪೆಗಳಾಗಿ ಬದಲಾಗುತ್ತವೆ. ಆದರೆ, ಕೆಲವು ಮಳೆ ಕಪ್ಪೆ ಪ್ರಭೇದಗಳ ವಿಷಯದಲ್ಲಿ ಹಾಗಲ್ಲ. ಈ ಮರಿಗಳು ಮೊಟ್ಟೆಯೊಳಗೆ ತಮ್ಮ ಬೆಳವಣಿಗೆಯನ್ನು ಪೂರ್ಣಗೊಳಿಸುತ್ತವೆ. ಮೊಟ್ಟೆಯಿಂದ ನೇರವಾಗಿ ಸಣ್ಣ ಕಪ್ಪೆಗಳೇ ಹೊರ ಬರುತ್ತವೆ.
ಈ ಮಳೆ ಕಪ್ಪೆಯ ಫೋಟೋ ಜನರನ್ನು ನಗಿಸಬಹುದು. ಆದರೆ ಅದರ ನೈಜ ಕಥೆ ಸಾಕಷ್ಟು ಆಸಕ್ತಿದಾಯಕವಾಗಿದೆ. ಇದು ಯಾವಾಗಲೂ ಕೋಪದಿಂದಲೇ ಇರುವ ಕಪ್ಪೆಯಲ್ಲ ಬದಲಿಗೆ ನೈಸರ್ಗಿಕ ದೇಹದ ಆಕಾರವೇ ಹಾಗಿದೆ. ಇಂಟರ್ನೆಟ್‌ನಲ್ಲಿ ಇದು ಗ್ರಂಫಿ ಫ್ರಾಗ್ ಎಂದೇ ವೈರಲ್ ಆಗುತ್ತಿದೆ. ಮಣ್ಣಿನಡಿಯಲ್ಲಿ ವಾಸ, ಮಳೆ ಬಿದ್ದ ನಂತರ ಮಾತ್ರ ಹೊರಹೊಮ್ಮುವುದು, ಅಪಾಯ ಎದುರಾದಾಗ ದೇಹವನ್ನು ಉಬ್ಬಿಸುವುದು, ಮೊಟ್ಟೆಯಿಂದ ಕಪ್ಪೆಯೇ ಹೊರ ಬರುವುದು ಇವೆಲ್ಲವೂ ಅದನ್ನು ಇತರ ಸಾಮಾನ್ಯ ಕಪ್ಪೆಗಳಿಂದ ಭಿನ್ನವಾಗಿಸುತ್ತದೆ.


Click it and Unblock the Notifications
