ಹೊಸ ಸೈಬರ್ ಕ್ರೈಮ್ ಟ್ರೆಂಡ್, ಈ ನಂಬರ್‌ನಿಂದ ವಾಟ್ಸಾಪ್ ಕರೆ ಬರುತ್ತಿದೆಯೇ, ಎಚ್ಚರವಾಗಿರಿ!
ಪ್ರಸ್ತುತ ವಂಚಕರು ಜನರನ್ನು ವಂಚನೆ ಮಾಡಲು ಹಲವಾರು ಮಾರ್ಗಗಳನ್ನು ಹೊಂದಿದ್ದಾರೆ. ಹೊಸ ಹೊಸ ತಂತ್ರಗಳನ್ನು ವಂಚಕರು ಅಳವಡಿಸಿಕೊಳ್ಳುತ್ತಿದ್ದಾರೆ. ನಾವು ಎಂದಿಗೂ ಕೂಡಾ ಆಲೋಚನೆ ಮಾಡಲು ಸಾಧ್ಯವಾಗದ ದಾರಿಗೆ ಈಗಾಗಲೇ ವಂಚಕರು ಇಲಿದಾಗಿದೆ. ಈ ಆನ್‌ಲೈನ್, ಸೈಬರ್ ವಂಚನೆಗಳ ಆತಂಕದ ನಡುವೆ ಕೆಲವು ಸಂಖ್ಯೆಯಿಂದ ವಾಟ್ಸಾಪ್ ಕರೆ ಬರುತ್ತಿದ್ದರೆ ಎಚ್ಚರವಾಗಿರಿ.
ಕೇಂದ್ರ ಗೃಹ ಇಲಾಖೆಯ ಇಂಡಿಯನ್ ಸೈಬರ್‌ಕ್ರೈಮ್ ಕಾರ್ಡಿನೇಷನ್ ಸೆಂಟರ್ (I4C) ವಾಟ್ಸಾಪ್ ಕರೆ, ಮೆಸೇಜ್, ಸಾಮಾನ್ಯ ಕರೆ, ಮೆಸೇಜ್ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ಪ್ರಮುಖವಾಗಿ +254, +84, +63 ಅಂಕಿಯಿಂದ ಆರಂಭವಾಗುವ ಮೊಬೈಲ್ ಸಂಖ್ಯೆಯಿಂದ ಅಥವಾ ಇತರೆ ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಗಳಿಂದ ಕರೆ ಬರುತ್ತಿದ್ದರೆ ಎಚ್ಚರವಾಗಿರುವಂತೆ ತಿಳಿಸಿದೆ.

ಈ ಸೈಬರ್ ವಂಚನೆಗೆ ಜನರು ಬಲಿಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅಲರ್ಟ್ ಅನ್ನು ಹೊರಡಿಸಿದೆ. ಈ ನಡುವೆ ಇಂತಹ ಸಂಖ್ಯೆಯಿಂದ ಕರೆ ಅಥವಾ ಮೆಸೇಜ್ ಬಂದಲ್ಲಿ ಜನರು ರಿಪೋರ್ಟ್ ಮಾಡುವಂತೆ ಮತ್ತು ಈ ಸಂಖ್ಯೆಯನ್ನು ಬ್ಲಾಕ್ ಮಾಡುವಂತೆ ತಿಳಿಸಿದೆ. ಹಾಗೆಯೇ ಮೊದಲು ರಿಪೋರ್ಟ್ ಮಾಡಿ ಬ್ಲಾಕ್ ಮಾಡಿ ಎಂದು ತಿಳಿಸಿದೆ.
ಈ ವಂಚನೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಹಲವಾರು ತಜ್ಞರುಗಳು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಈ ಅಂತಾರಾಷ್ಟ್ರೀಯ ಸಂಖ್ಯೆಗಳು ಸಿಂಗಾಪುರ, ವಿಯೇಟ್ನಾಂ, ಮಲೇಷಿಯಾಕ್ಕೆ ಸೇರಿದ್ದು ಆಗಿರುತ್ತದೆ. ಈ ವಂಚಕರು ನಿಮ್ಮನ್ನು ಅವರ ಬಲೆಗೆ ಸಿಲುಕಿಸಿಕೊಂಡು ನಿಮ್ಮ ಹಣಕಾಸು ಸಂಬಂಧಿತ ಮಾಹಿತಿಗಳನ್ನು ಕದಿಯಬಹುದು ಎಂದು ತಜ್ಞರು ಹೇಳಿದ್ದಾರೆ.
