ಮುಸ್ಲಿಮರು ಗರ್ಬಾ - ದಾಂಡಿಯಾ ನೃತ್ಯ ಮಾಡಿದರೆ ತಪ್ಪೇನು: ಮಹಾ ಸಿಎಂ ಪತ್ನಿ ಅಮೃತಾ ಫಡ್ನವೀಸ್ ಪ್ರಶ್ನೆ!
Garba-Dandiya VHP: ದೇಶದಲ್ಲಿ ಕಳೆದ ಒಂದು ವಾರದಿಂದಲೂ ಗರ್ಬಾ ಮತ್ತು ದಾಂಡಿಯಾ ನೃತ್ಯದಲ್ಲಿ ಮುಸ್ಲಿಮರು ಭಾಗವಹಿಸುವ ಬಗ್ಗೆ ಹೊಸ ಚರ್ಚೆ ನಡೆದಿದೆ. ಈ ಕಾರ್ಯಕ್ರಮಗಳಲ್ಲಿ ಮುಸಲ್ಮಾನರು ಭಾಗವಹಿಸಬಾರದು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಿಷೇಧಿಸಿದೆ. ಗರ್ಬಾ ಹಾಗೂ ದಾಂಡಿಯಾದಲ್ಲಿ ಮುಸ್ಲಿಮರು ಹಲವು ವರ್ಷಗಳಿಂದ ಭಾಗವಹಿಸುತ್ತಿದ್ದಾರೆ.
ಈ ವಿಚಾರದಲ್ಲಿ ವಿರೋಧವೇಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದರೆ, ಇನ್ನೂ ಕೆಲವರು ಈ ನಿರ್ಧಾರ ಸರಿಯಾಗಿದೆ. ಆ ಸಮುದಾಯವು ಮೂರ್ತಿಗಳ ಆರಾಧನೆ ಮಾಡುವುದಿಲ್ಲ. ಹೀಗಾಗಿ, ಕೃಷ್ಣ ಜನ್ಮಾಷ್ಟಮಿ ಹಾಗೂ ನವರಾತ್ರಿಯ ಸಂದರ್ಭದಲ್ಲಿ ಗರ್ಬಾ ಮತ್ತು ದಾಂಡಿಯಾ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಲ್ಲಿ ಅರ್ಥವೂ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಮೊದಲು ಪಶ್ಚಿಮ ಬಂಗಾಳದಲ್ಲಿ ಪ್ರಾರಂಭವಾದ ಈ ಚರ್ಚೆಯು ಇದೀಗ ಮಹಾರಾಷ್ಟ್ರಕ್ಕೂ ವ್ಯಾಪಿಸಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಅವರು ಗರ್ಬಾ ಮತ್ತು ದಾಂಡಿಯಾ ನೃತ್ಯದಲ್ಲಿ ಮುಸ್ಲಿಮರು ಭಾಗವಹಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಮಹಾ ಸಿಎಂ ಪತ್ನಿ ಅಮೃತಾ ಫಡ್ನವೀಸ್ ಹೇಳಿದ್ದೇನು
ನವರಾತ್ರಿಗೆ ಇನ್ನೂ ಎರಡು ತಿಂಗಳುಗಳು ಬಾಕಿ ಇರುವಾಗಲೇ ದೇಶದಾದ್ಯಂತ ಹೊಸದೊಂದು ವಿವಾದ ತಲೆಎತ್ತಿದೆ. ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ತೆಗೆದುಕೊಂಡ ನಿರ್ಧಾರಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಮುಸ್ಲಿಮರನ್ನು ಗರ್ಬಾ ಮತ್ತು ದಾಂಡಿಯಾ ನೃತ್ಯ ಕಾರ್ಯಕ್ರಮಗಳಿಂದ ದೂರವಿರಿಸುವಂತೆ ವಿಎಚ್‌ಪಿ ಕರೆ ನೀಡಿದೆ. ಮಹಾರಾಷ್ಟ್ರದಲ್ಲಿ ಗರ್ಬಾ ಮತ್ತು ದಾಂಡಿಯಾ ಆಚರಣೆಗಳು ಈಗಾಗಲೇ ವಿವಾದಾತ್ಮಕ ರಾಜಕೀಯ ವಿಷಯವಾಗಿ ಬದಲಾಗಿದೆ.
