ಶೌಚಾಲಯ ನಿರ್ಮಾಣಕ್ಕೆ ನೀಡುವ ಸಹಾಯಧನ ಹೆಚ್ಚಳ
ನವದೆಹಲಿ, ಆ.27 : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನಕ್ಕೆ ಅನುಕೂಲವಾಗುವಂತೆ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಿಸಲು ನೀಡುತ್ತಿದ್ದ ಸಹಾಯಧನವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಮನೆ, ಶಾಲೆ, ಮತ್ತು ಅಂಗನವಾಡಿಗಳಲ್ಲಿ ನಿರ್ಮಾಣವಾಗುವ ಶೌಚಾಲಯಗಳಿಗೆ ನೀಡುವ ಸಹಾಯಧನ ಹೆಚ್ಚಾಗಲಿದೆ.
ಕೇಂದ್ರ ಸರ್ಕಾರ ಈ ಕುರಿತ ಯೋಜನೆ ಸಿದ್ಧಪಡಿಸುತ್ತಿದ್ದು, ಮನೆಯ ಶೌಚಾಲಯ ನಿರ್ಮಾಣಕ್ಕೆ ನೀಡುವ ಸಹಾಯಧನವನ್ನು ರೂ 10 ಸಾವಿರದಿಂದ 15 ಸಾವಿರಕ್ಕೆ, ಶಾಲಾ ಶೌಚಾಲಯ ನಿರ್ಮಾಣಕ್ಕೆ ನೀಡುವ ಅನುದಾನವನ್ನು 35 ಸಾವಿರದಿಂದ ರೂ 54 ಸಾವಿರಕ್ಕೆ, ಅಂಗನವಾಡಿ ಶೌಚಾಲಯಕ್ಕೆ ನೀಡುವ ಮೊತ್ತವನ್ನು 8 ಸಾವಿರದಿಂದ 20 ಸಾವಿರಕ್ಕೆ ಮತ್ತು ಸಮುದಾಯ ಶೌಚಾಲಯ ನಿರ್ಮಾಣಕ್ಕೆ ನೀಡುವ ಹಣವನ್ನು ರೂ 2 ಲಕ್ಷದಿಂದ ರೂ 6 ಲಕ್ಷಕ್ಕೆ ಏರಿಸುವ ಪ್ರಸ್ತಾಪವಿದೆ.

ರಾಜ್ಯಗಳಿಗೆ ಸೂಚನೆ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೇಳಿದಂತೆ ದೇಶದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ್ದಾರೆ.[ಸ್ವಚ್ಛ ಭಾರತ ಕನಸಿಗೆ ಕೈ ಜೋಡಿಸಿದ ಟಿಸಿಎಸ್]
ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯ ಹೆಚ್ಚುವರಿ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಸಚಿವ ನಿತಿನ್ ಗಡ್ಕರಿ ಅವರು ಸಹ ಶೌಚಾಲಯ ನಿರ್ಮಾಣ ಕಾರ್ಯಕ್ರಮವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಪ್ರತ್ಯೇಕಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. [ಕೆಂಪುಕೋಟೆ ಮೇಲಿನ ನರೇಂದ್ರ ಮೋದಿ ಭಾಷಣದಲ್ಲೇನಿತ್ತು?]


Click it and Unblock the Notifications
