ಕಳ್ಳತನ ಮಾಡಲು ವೇತನ, ಉಚಿತ ಊಟ, ಪ್ರಯಾಣ ಭತ್ಯೆ: ಬೆಚ್ಚಿಬಿದ್ದ ಪೊಲೀಸರು
ಲಕ್ನೋ, ಜನವರಿ 02: ಹೊಸದಾಗಿ ಸೇರ್ಪಡೆಯಾದವರಿಗೆ ತರಬೇತಿ, ಉಚಿತ ಊಟ, ಪ್ರಯಾಣ ಭತ್ಯೆ, ನಿಗದಿತ ಮಾಸಿಕ ವೇತನ....ಇದು ಯಾವುದೇ ಸಂಸ್ಥೆಯಾಗಲಿ, ಖಾಸಗಿ ಕಂಪನಿಯಾಗಲಿ ನೌಕರರಿಗೆ ಕೊಡುತ್ತಿರುವ ಸೌಲಭ್ಯಗಳಲ್ಲ. ಇಂತಹ ಒಂದು ಮೊಬೈಲ್ ಕಳ್ಳತನ ಮಾಡುವ ತಂಡವನ್ನು ಪತ್ತೆ ಹಚ್ಚಿದ ಪೊಲೀಸರು ಈಗ ವಿವರಗಳನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.
ಉತ್ತರ ಪ್ರದೇಶದ ಗೋರಖ್‌ಪುರದ ರೈಲ್ವೆ ಪೊಲೀಸರು ಮೊಬೈಲ್ ಕಳ್ಳರನ್ನು ಹಿಡಿದಿದ್ದರು. ಅವರನ್ನು ವಿಚಾರಣೆ ನಡೆಸಿದಾಗ ಇದು ಒಂದು ತಂಡ ಕೃತ್ಯ ಎಂಬುದು ಬಯಲಿಗೆ ಬಂದಿತ್ತು. ತಂಡದ ಇನ್ನಷ್ಟು ಜನರನ್ನು ಕರೆತಂದು ಬೆಂಡತ್ತಿದಾಗ ಅಚ್ಚರಿಯ ವಿಚಾರಗಳು ಬಹಿರಂಗವಾಗಿವೆ.

ಈ ಮೊಬೈಲ್ ಫೋನ್ ಕದಿಯುವ ತಂಡದ ನಾಯಕ ಮನೋಜ್ ಮಂಡಲ್. ಈ ತಂಡದ ಕರಣ್ ಕುಮಾರ್, ಕುಮಾರ್ ಬಂಧಿಸಿದಾಗ ಈ ಗುಂಪಿನ ವಿವರಗಳು ಬಯಲಿಗೆ ಬಂದಿದೆ. ಸದ್ಯ 10 ಲಕ್ಷ ರೂ. ಮೌಲ್ಯದ 44 ಮೊಬೈಲ್ ಫೋನ್, ಪಿಸ್ತೂಲ್, ಚಾಕುವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಾಸಿಕ ನಿಗದಿತ ವೇತನ: ಜನನಿಬೀಡ ಪ್ರದೇಶಗಳಲ್ಲಿ ಮೊಬೈಲ್ ಫೋನ್ ಕದಿಯುವುದೇ ಮನೋಜ್ ಮಂಡಲ್ ತಂಡದ ಕೆಲಸ. ಇದಕ್ಕಾಗಿ ಅವರು ಕಳ್ಳರಿಗೆ ತರಬೇತಿ, ಮಾಸಿಕ ವೇತನ, ಪ್ರಯಾಣ ಭತ್ಯೆ, ಉಚಿತ ಊಟವನ್ನು ನೀಡುತ್ತಿದ್ದರು. ಈ ಗುಂಪಿನ ಕಾರ್ಯವೈಖರಿ ನೋಡಿ ಪೊಲೀಸರು ಇದು ಕಳ್ಳರ ಗ್ಯಾಂಗ್ ಅಥವ ಖಾಸಗಿ ಕಂಪನಿಯೋ? ಎಂದು ಅಚ್ಚರಿಗೊಂಡಿದ್ದಾರೆ.
ಮನೋಜ್ ಮಂಡಲ್ ಗ್ರಾಮೀಣ ಭಾಗದಲ್ಲಿ ಸರಿಯಾಗಿ ಓದದ ಯುವಕರನ್ನು ಗುರುತಿಸಿ ಅವರನ್ನು ಕರೆತಂದು ಮೊಬೈಲ್ ಕಳ್ಳತನ ಮಾಡಲು 3 ತಿಂಗಳ ತರಬೇತಿ ನೀಡುತ್ತಿದ್ದ. ಬಳಿಕ ಅವರನ್ನು ರೈಲು ನಿಲ್ದಾಣ, ಮಾರುಕಟ್ಟೆ, ಬಸ್ ನಿಲ್ದಾಣ ಹೀಗೆ ಜನ ಹೆಚ್ಚಿರುವ ಪ್ರದೇಶದಲ್ಲಿ ಮೊಬೈಲ್ ಕದಿಯಲು ನಿಯೋಜನೆ ಮಾಡುತ್ತಿದ್ದ.
