ಎಲ್‌ಪಿಜಿ ಸಬ್ಸಿಡಿ: ಉಜ್ವಲ ಯೋಜನೆ ಫಲಾನುಭವಿಗಳಿಗೆ ಭರ್ಜರಿ ಕೊಡುಗೆ ನೀಡಿದ ಕೇಂದ್ರ ಸರ್ಕಾರ
ಲೋಕಸಭಾ ಚುನಾವಣೆಗೆ ಮುನ್ನ, ಉಜ್ವಲ ಯೋಜನೆಯಡಿ ಬಡ ಮಹಿಳೆಯರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಪ್ರತಿ ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿಯನ್ನು ಏಪ್ರಿಲ್ 1 ರಿಂದ ಮುಂದಿನ ಆರ್ಥಿಕ ವರ್ಷಕ್ಕೆ ವಿಸ್ತರಿಸುವುದಾಗಿ ಸರ್ಕಾರ ಗುರುವಾರ ಘೋಷಿಸಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸರ್ಕಾರವು ಪ್ರತಿ ವರ್ಷಕ್ಕೆ 12 ಗೃಹ ಬಳಕೆ ಸಿಲಿಂಡರ್‌ಗಳಿಗೆ ₹ 200 ರಿಂದ ₹ 300 ಕ್ಕೆ ಹೆಚ್ಚಿಸಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರತಿ ಸಿಲಿಂಡರ್‌ಗೆ ₹300 ಸಬ್ಸಿಡಿ ನೀಡಲಾಗಿದ್ದು, ಇದು ಮಾರ್ಚ್ 31ಕ್ಕೆ ಕೊನೆಗೊಳ್ಳುತ್ತದೆ.

ಈ ಸಬ್ಸಿಡಿಯನ್ನು 2024-25ರವರೆಗೆ ವಿಸ್ತರಿಸಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸುದ್ದಿಗಾರರಿಗೆ ತಿಳಿಸಿದರು.
10 ಕೋಟಿ ಕುಟುಂಬಗಳಿಗೆ ಅನುಕೂಲ
ಈ ಕ್ರಮದಿಂದ ಸುಮಾರು 10 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದ್ದು, ಸರ್ಕಾರಕ್ಕೆ ₹12,000 ಕೋಟಿ ವೆಚ್ಚವಾಗಲಿದೆ. ಏಪ್ರಿಲ್-ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ.
ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (LPG), ಶುದ್ಧ ಅಡುಗೆ ಇಂಧನವನ್ನು ಗ್ರಾಮೀಣ ಮತ್ತು ವಂಚಿತ ಬಡ ಕುಟುಂಬಗಳಿಗೆ ಲಭ್ಯವಾಗುವಂತೆ ಮಾಡಲು, ಬಡ ಕುಟುಂಬಗಳ ವಯಸ್ಕ ಮಹಿಳೆಯರಿಗೆ ಠೇವಣಿ-ಮುಕ್ತ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸಲು ಸರ್ಕಾರವು ಮೇ 2016 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅನ್ನು ಪ್ರಾರಂಭಿಸಿತು.
ಸಂಪರ್ಕವನ್ನು ಉಚಿತವಾಗಿ ನೀಡಲಾಗಿದ್ದರೂ, ಫಲಾನುಭವಿಗಳು ಮಾರುಕಟ್ಟೆ ಬೆಲೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಗಳನ್ನು ಖರೀದಿಸಬೇಕಾಗಿತ್ತು.
ಇಂಧನ ಬೆಲೆಗಳು ಗಗನಕ್ಕೇರುತ್ತಿದ್ದಂತೆ, ಸರ್ಕಾರವು ಮೇ 2022 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ ₹200 ಸಬ್ಸಿಡಿಯನ್ನು ಒದಗಿಸಿತು. ಅಕ್ಟೋಬರ್ 2023 ರಲ್ಲಿ ಈ ಮೊತ್ತವನ್ನು ₹300 ಕ್ಕೆ ಹೆಚ್ಚಿಸಲಾಯಿತು.
ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಸರ್ಕಾರವು ಆಗಸ್ಟ್ ಅಂತ್ಯದಲ್ಲಿ ಅಡುಗೆ ಅನಿಲ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ ₹ 200 ರಷ್ಟು ಕಡಿತಗೊಳಿಸಿತ್ತು. ಇದಾದ ಬಳಿಕ ಎಲ್‌ಪಿಜಿ ಸಿಲಿಂಡರ್ ಬೆಲೆ ₹903ಕ್ಕೆ ಇಳಿದಿತ್ತು.
ಉಜ್ವಲ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ ಸಬ್ಸಿಡಿಗೆ ₹300 ಪರಿಗಣಿಸಿ ₹603 ಬೆಲೆ ಇದ್ದು, ನೇರವಾಗಿ ಸಂಪರ್ಕದಾರರ ಬ್ಯಾಂಕ್ ಖಾತೆಗೆ ಪಾವತಿಸಲಾಗಿದೆ.












Click it and Unblock the Notifications