ಇದು ಹೊಸ ಸೈಬರ್ ಕ್ರೈಮ್ ಟ್ರೆಂಡ್
"ಇದು ಸೈಬರ್ ಕ್ರೈಮ್‌ನ ಹೊಸ ಟ್ರೆಂಡ್ ಆಗಿದೆ. ದೇಶದಲ್ಲಿ ಹಲವಾರು ಮಂದಿಗೆ ಈ ಕರೆ ಬಂದಿದೆ. ಯಾವುದೇ ನಿಗದಿತ ವೃತ್ತಿಯವರನ್ನು ಈ ವಂಚಕರು ಟಾರ್ಗೆಟ್ ಮಾಡುತ್ತಿಲ್ಲ. ವಾಟ್ಸಾಪ್ ಮೂಲಕ +254, +84, +63, +1(218) ಅಥವಾ ಇತರೆ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಕರೆ ಬರುತ್ತಿದೆ. ಈ ಪೈಕಿ ಕೆಲವರು ವಂಚನೆಗೆ ಒಳಗಾಗಿದ್ದಾರೆ. ಈ ವಂಚನೆಯು ಹೆಚ್ಚಳವಾಗುತ್ತಾ ಸಾಗುತ್ತಿದೆ," ಎಂದು ಎಎನ್‌ಐಗೆ ಸೈಬರ್ ಕ್ರೈಮ್ ತಜ್ಞರುಗಳು ತಿಳಿಸಿದ್ದಾರೆ.
ಸರ್ಕಾರದೊಂದಿಗೆ ಕಾರ್ಯನಿರ್ವಹಣೆ ಮಾಡುವ, ಸೈಬರ್ ಇಂಟಲಿಜೆನ್ಸ್ ಮತ್ತು ಡಿಜಿಟಲ್ ಪಾರೆನ್ಸಿಕ್‌ನ ತಜ್ಞರು, (ತನ್ನ ಹೆಸರನ್ನು ಉಲ್ಲೇಖಿಸಲು ಬಯಸದ) ಇಂತಹ ಕರೆ ಬಂದಾಗ ಜನರು ಏನು ಮಾಡಬೇಕು ಎಂದು ತಿಳಿಸಿದ್ದಾರೆ. ಇಂತಹ ವಂಚನೆಯ ಕರೆಗಳು ಬಂದಾಗ, +254, +84, +63 ಅಥವಾ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಕರೆ ಬಂದಾಗ ಜನರು ಆ ಸಂಖ್ಯೆಯನ್ನು ರಿಪೋರ್ಟ್ ಮಾಡಿ, ಬ್ಲಾಕ್ ಮಾಡಬೇಕು," ಎಂದು ಮಾಹಿತಿ ನೀಡಿದ್ದಾರೆ.
"ಜನರಲ್ಲಿ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ಇರುವುದು ಅತೀ ಮುಖ್ಯವಾಗಿದೆ. ಈ ವಂಚನೆಗಳ ಬಗ್ಗೆ ಜನರಲ್ಲಿ ಮಾಹಿತಿ ಇದ್ದರೆ, ವಂಚನೆಯನ್ನು ತಡೆಯಲು ಸಾಧ್ಯವಾಗುತ್ತದೆ," ಎಂದು ಅಧಿಕಾರಿಗಳು ಹೇಳುತ್ತಾರೆ. ಇನ್ನು ತಜ್ಞರ ಮಾಹಿತಿ ಪ್ರಕಾರ ಮೇಲೆ ತಿಳಿಸಲಾದ ಸಂಖ್ಯೆಯಿಂದ ಆರಂಭವಾಗುವ ಕರೆಗಳು ಯಾವುದೇ ಸಂದರ್ಭದಲ್ಲಿ ಬರಬಹುದು. ಯಾವುದೇ ಸಮಯ ಎಂಬುವುದು ಈ ವಂಚಕರಿಗೆ ಇಲ್ಲ.
"ಮುಂಜಾನೆ ಸುಮಾರು 6-7 ಗಂಟೆಯಲ್ಲಿ, ಅಥವಾ ತಡರಾತ್ರಿಯಲ್ಲಿ ಹೆಚ್ಚಾಗಿ ಈ ಕರೆಗಳು ಜನರಿಗೆ ಬಂದಿದೆ. ಯಾವುದೇ ಉದ್ಯೋಗವನ್ನು ಮಾಡುತ್ತಿದ್ದರೂ ಅವರಿಗೆ ಈ ಸಮಯದಲ್ಲೇ ಹೆಚ್ಚಾಗಿ ಕರೆ ಬಂದಿದೆ. ಖಾಸಗಿ- ಸರ್ಕಾರಿ ಉದ್ಯೋಗಿಗಳು, ವ್ಯಾಪಾರಿಗಳು, ನಿವೃತ್ತ ಸರ್ಕಾರಿ ಅಧಿಕಾರಿಗಳು, ಶಾಲಾ ಮಕ್ಕಳು, ಶಿಕ್ಷಕರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಮಂದಿಗೆ ಈ ಕರೆಗಳು ಬಂದಿದೆ. ಈ ಕರೆಯ ಬಗ್ಗೆ ನಾವು ಎಚ್ಚರವಾಗಿರುವುದು ಮುಖ್ಯ," ಎಂದು ತಜ್ಞರು ಹೇಳಿದ್ದಾರೆ.












Click it and Unblock the Notifications