ತರಬೇತಿ ಪಡೆದ ಯುವಕರಿಗೆ ಮಾಸಿಕ 15 ಸಾವಿರ ರೂ. ವೇತನ ನೀಡಲಾಗುತ್ತಿತ್ತು. ಸ್ಮಾರ್ಟ್ ಫೋನ್ ಕದಿಯುವುದೇ ಈ ಗ್ಯಾಂಗಿನ ಕೆಲಸವಾಗಿದೆ. ಗ್ಯಾಂಗ್‌ನವರಿಗೆ ಉಚಿತವಾಗಿ ಊಟ ನೀಡಲಾಗುತ್ತಿತ್ತು. ಬೇರೆ ಪ್ರದೇಶಕ್ಕೆ ಹೋಗಿ ಕಳ್ಳತನ ಮಾಡಲು ಪ್ರಯಾಣ ಭತ್ಯೆಯನ್ನು ಸಹ ನೀಡುತ್ತಿದ್ದ.
ಗೋರಖ್‌ಪುರದ ರೈಲ್ವೆ ಪೊಲೀಸರು ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಪಿಂಚಣಿ, ಪಿಆಫ್ ಖಾತೆ ಎರಡು ಬಾಕಿ ಇದೆ ಎಂದು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಉದ್ಯೋಗ ಇರುವ ಕಳ್ಳರು, ಉತ್ತರ ಪ್ರದೇಶ ಮಾದರಿ ಉದ್ಯೋಗ ನೀಡುವುದು, ಕಾರ್ಪೊರೇಟ್ ಕಳ್ಳತನ ಎಂದು ಕಮೆಂಟ್‌ಗಳನ್ನು ಮಾಡಿದ್ದಾರೆ. ಇನ್ನೂ ಹಲವರು ಈ ಗುಂಪಿಗೆ ಸೇರಲು ಅರ್ಜಿ ಎಲ್ಲಿ ಸಿಗುತ್ತದೆ? ಎಂದು ಕಮೆಂಟ್ ಹಾಕಿದ್ದಾರೆ.
ಟೆಕ್ಕಿಯೊಬ್ಬರು, 'ಈ ಮನೋಜ್ ಮಂಡಲ್ ಗುಂಪಿನ ಹೆಚ್‌ಆರ್ ನೀತಿ ನಮ್ಮ ಕಂಪನಿಗಿಂತ ಚೆನ್ನಾಗಿದೆ' ಎಂದು ಹೇಳಿದ್ದಾರೆ. 35 ವರ್ಷದ ಮನೋಜ್ ಮಂಡಲ್ ಮೂಲತಃ ಜಾರ್ಖಂಡ್ ರಾಜ್ಯದವನು. ಆದರೆ ಆತ ಗೋರಖ್‌ಪುರದಲ್ಲಿ ವಾಸವಾಗಿದ್ದು ಕೊಂಡು ಇಂತಹ ಗುಂಪು ಕಟ್ಟಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ಪೊಲೀಸರು ಮನೋಜ್ ಮಂಡಲ್ ವಿರುದ್ಧ 4, 19 ವರ್ಷದ ಕರಣ್ ಕುಮಾರ್ ವಿರುದ್ಧ 2 ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಈ ಗುಂಪಿನ ಕುಮಾರ್‌ಗೆ ಇನ್ನೂ 15 ವರ್ಷ.
ಗೋರಖ್‌ಪುರ ಎಸ್‌ಪಿ ಸಂದೀಪ್ ಕುಮಾರ್ ಮೀನಾ ಮಾತನಾಡಿ, "ಮನೋಜ್ ಮಂಡಲ್ ಈ ಗುಂಪಿನ ಕಿಂಗ್ ಪಿನ್. ತರಬೇತಿ ನಂತರ ಅವರಿಗೆ ಚಿಕ್ಕ ಚಿಕ್ಕ ಟಾರ್ಗೆಟ್ ನೀಡಲಾಗುತ್ತಿತ್ತು. ಅದನ್ನು ಯಶಸ್ವಿಯಾಗಿ ಪೂರೈಸಿದ ಬಳಿಕ ಅವರನ್ನು ದೊಡ್ಡ ದೊಡ್ಡ ಪ್ರದೇಶಗಳಲ್ಲಿ ಕಳ್ಳತನಕ್ಕೆ ನಿಯೋಜನೆ ಮಾಡಲಾಗುತ್ತಿತ್ತು" ಎಂದು ಹೇಳಿದ್ದಾರೆ.












Click it and Unblock the Notifications