ಆದಾಗ್ಯೂ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಬ್ಬಗಳು ಎಲ್ಲರನ್ನೂ ಒಳಗೊಳ್ಳುತ್ತವೆ ಮತ್ತು ಮುಸ್ಲಿಮರು ಗರ್ಬಾ ತ್ತು ದಾಂಡಿಯಾ ಆಚರಣೆಗಳಲ್ಲಿ ಭಾಗವಹಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಅಕ್ಟೋಬರ್ 11 ರಂದು ನವರಾತ್ರಿ ಪ್ರಾರಂಭವಾಗಲಿದೆ. ಈ ವಿಷಯದ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಿಜೆಪಿ ನಾಯಕ ಮತ್ತು ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವ ನಿತೇಶ್ ರಾಣೆ ಅವರು ಗರ್ಬಾ ಮತ್ತು ದಾಂಡಿಯಾ ನಡೆಯುವ ಸ್ಥಳಗಳಲ್ಲಿ ಮುಸ್ಲಿಮರನ್ನು ನಿರ್ಬಂಧಿಸಬೇಕು ಎನ್ನುವ ವಿಚಾರವನ್ನು ಸಮರ್ಥಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಮುಂಬೈ ಮಹಾನಗರ ಪ್ರದೇಶದಲ್ಲಿ ದಂಡಿಯಾ ಮತ್ತು ಗರ್ಬಾ ಬಹಳ ಜನಪ್ರಿಯವಾಗಿವೆ. ಈ ನೃತ್ಯ ಗುಜರಾತಿ ಸಮುದಾಯದಲ್ಲಿ ಜನಪ್ರಿಯವಾಗಿದ್ದರೂ, ಕಳೆದ ಕೆಲವು ದಶಕಗಳಲ್ಲಿ, ಮುಂಬೈನಲ್ಲಿ ನವರಾತ್ರಿಯ ಸಮಯದಲ್ಲಿ ಇದು ಅತಿದೊಡ್ಡ ಚಟುವಟಿಕೆಗಳಲ್ಲಿ ಒಂದಾಗಿದೆ.
ಎರಡು ದಿನಗಳ ಹಿಂದೆ, ಗರ್ಬಾ ಮತ್ತು ದಾಂಡಿಯಾ ಆಚರಣೆಗಳಿಂದ ಮುಸ್ಲಿಮರನ್ನು ನಿಷೇಧಿಸಲು ವಿಎಚ್‌ಪಿ ಕರೆ ನೀಡಿತ್ತು ಮತ್ತು ಭಾಗವಹಿಸುವವರ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಲು ಮತ್ತು ಅವರ ಹಣೆಯ ಮೇಲೆ ತಿಲಕ ಹಚ್ಚಬೇಕು ಎಂದು ಕರೆ ನೀಡಲಾಗಿತ್ತು.
ನವರಾತ್ರಿ ಹಬ್ಬದ ಸಮಯದಲ್ಲಿ ಮುಸ್ಲಿಮರು ಗರ್ಬಾ-ದಾಂಡಿಯಾ ನೃತ್ಯದಲ್ಲಿ ಭಾಗವಹಿಸಲು ಅವಕಾಶ ನೀಡದಿರಲು ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ನವರಾತ್ರಿ ಕೇವಲ ಹಾಡುಗಳು ಮತ್ತು ನೃತ್ಯಗಳ ಬಗ್ಗೆ ಅಲ್ಲ. ಈ ಹಬ್ಬವು ದೇವಿಯನ್ನು ಪೂಜಿಸುವ ಬಗ್ಗೆ. ಮೂರ್ತಿಪೂಜೆಯನ್ನು ವಿರೋಧಿಸುವ ಮುಸ್ಲಿಮರು ಉತ್ಸವದಲ್ಲಿ ಏಕೆ ಭಾಗವಹಿಸಬೇಕು ಎಂದು ವಿಎಚ್‌ಪಿ ವಕ್ತಾರ ಮತ್ತು ಜಂಟಿ ಕಾರ್ಯದರ್ಶಿ ಶ್ರೀರಾಜ್ ನಾಯರ್ ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ ಅವರ ಪುತ್ರ ರಾಣೆ, ಆಧಾರ್ ಕಾರ್ಡ್ ಪರಿಶೀಲನೆ ಮತ್ತು ತಿಲಕ ಹಾಕುವುದರ ಜೊತೆಗೆ, ಸಂದರ್ಶಕರಿಗೆ ಹನುಮಾನ್ ಚಾಲೀಸಾವನ್ನು ಪಠಿಸಲು ಕೇಳಬೇಕು ಎಂದು ಹೇಳುವ ಮೂಲಕ ವಿಎಚ್‌ಪಿ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.


Click it and Unblock the Notifications
